Advertisement

ತಮಿಳುನಾಡಿನಲ್ಲಿ ಭ್ರಷ್ಟರಿಗೆ ಅಗ್ರಪೂಜೆ

03:50 AM Feb 22, 2017 | |

ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಹಿಂದಿನ ಮುಖ್ಯಮಂತ್ರಿ ಓ.ಪನ್ನೀರ್‌ಸೆಲ್ವಂ ಪದೇ ಪದೇ “ಅಮ್ಮನ ಆಡಳಿತವನ್ನು ಮುಂದುವರಿಸುತ್ತೇವೆ’ ಎಂದು ಜಪಿಸುವುದನ್ನು ನೋಡುವಾಗ ಸಾರ್ವಜನಿಕ ಜೀವನದಲ್ಲಿ ದಟ್ಟವಾಗಿ ವ್ಯಾಪಿಸಿರುವ ಭ್ರಷ್ಟಾಚಾರದ ಬಗ್ಗೆ ಕಳವಳ ಹೊಂದಿರುವವರಿಗೆ ಚಿಂತೆಯಾಗಬಹುದು.

Advertisement

ಎರಡು ತಿಂಗಳ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ತೀರಿಕೊಂಡ ಸಂದರ್ಭದಲ್ಲಿ ಇದೇ ಅಂಕಣದಲ್ಲಿ ಆಕೆಯ ಭ್ರಷ್ಟಾಚಾರ ಮತ್ತು ಅಹಂಕಾರವನ್ನು ಬದಿಗಿಟ್ಟರೆ ಆಡಳಿತವನ್ನು ಮೆಚ್ಚಿಕೊಳ್ಳುತ್ತಿದ್ದೆ ಎಂದು ಬರೆದಿದ್ದೆ. ಆ ದಿನಗಳಲ್ಲಿ ಕೇಂದ್ರದ ಎನ್‌ಡಿಎ ನಾಯಕರೂ ಸೇರಿದಂತೆ ಇಡೀ ದೇಶ ಜಯಲಲಿತಾ ಆಡಳಿತದ ಗುಣಗಾನ ಮಾಡುತ್ತಿತ್ತು. ಹಂಗಾಮಿ ಮುಖ್ಯಮಂತ್ರಿಯಾಗಿದ್ದ ಓ.ಪನ್ನೀರ್‌ಸೆ‌ಲ್ವಂ ನೇತೃತ್ವದ ಸರಕಾರ ಜಯಲಲಿತಾಗೆ ಮರಣೋತ್ತರವಾಗಿ ಭಾರತ ರತ್ನ ನೀಡಲು ಮತ್ತು ಸಂಸತ್ತಿನಲ್ಲಿ ಅವರ ಪ್ರತಿಮೆ ಸ್ಥಾಪಿಸಲು ಕೇಂದ್ರವನ್ನು ಒತ್ತಾಯಿಸಿತು. ಡಿಎಂಕೆ ಹಿರಿಯ ನಾಯಕ ಹಾಗೂ ಜಯಲಲಿತಾರ ಬದ್ಧ ವೈರಿ ಎಂ.ಕರುಣಾನಿಧಿ ಮಾತ್ರ ನಾಯಕಿಯ ಸಾವಿಗೆ ಪ್ರತಿಕ್ರಿಯಿಸುವಾಗ ಮಾತು ತೂಕ ತಪ್ಪದಂತೆ ಎಚ್ಚರಿಕೆ ವಹಿಸಿದ್ದರು.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಎಲ್ಲಿಯಾದರೂ ತಮಿಳುನಾಡಿನ ಜನರನ್ನು ಮೆಚ್ಚಿಸುವ ಅವಸರದಲ್ಲಿ ಜಯಲಲಿತಾಗೆ ಕಳೆದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಾರತ ರತ್ನ ಪ್ರಶಸ್ತಿ ಘೋಷಿಸಿದ್ದರೆ ಇಂದು ನಗೆಪಾಟಲಾಗುತ್ತಿತ್ತು. 
