Advertisement
ತಮಿಳುನಾಡಿನಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರ ಮನೆಗಳನ್ನು ಗುರಿಯಾಗಿಸಿಕೊಂಡು ಏಳು ಕಡೆಗಳಲ್ಲಿ ದಾಳಿ ನಡೆಸಿದೆ.
Related Articles
ಸೇಲಂ ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರೊಬ್ಬರ ನಿವಾಸದ ಮೇಲೆ ಸೀಮೆ ಎಣ್ಣೆ ತುಂಬಿದ ಬಾಟಲಿಯನ್ನು ಎಸೆಯಲಾಗಿದೆ. ಇಬ್ಬರು ವ್ಯಕ್ತಿಗಳು ಸೀಮೆ ಎಣ್ಣೆ ತುಂಬಿದ ಬಾಟಲಿಯನ್ನು ಅವರ ಮನೆಯ ಬಾಗಿಲಲ್ಲಿ ಇರಿಸಿದ್ದರು. ಪ್ರಕರಣದ ಬಗ್ಗೆ ಕೇಸು ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಪಿಎಫ್ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಬಂಧನ ಖಂಡಿಸಿ ಎಸ್‌ಡಿಪಿಐ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಪೊಲೀಸ್ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.
Advertisement
ಸಿಸಿಟಿವಿ ದೃಶ್ಯಾವಳಿಯಲ್ಲಿ ಇಬ್ಬರು ವ್ಯಕ್ತಿಗಳು ಆರ್‌ಎಸ್‌ಎಸ್ ಮುಖಂಡರ ನಿವಾಸದ ಸುತ್ತ ಸಂಶಯಾಸ್ಪದವಾಗಿ ತಿರುಗಾಡುತ್ತಾ ಇದ್ದದ್ದು ದೃಢಪಟ್ಟಿದೆ. ಕೂಡಲೇ ಅವರು ಸೀಮೆ ಎಣ್ಣೆ ತುಂಬಿದ ಬಾಟಲಿಯನ್ನು ಮನೆಯ ಬಾಗಿಲಲ್ಲಿ ಇರಿಸಿದ್ದು ಕಂಡುಬಂದಿದೆ.
ದಾಖಲೆ ಪತ್ತೆ:ಇನ್ನೊಂದೆಡೆ, ಕೋಲ್ಕತಾದಲ್ಲಿ ಇರುವ ಪಿಎಫ್ಐ ಕಚೇರಿಯ ಮೇಲೆ ಎನ್‌ಐಎ ಶನಿವಾರ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಹಲವಾರು ದಾಖಲೆಗಳು, ಮೊಬೈಲ್ ಫೋನ್‌ಗಳು, ಬಂಗಾಳಿ ಭಾಷೆಯಲ್ಲಿ ಮುದ್ರಿಸಲಾಗಿರುವ ಕೈಪಿಡಿಯನ್ನು ವಶಪಡಿಸಿಕೊಳ್ಳಲಾಗಿದೆ. “ಒಂದಲ್ಲ ಒಂದು ದಿನ ಬಾಬರಿ ಎದ್ದೇಳಲಿದೆ’ ಎಂದು ಅರೆಬಿಕ್, ಉರ್ದು ಭಾಷೆಯಲ್ಲಿ ಬರೆಯಲಾಗಿರುವ ಅಂಶಗಳು ಪತ್ತೆಯಾಗಿವೆ. ಜತೆಗೆ ಆರ್‌ಎಸ್‌ಎಸ್, ಇ.ಡಿ.ದೂಷಿಸಿರುವ ಬರಹಗಳೂ ಲಭ್ಯವಾಗಿವೆ. ಕಣ್ಣೂರಲ್ಲಿ ಪೊಲೀಸರ ದಾಳಿ
ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಪಿಎಫ್ಐ ಸಂಘಟನೆಯ ಜತೆಗೆ ಗುರುತಿಸಿಕೊಂಡಿದೆ ಎಂದು ಹೇಳಲಾಗಿರುವ ಹಲವು ಮಳಿಗೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಮಳಿಗೆಗಳಿಂದ ಲ್ಯಾಪ್‌ಟಾಪ್ ಗಳು, ಸಿಪಿಯು, ಮೊಬೈಲ್ ಫೋನ್‌ಗಳು, ಹಣಕಾಸು ವಹಿವಾಟು ನಡೆಸಲಾಗಿದೆ ಎಂದು ಹೇಳಲಾಗಿರುವ ಬಗ್ಗೆ ಹಲವು ದಾಖಲೆಗಳನ್ನು ಈ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದೆ. ಕೇರಳದಲ್ಲಿ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸಲು ಪಿಎಫ್ಐ ಮುಂದಾಗಿದೆ ಎಂದು ಖುದ್ದು ಸಿಎಂ ಪಿಣರಾಯಿ ವಿಜಯನ್ ಆರೋಪಿಸಿದ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದಿದೆ. ಪೊಲೀಸರ ಎಚ್ಚರಿಕೆ:
ಹಿಂದೂ ಮುಖಂಡರ ಮೇಲೆ ದಾಳಿ ನಡೆಸಿ, ಕಿಡಿಗೇಡಿತನದ ಕೃತ್ಯಗಳನ್ನು ನಡೆಸುವವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿಯಲ್ಲಿ ಕೇಸು ದಾಖಲಿಸುವ ಬಗ್ಗೆ ತಮಿಳುನಾಡು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ತಮಿಳುನಾಡಿನ ಮದುರೈ, ಸೇಲಂ, ಕನ್ಯಾಕುಮಾರಿಯಲ್ಲಿ ಹಿಂದೂ ಮುಖಂಡರ ನಿವಾಸದ ಮೇಲೆ ದಾಳಿ ನಡೆಸಿದ ಪ್ರಕರಣ ನಡೆದಿದ್ದು, ತನಿಖೆಯೂ ಮುಂದುವರಿದಿದೆ. 250ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಲಾಗಿದೆ. ಜತೆಗೆ ಹಲವರನ್ನು ಬಂಧಿಸಲಾಗಿದೆ ಎಂದು ತಮಿಳುನಾಡು ಡಿಜಿಪಿ ಸಿ.ಶೈಲೇಂದ್ರ ಬಾಬು ಎಚ್ಚರಿಸಿದ್ದಾರೆ. ದಾಳಿಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೊಯಮತ್ತೂರಿನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆ, ತಮಿಳುನಾಡು ಪೊಲೀಸ್ ಪಡೆಯ ವಿಶೇಷ ಕಮಾಂಡೋ ಪಡೆಗಳನ್ನು ನಗರದ ಆಯಕಟ್ಟಿನ ಸ್ಥಳದಲ್ಲಿ ನಿಯೋಜಿಸಲಾಗಿದೆ. ಪಿಎಫ್ಐ ಮೇಲೆ ಎನ್‌ಐಎ ದಾಳಿ ನಡೆಸಿದ ಬಳಿಕ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಲಾಗುತ್ತಿದೆ. ತಮಿಳುನಾಡು ಪೊಲೀಸರು ಏನು ಕ್ರಮ ಕೈಗೊಂಡಿದ್ದಾರೆ.
-ಕೆ.ಅಣ್ಣಾಮಲೈ, ತಮಿಳುನಾಡು ಬಿಜೆಪಿ ಅಧ್ಯಕ್ಷ