ಚೆನ್ನೈ: ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 14ರವರೆಗೆ ಕೋವಿಡ್ ಲಾಕ್ ಡೌನ್ ವಿಸ್ತರಿಸಲು ನಿರ್ಧರಿಸಿರುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಶನಿವಾರ(ಜೂನ್ 05) ತಿಳಿಸಿದ್ದಾರೆ. ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸ್ಟಾಲಿನ್ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಕೋವಿಡ್ ನಿಂದಾಗಿ ಝೂಗಳಿಗೆ ಸಂಕಷ್ಟ:ಪ್ರಾಣಿ ದತ್ತು ಪಡೆಯುವಂತೆ ದರ್ಶನ್ ಕರೆ
ದೇಶದಲ್ಲಿ ತಮಿಳುನಾಡು ಸೇರಿದಂತೆ ಐದು ರಾಜ್ಯಗಳಲ್ಲಿ ಅತೀ ಹೆಚ್ಚು ಕೋವಿಡ್ 19 ಸೋಂಕು ಪ್ರಕರಣಗಳಿವೆ. ಕಳೆದ 24ಗಂಟೆಗಳಲ್ಲಿ 22,651 ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿತ್ತು. ಇಡೀ ದೇಶದಲ್ಲಿ ಪತ್ತೆಯಾಗುವ ಹೊಸ ಪ್ರಕರಣಗಳಲ್ಲಿ ಶೇ.18.79ರಷ್ಟು ತಮಿಳುನಾಡಿನಿಂದ ವರದಿಯಾಗುತ್ತಿದೆ ಎಂದು ತಿಳಿಸಿದೆ.
ಅತೀ ಕಡಿಮೆ ಕೋವಿಡ್ ಪ್ರಕರಣ ಹೊಂದಿರುವ 11 ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ಇದರಲ್ಲಿ ಕೊಯಂಬತ್ತೂರು, ನೀಲ್ ಗಿರಿ, ತಿರುಪ್ಪುರ್, ಈರೋಡ್, ಸೇಲಂ, ಕರೂರ್, ನಾಮಕ್ಕಾಲ್, ತಂಜಾವೂರು, ತಿರುವರೂರ್, ನಾಗಪಟ್ಟಣಂ ಮತ್ತು ಮೈಲಾಡುದುರೈ ಸೇರಿದೆ.
ಹನ್ನೊಂದು ಜಿಲ್ಲೆಗಳಲ್ಲಿ ಬೆಳಗ್ಗೆ 6ಗಂಟೆಯಿಂದ ಸಂಜೆ 5ಗಂಟೆವರೆಗೆ ದಿನಸಿ ಅಂಗಡಿ, ತರಕಾರಿ, ಮೀನು ಮತ್ತು ಮಾಂಸದ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಅದೇ ರೀತಿ ರಸ್ತೆಬದಿಯಲ್ಲಿ ತರಕಾರಿ, ಹಣ್ಣು, ಹೂ ಮಾರಾಟ ಮಾಡುವವರಿಗೆ ಅನುಮತಿ ನೀಡಲಾಗಿದೆ ಎಂದು ವರದಿ ತಿಳಿಸಿದೆ.