ಚೆನ್ನೈ: ತಮಿಳು ನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಸಾವಿನ ನಿಗೂಢತೆಯನ್ನು ಲಂಡನ್ ವೈದ್ಯರು ಕೊನೆಗೂ ಅನಾವರಣಗೊಳಿಸಿದ್ದಾರೆ.
ಜಯಲಲಿತಾ ನಿಧನ ಹೊಂದಿದ ಸುಮಾರು 60 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಲಂಡನ್ ವೈದ್ಯರು ಆಕೆಯ ಸಾವಿಗೆ ಕಾರಣವಾದ ಸಂಗತಿಯನ್ನು ಬಹಿರಂಗಪಡಿಸಲು ಪತ್ರಿಕಾ ಗೋಷ್ಠಿ ನಡೆಸಿ “ಜಯಾ ಅವರ ರಕ್ತದಲ್ಲಿನ ವಿಷಕಾರಿ ಅಂಶಗಳು ಹೃದಯವನ್ನು ಸೇರಿಕೊಂಡ ಪ್ರಯುಕ್ತ ಆಕೆಗೆ ಹೃತ್ ಕ್ರಿಯೆ ನಿಂತು ಸಾವು ಸಂಭವಿಸಿತ್ತು’ ಎಂದು ಹೇಳಿದ್ದಾರೆ.
ಜಯಲಲಿತಾ ಅವರು ತೀವ್ರವಾದ ಸೋಂಕಿನಿಂದ ಬಳಲುತ್ತಿದ್ದರು; ಆಕೆಯ ದೇಹದಲ್ಲಿನ ರಕ್ತ ಕೆಟ್ಟು ಹೋಗಿತ್ತು. ಮೇಲಾಗಿ ಆಕೆಯನ್ನು ಅನೇಕ ವರ್ಷಗಳಿಂದ ಬಾಧಿಸುತ್ತಿದ್ದ ಡಯಾಬಿಟಿಸ್ ಕಾಯಿಲೆ ತೀವ್ರಗೊಂಡಿತ್ತು ಎಂದು ಜಯಾಗೆ ಚಿಕಿತ್ಸೆ ನೀಡುತ್ತಿದ್ದ ಲಂಡನ್ ವೈದ್ಯ ಡಾ. ರಿಚರ್ಡ ಬೀಲೆ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಜಯಲಲಿತಾ ಬಹುತೇಕ ಗುಣಮುಖರಾಗಿದ್ದು ಶೀಘ್ರವೇ ಆಸ್ಪತ್ರೆಯಿಂದ ಬಿಡುಗಡೆಗೊಂಡು ತಮ್ಮ ನಿತ್ಯ ಕಾರ್ಯಗಳಲ್ಲಿ ಈ ಹಿಂದಿನಂತೆಯೇ ತೊಡಗಿಕೊಳ್ಳಲಿದ್ದಾರೆ ಎಂಬ ವೈದ್ಯಕೀಯ ವರದಿಗಳು ಬರುತ್ತಿದ್ದಂತೆಯೇ ಜಯಾ ಸಾವು ಹಠಾತ್ತನೇ ಸಂಭವಿಸಿತ್ತು. ಹಾಗಾಗಿ ಆಕೆಯ ಸಾವು ನಿಗೂಢವೆಂದೇ ಎಲ್ಲೆಡೆ ಶಂಕಿಸಲಾಗಿತ್ತು. ಈ ಶಂಕೆಯನ್ನು ನಿವಾರಿಸುವ ನಿಟ್ಟಿನಲ್ಲಿ ಈ ಸ್ಪಷ್ಟನೆ ನೀಡುತ್ತಿರುವುದಾಗಿ ಡಾ. ರಿಚರ್ಡ್ ಬೀಲೆ ಹೇಳಿದರು.
ಜಯಲಲಿತಾ ನಿಧನದ ಬಳಿಕ ಆಕೆಯ ಪರಮ ವಿಶ್ವಾಸಿ ಬಂಟ ಓ ಪನ್ನೀರಸೆಲ್ವಂ ಮುಖ್ಯಮಂತ್ರಿಯಾಗಿ ಮುಂದುವರಿದು ಈಗ ಒಂದು ದಿನದ ಹಿಂದಷ್ಟೇ ಅವರು ತಮ್ಮ ಸ್ಥಾನವನ್ನು ಚಿನ್ನಮ್ಮ ಶಶಿಕಲಾ ಅವರಿಗಾಗಿ ಬಿಟ್ಟುಕೊಟ್ಟಿದ್ದಾರೆ. ಈ ಬೆನ್ನಲ್ಲೇ ಲಂಡನ್ ವೈದ್ಯರು ಜಯಾ ಸಾವಿನ ನಿಗೂಢತೆಯ ಹಿಂದಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.