ಜಯಲಲಿತಾರ ರಾಜಕೀಯ ಗುರು ಮತ್ತು ಎಐಎಡಿಎಂಕೆಯ ಸ್ಥಾಪಕ ಎಂ. ಜಿ. ರಾಮಚಂದ್ರನ್‌ಗೆ ಭಾರತ ರತ್ನ ಕೊಟ್ಟು ಆಗಿನ ರಾಜೀವ್‌ ಗಾಂಧಿ ಸರಕಾರ ಉಗಿಸಿಕೊಂಡದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಎಂಜಿಆರ್‌ ಆಡಳಿತದಲ್ಲಿ ಮೆಚ್ಚಿಕೊಳ್ಳುವಂತಹ ಯಾವ ಅಂಶ ಇಲ್ಲದಿದ್ದರೂ ತಮಿಳುನಾಡಿನ ರಾಜಕೀಯ ನಾಯಕರನ್ನು ಖುಷಿಪಡಿಸುವ ಸಲುವಾಗಿ ಭಾರತ ರತ್ನ ಪ್ರಶಸ್ತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಜಯಲಲಿತಾ ವಿರುದ್ಧ ದಾಖಲಾಗಿದ್ದ ಅಕ್ರಮ ಆಸ್ತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಹೊರಬೀಳುವ ತನಕ ಕಾಯುವ ಬುದ್ಧಿವಂತಿಕೆಯ ನಿರ್ಧಾರವನ್ನು ನರೇಂದ್ರ ಮೋದಿ ಸರಕಾರ ಕೈಗೊಂಡಿತು. ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಹಿಂದಿನ ಮುಖ್ಯಮಂತ್ರಿ ಓ.ಪನ್ನೀರ್‌ಸೆಲ್ವಂ ಪದೇ ಪದೇ “ಅಮ್ಮನ ಆಡಳಿತವನ್ನು ಮುಂದುವರಿಸುತ್ತೇವೆ’ ಎಂದು ಜಪಿಸುವುದನ್ನು ನೋಡುವಾಗ ಸಾರ್ವಜನಿಕ ಜೀವನದಲ್ಲಿ ದಟ್ಟವಾಗಿ ವ್ಯಾಪಿಸಿರುವ ಭ್ರಷ್ಟಾಚಾರದ ಬಗ್ಗೆ ಕಳವಳ ಹೊಂದಿರುವವರಿಗೆ ಚಿಂತೆಯಾಗಬಹುದು. ಶಶಿಕಲಾ ಬಣದ ಎಐಎಡಿಎಂಕೆ ನಾಯಕರು ಸುಪ್ರೀಂ ಕೋರ್ಟು ತೀರ್ಪಿನ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆಕ್ರೋಶ ಹೊಂದಿರುವುದು ಇದಕ್ಕೆ ಕಾರಣವಾಗಿರಬಹುದು. ಎಐಎಡಿಎಂಕೆ ಪಾಲಿಗೆ ಅಮ್ಮ ಮತ್ತು ಚಿನ್ನಮ್ಮ ತಪ್ಪೇ ಮಾಡದ ದೈವಾಂಶ ಸಂಭೂತರು.

