ಚೆನ್ನೈ : ತಮಿಳು ನಾಡು ಕಳೆದ 140 ವರ್ಷಗಳಲ್ಲೇ ಘೋರ ಎನಿಸಿರುವ ಜಲ ಕ್ಷಾಮಕ್ಕೆ ಗುರಿಯಾಗಿದ್ದು, ಚೆನ್ನೈ ಮಹಾನಗರ ಕಳೆದ ಕೆಲವು ತಿಂಗಳಿಂದ ಕುಡಿಯುವ ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿದೆ.
ಮಹಾನಗರದಲ್ಲಿನ ಎಲ್ಲ ನಾಲ್ಕು ಕರೆಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ನಗರಕ್ಕೆ ಕುಡಿಯುವ ನೀರಿನ ಪೂರೈಕೆ ಪ್ರಮಾಣವನ್ನು ಶೇ.50ರಷ್ಟು ಕಡಿತಗೊಳಿಸಲಾಗಿದೆ.
ಚೆನ್ನೈ ನಗರಕ್ಕೆ ದಿನಂಪ್ರತಿ 83 ಕೋಟಿ ಲೀಟರ್ ಕುಡಿಯುವ ನೀರಿನ ಅಗತ್ಯವಿದೆ. ಕಳೆದ ಕೆಲವು ದಿನಗಳಿಂದ ಇದರ ಅರ್ಧದಷ್ಟು ಮಾತ್ರವೇ ನಗರಕ್ಕೆ ಪೂರೈಕೆಯಾಗುತ್ತಿದೆ. ನಗರದಲ್ಲಿ ಜನರಿಗೆ ಕುಡಿಯುವ ನೀರನ್ನು ಪೂರೈಸಲು 300 ವಾಟರ್ ಟ್ಯಾಂಕರ್‌ಗಳನ್ನು ಬಳಸಲಾಗುತ್ತಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಚೆನ್ನೈಗೆ ಬೃಹತ್ ಕೊಳವೆಗಳ ಮೂಲಕ ನೀರು ಪೂರೈಕೆಯಾಗುವ, ಸುಮಾರು 200 ಕಿ.ಮೀ. ದೂರದಲ್ಲಿರುವ, ನೈವೇಲಿಯ ವೀರನಂ ಕೆರೆಯು ಸಂಪೂರ್ಣವಾಗಿ ಬತ್ತಿ ಹೋಗಿದೆ.
ಇದೇ ಪೈಪ್ ಲೈನ್ ಮೂಲಕ, ಇತರ ವಿವಿಧ ಜಲ ಮೂಲಗಳಿಂದ ದಿನಕ್ಕೆ 9 ಕೋಟಿ ಲೀಟರ್ ನೀರನ್ನು ತರಿಸಿಕೊಳ್ಳುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದ್ದಾರೆ.
ದಿನಕ್ಕೆ 7.5 ಲಕ್ಷ ಲೀಟರ್ ನೀರಿನ ಅಗತ್ಯವಿರುವ ನಗರದ ಎಗ್‌ಮೋರ್ ರೈಲ್ವೇ ಸ್ಟೇಶನ್ ಈ ತಿಂಗಳ ಆದಿಯಿಂದ ನೀರಿನ ತೀವ್ರ ಕೊರತೆಯನ್ನು ಅನುಭವಿಸುತ್ತಿದೆ.
ಚೆನೈ ನಗರದ ಅಂತರ್ಜಲ ಮರು ಪೂರಣವನ್ನು ನಗರದ 60 ಕಿ.ಮೀ. ಪರಿಧಿಯಲ್ಲಿರುವ ಐದು ಕೆರೆಗಳು ಮಾಡುತ್ತಿದ್ದು ಅವೆಲ್ಲವೂ ಈಗ ಬತ್ತಿ ಹೋಗಿರುವುದರಿಂದ ನೀರಿನ ತೀವ್ರ ಹಾಹಾಕಾರ ನಗರದಲ್ಲಿ ಉಂಟಾಗಿದೆ. 2105ರಲ್ಲಿ ಅಕಾಲಿಕ ಮಳೆಯಿಂದಾಗಿ ಈ ಕೆರೆಗಳು ಉಕ್ಕಿ ಹರಿದು ಚೆನ್ನೈ ನಗರದಲ್ಲಿ ಪ್ರವಾಹವನ್ನು ಸೃಷ್ಟಿಸಿದ್ದವು.