ಚೆನ್ನೈ : ತಮಿಳು ನಾಡಿನ ಥೇಣಿ ಜಿಲ್ಲೆಯಲ್ಲಿ ಮತದಾರರಿಗೆ ಹಂಚುವುದಕ್ಕೆಂದು ಶೇಖರಿಸಿಡಲಾಗಿದ್ದ 1.48 ಕೋಟಿ ರೂ. ನಗದನ್ನು ತಾನು ಇಂದು ಬುಧವಾರ ವಶಪಡಿಸಿಕೊಂಡಿರುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ.
ಥೇಣಿ ವಿಧಾನಸಭಾ ಕ್ಷೇತ್ರಕ್ಕೆ ಇದೇ ಎ.18ರ ಗುರುವಾರ ಉಪ ಚುನಾವಣೆ ನಡೆಯಲಿದೆ.
“ನಾವು ವಶಪಡಿಸಿಕೊಂಡಿರುವ 1.48 ಕೋಟಿ ರೂ.ನಗದನ್ನು 94 ಪ್ಯಾಕೆಟ್‌ಗಳಲ್ಲಿ ಅಚ್ಚುಕಟ್ಟಾಗಿ ಪ್ಯಾಕ್ ಮಾಡಲಾಗಿತ್ತು ಮತ್ತು ಅವುಗಳ ಮೇಲೆ ವಾರ್ಡ್ ನಂಬ್ರ, ಮತದಾರರ ಸಂಖ್ಯೆ ಮತ್ತು ತಲಾ ಮತದಾರರಿಗೆ 300 ರೂ. ಎಂದು ಬರೆದಿತ್ತು’ ಎಂದು ಐಟಿ ಮಹಾ ನಿರ್ದೇಶಕ (ತನಿಖೆ) ಬಿ ಮುರಳೀ ಕುಮಾರ್ ತಿಳಿಸಿದರು.
ರಾತ್ರಿ ಪೂರ್ತಿ ನಡೆದ ಐಟಿ ದಾಳಿ ಇಂದು ನಸುಕಿನ 5.30ರ ವೇಳೆಗೆ ಮುಗಿದ ಬಳಿಕ ಮಾಧ್ಯಮಕ್ಕೆ ಅವರು ಈ ಮಾಹಿತಿ ಮಾಡಿದರು.
ನಗದು ಪ್ಯಾಕ್ ಮೇಲಿನ ಎಲ್ಲ ವಾರ್ಡ್‌ಗಳು ಅಂಡಿಪಟ್ಟಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದು ನಾಳೆ ಗುರುವಾರ ಎ.18ರಂದು ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ ಎಂದವರು ಹೇಳಿದರು.