ಬಡಪಾಯಿ ಸಿ. ಎನ್‌. ಅಣ್ಣಾದೊರೆ
ತಮಿಳುನಾಡು ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸುವವರಿಗೆ ರಾಜ್ಯದ ಮೊದಲ ಡಿಎಂಕೆ ಮುಖ್ಯಮಂತ್ರಿ ಸಿ. ಎನ್‌. ಅಣ್ಣಾದೊರೆ ಹೆಸರು ಎಲ್ಲೂ ಏಕೆ ಪ್ರಸ್ತಾಪವಾಗುತ್ತಿಲ್ಲ ಎಂಬ ಪ್ರಶ್ನೆ ಕಾಡದಿರದು. ಅವರು ಸ್ವಾತಂತ್ರೊéàತ್ತರ ಭಾರತದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯೂ ಆಗಿದ್ದರು. ಆಲ್‌ ಇಂಡಿಯಾ ಅಣ್ಣಾ ಡಿಎಂಕೆ ಅಥವ ಎಐಎಡಿಎಂಕೆ ಅವರ ಹೆಸರನ್ನೇ ಹೊಂದಿದೆ. 1967ರಿಂದ ಬರೀ ಎರಡು ವರ್ಷ ಮಾತ್ರ ಅವರು ಮುಖ್ಯಮಂತ್ರಿಯಾಗಿದ್ದರು. ಅಣ್ಣಾ ನಿಧನರಾದ ಬಳಿಕ ಡಿಎಂಕೆ ಅವರ ಪತ್ನಿ ರಾಣಿಯವರನ್ನು ಸಂಪೂರ್ಣ ಕಡೆಗಣಿಸಿತು. ರಾಣಿ ಬಳಿಕ ಬೆಂಗಳೂರಿಗೆ ಬಂದು ವಾಸವಾಗಿದ್ದರು. ಒಮ್ಮೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ದಯನೀಯವಾಗಿ ಸೋತಿದ್ದರು. ಈ ವಿಚಾರದಲ್ಲಿ ಕಾಂಗ್ರೆಸ್‌ ಎಐಎಡಿಎಂಕೆಗಿಂತ ತುಸು ಪರವಾಗಿಲ್ಲ. ಲೋಕಮಾನ್ಯ ತಿಲಕ್‌, ಗೋಪಾಲಕೃಷ್ಣ ಗೋಖಲೆ, ಸಿ. ಆರ್‌. ದಾಸ್‌, ಸರ್ದಾರ್‌ ಪಟೇಲ್‌ ರಾಜಾಜಿ ಮುಂತಾದ ಸ್ವಾತಂತ್ರ್ಯ ಸೇನಾನಿಗಳಿಗೆ ಕಾಂಗ್ರೆಸ್‌ ಎಂದೋ ಎಳ್ಳುನೀರು ಬಿಟ್ಟಿದ್ದರೂ ಮಹಾತ್ಮ ಗಾಂಧಿಯನ್ನು ಮಾತ್ರ ಸಂಪೂರ್ಣ ಕೈಬಿಟ್ಟಿಲ್ಲ. ಹಾಗೇ ನೋಡುವುದಾದರೆ ಡಿಎಂಕೆಗೆ ರಾಜಕೀಯ ಪಕ್ಷವಾಗಿ ಒಂದು ಗೌರವದ ಸ್ಥಾನ ಬರಲು ಕಾರಣರಾದವರು ರಾಜಾಜಿ. 

1967ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸನ್ನು ಸೋಲಿಸಲು ಡಿಎಂಕೆಗೆ ಅವರು ಸಹಾಯ ಮಾಡಿದರು. ಆ ಚುನಾವಣೆಯಲ್ಲಿ ಡಿಎಂಕೆ ಜತೆಗೆ ಸ್ವತಂತ್ರ ಪಾರ್ಟಿ ಮೈತ್ರಿ ಮಾಡಿಕೊಂಡಿತ್ತು. ಆ ದಿನಗಳಲ್ಲಿ ಡಿಎಂಕೆ ದೊಂಬಿಯೆಬ್ಬಿಸುವವರ ಪಕ್ಷ ಎಂದೇ ಅರಿಯಲ್ಪಡುತ್ತಿತ್ತು. ಅಣ್ಣಾದೊರೆ ಸಮಾಧಿಗೆ ಹೋಗಿ ನಮಸ್ಕರಿಸುವ ಎಐಎಡಿಎಂಕೆ ನಾಯಕರನ್ನು ನಾನು ಕಂಡಿಲ್ಲ. ಅಮ್ಮ ಮತ್ತು ಚಿನ್ನಮ್ಮ ಪ್ರಖರ ಪ್ರಭೆಯಲ್ಲಿ ಬಡಪಾಯಿ ಅಣ್ಣಾ ಸಂಪೂರ್ಣ ಮಂಕಾಗಿದ್ದಾರೆ.

