ಚೆನ್ನೈ : ತಮಿಳು ನಾಡಿನಲ್ಲಿ ನಡೆಯುತ್ತಿರುವ ರಾಜಕೀಯ ಪ್ರಹಸನಕ್ಕೆ ಹೊಸ ತಿರುವು ಸಿಗುವ ಇನ್ನೊಂದು ಸೂಚನೆ ಎಂಬಂತೆ ಇಂದು ಗುರುವಾರ ರಾಜ್ಯಪಾಲ ವಿದ್ಯಾಸಾಗರಾವ್ ಅವರು ಚೆನ್ನೈ ತಲುಪಲಿದ್ದು ಎಐಎಡಿಎಂಕೆ ಮುಖ್ಯಸ್ಥೆ ಶಶಿಕಲಾ ನಟರಾಜನ್ ಅವರನ್ನು ಭೇಟಿಯಾಗಲಿರುವುದಾಗಿ ತಿಳಿದು ಬಂದಿದೆ.
ಪ್ರಭಾರ ಮುಖ್ಯಮಂತ್ರಿ ಓ ಪನ್ನೀರ ಸೆಲ್ವಂ ಹಾಗೂ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ಅವರು ಆಳುವ ಪಕ್ಷದಲ್ಲಿ ತಮಗೇ ಬಹುಮತವಿದೆ ಎಂದು ಹೇಳಿಕೊಳ್ಳುತ್ತಿರುವಂತೆಯೇ ಉಭಯತರೊಳಗಿನ ಜಟಾಪಟಿ ತಾರಕಕ್ಕೇರಿದೆ.
ಈ ನಡುವೆ ಪನ್ನೀರಸೆಲ್ವಂ ತಾನು ಪಕ್ಷದ ಕೋಶಾಧಿಕಾರಿಯಾಗಿರುವುದರಿಂದ ತನ್ನ ಅನುಮತಿ ಇಲ್ಲದೇ ಯಾವುದೇ ಹಣಕಾಸು ವ್ಯವಹಾರ ನಡೆಯಲು ಬಿಡಕೂಡದು ಎಂದು ಬ್ಯಾಂಕುಗಳಿಗೆ ಪತ್ರ ಬರೆದಿದ್ದಾರೆ.
ಇಂದು ಮಧ್ಯಾಹ್ನ ಸುಮಾರು 2 ಗಂಟೆಯ ಹೊತ್ತಿಗೆ ರಾಜ್ಯಪಾಲ ವಿ ವಿದ್ಯಾಸಾಗರ ರಾವ್ ಅವರು ಎಐಎಡಿಎಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಮತ್ತು ಪಕ್ಷದ ಶಾಸಕರನ್ನು ಭೇಟಿಯಾಗಲಿರುವರೆಂದು ತಿಳಿದುಬಂದಿದೆ. ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ಇಂದು ಮಧ್ಯಾಹ್ನ 12.10ರ ಸುಮಾರಿಗೆ ಮುಂಬಯಿಯಿಂದ ಹೊರಡುವ ನಿರೀಕ್ಷೆ ಇದೆ.
ಇದೇ ವೇಳೆ ತಮಿಳು ನಾಡು ಸರಕಾರ ಮಾಜಿ ಮುಖ್ಯ ಕಾರ್ಯದರ್ಶಿ ಗಣದೇಶಿಕನ್ ಮತ್ತು ಐಎಎಸ್ ಅತುಲ್ ಆನಂದ್ ಅವರ ಮೇಲಿನ ಅಮಾನತನ್ನು ತೆರವುಗೊಳಿಸಿದೆ.