ಚೆನ್ನೈ : ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ವಿರುದ್ಧ ಬೆದರಿಸುವ ಮತ್ತು ನಿಂದನೀಯ ಹೇಳಿಕೆ ನೀಡಿರುವ ಡಿಎಂಕೆ ನಾಯಕ ಶಿವಾಜಿ ಕೃಷ್ಣಮೂರ್ತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುವಂತೆ ತಮಿಳುನಾಡು ರಾಜ್ಯಪಾಲರ ಉಪ ಕಾರ್ಯದರ್ಶಿ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದಾರೆ.
ಆಡಳಿತಾರೂಢ ಡಿಎಂಕೆ ನಾಯಕ ಶಿವಾಜಿ ಕೃಷ್ಣಮೂರ್ತಿ ತಮಿಳುನಾಡು ರಾಜ್ಯಪಾಲರ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗುತ್ತಿದೆ ಎಂದು ರಾಜಭವನ ಚೆನ್ನೈನ ಪೊಲೀಸ್ ಆಯುಕ್ತರಿಗೆ (ಸಿಪಿ) ಬರೆದ ಪತ್ರದಲ್ಲಿ ತಿಳಿಸಿದೆ. “ವೀಡಿಯೊದಲ್ಲಿ, ಶಿವಾಜಿ ಕೃಷ್ಣಮೂರ್ತಿ ಅವರು ತಮಿಳುನಾಡಿನ ಗೌರವಾನ್ವಿತ ರಾಜ್ಯಪಾಲರ ವಿರುದ್ಧ ಅಶ್ಲೀಲ, ನಿಂದನೀಯ, ಮಾನಹಾನಿಕರ ಮತ್ತು ಬೆದರಿಸುವ ಭಾಷೆಯನ್ನು ಬಳಸುತ್ತಿದ್ದಾರೆ” ಎಂದು ರಾಜ್ಯಪಾಲರ ಉಪ ಕಾರ್ಯದರ್ಶಿ ಚೆನ್ನೈ ಸಿಪಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಅಣ್ಣಾಮಲೈ ಕಿಡಿ
ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಪ್ರತಿಕ್ರಿಯಿಸಿ ”ಡಿಎಂಕೆ ಯಾವಾಗಲೂ ನಿಂದನೀಯ ರಾಜಕೀಯವನ್ನು ಬಳಸುತ್ತದೆ, ಅವರು ಯಾವಾಗಲೂ ಪ್ರಧಾನಿ ಮೋದಿ ಸೇರಿದಂತೆ ಉನ್ನತ ವೃತ್ತಿಪರರನ್ನು ನಿಂದಿಸಿದ್ದಾರೆ. ನಾವು ತಮಿಳುನಾಡು ಡಿಜಿಪಿಗೆ ಪತ್ರ ಬರೆದಿದ್ದೇವೆ ಮತ್ತು ತಕ್ಷಣ ಕ್ರಮ ಕೈಗೊಳ್ಳುವಂತೆ ಕೋರಿದ್ದೇವೆ.ಪೊಲೀಸರ ಕೈಗಳನ್ನು ಕಟ್ಟಲಾಗಿದೆ, ಸ್ಥಳೀಯ ಡಿಎಂಕೆ ನಾಯಕರು ಪೊಲೀಸ್ ಠಾಣೆಗಳನ್ನು ತಮ್ಮ ಸ್ವಂತ ಕಚೇರಿಗಳಂತೆ ಪರಿಗಣಿಸುತ್ತಾರೆ. ಯಾರೂ ಕ್ಷಮೆಯಾಚಿಸಿಲ್ಲ, ಎಫ್‌ಐಆರ್ ದಾಖಲಾಗಿಲ್ಲ ಎಂಬ ಕಾರಣಕ್ಕೆ ಸಿಎಂ ಸ್ಟಾಲಿನ್ ಬಂದು ಸ್ಪಷ್ಟನೆ ನೀಡಬೇಕು. ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಕಿಡಿ ಕಾರಿದ್ದಾರೆ.
ಶಿವಾಜಿ ಕೃಷ್ಣಮೂರ್ತಿ ಅವರು ಸಭೆಯೊಂದರಲ್ಲಿ ರಾಜ್ಯಪಾಲರಾದ ಆರ್.ಎನ್.ರವಿ ಅವರ ಮೇಲೆ ಆಕ್ರೋಶ ಹೊರ ಹಾಕುವ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ರಾಜ್ಯಪಾಲರನ್ನು ನಿಂದಿಸಬೇಡಿ ಎಂದು ಸಿಎಂ ಹೇಳುತ್ತಿದ್ದಾರೆ. ಅವರು ಭಾಷಣವನ್ನು ಸರಿಯಾಗಿ ಓದಿದ್ದರೆ ನಾನು ಅವರ ಕಾಲಿಗೆ ಹೂವುಗಳನ್ನು ಇಟ್ಟು ಕೈಮುಗಿದು ಧನ್ಯವಾದ ಹೇಳುತ್ತಿದ್ದೆ. ಆದರೆ ಅಂಬೇಡ್ಕರ್ ಹೆಸರು ಹೇಳಲು ನಿರಾಕರಿಸಿದರೆ ಚಪ್ಪಲಿಯಿಂದ ಹೊಡೆಯುವ ಹಕ್ಕು ನನಗಿಲ್ಲವೇ? ನೀವು ಅಂಬೇಡ್ಕರ್ ಹೆಸರನ್ನು ಹೇಳಲು ನಿರಾಕರಿಸಿದರೆ, ನೀವು ಕಾಶ್ಮೀರಕ್ಕೆ ಹೋಗಿ. ನಿಮಗೆ ಗುಂಡಿಕ್ಕಿ ಮುಗಿಸಲು ನಾವು ಒಬ್ಬ ಭಯೋತ್ಪಾದಕನನ್ನು ಕಳುಹಿಸುತ್ತೇವೆ” ಹೇಳಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.