Advertisement

ತಮಿಳುನಾಡಿನಲ್ಲಿ ನಡೆದ ರಾಜಕೀಯ ವಿದ್ಯಮಾನಗಳು ಜಯಲಲಿತಾ ಭ್ರಷ್ಟಾಚಾರವನ್ನು ಎತ್ತಿಹಿಡಿದ ಮತ್ತು ಶಶಿಕಲಾ ನಟರಾಜನ್‌ ಹಾಗೂ ಉಳಿದಿಬ್ಬರನ್ನು ಜೈಲಿಗೆ ಕಳುಹಿಸಿದ ನ್ಯಾ| ಪಿನಾಕಿಚಂದ್ರ ಘೋಸ್‌ ಮತ್ತು ಅಮಿತಾವ ರಾಯ್‌ ಅವರ ಐತಿಹಾಸಿಕ ತೀರ್ಪನ್ನು ಕೂಡ ಸ್ವಲ್ಪಮಟ್ಟಿಗೆ ಹಿನ್ನೆಲೆಗೆ ಸರಿಸಿದ್ದು ಸುಳ್ಳಲ್ಲ. ಎರಡನೇ ಸಲ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಪಾಲಾಗುವುದರಿಂದ ಅಮ್ಮನನ್ನು ಸಾವು ಪಾರು ಮಾಡಿತು. ವಿಚಾರಣಾ ನ್ಯಾಯಾಲಯದ ತೀಪೇì ಇದು ಸಾಂ ಕ ಭ್ರಷ್ಟಾಚಾರ ಎನ್ನುವುದನ್ನು ಸಾಬೀತುಪಡಿಸಿದೆ. 

ಲಜ್ಜೆಗೇಡಿ ಭ್ರಷ್ಟರನ್ನು ಬೆತ್ತಲೆಗೊಳಿಸಿದ ನಿಜವಾದ ಕೀರ್ತಿ ಕರ್ನಾಟಕ ಹೈಕೋರ್ಟಿನ ಹಾಲಿ ನ್ಯಾಯಾಧೀಶ ಜಾನ್‌ ಮೈಕಲ್‌ ಡಿ. ಕುನ್ಹ ಅವರಿಗೆ ಸಲ್ಲಬೇಕು. ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಕುನ್ಹ ಈ ನಾಲ್ವರನ್ನು ಜೈಲಿಗೆ ಕಳುಹಿಸುವ ತೀರ್ಪು ನೀಡಿದ್ದರು. ಸುಪ್ರೀಂ ಕೋರ್ಟ್‌ ಅವರ ತೀರ್ಪನ್ನು ಎತ್ತಿ ಹಿಡಿದೆಯಷ್ಟೆ. ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ಮಾತ್ರ ದಿಟ್ಟ ತೀರ್ಪು ನೀಡುತ್ತವೆ ಮತ್ತು ಅಲ್ಲಿ ಮಾತ್ರ ನ್ಯಾಯ ಸಿಗುತ್ತದೆ ಎಂಬ ಸಾರ್ವತ್ರಿಕವಾದ ಅಭಿಪ್ರಾಯವಿದೆ. ಅಧೀನ ನ್ಯಾಯಾಲಯಗಳೂ ನ್ಯಾಯಾಂಗದ ಆಧಾರ ಸ್ಥಂಭಗಳು ಎನ್ನುವುದನ್ನು ನ್ಯಾ| ಕುನ್ಹ ತೋರಿಸಿಕೊಟ್ಟಿದ್ದಾರೆ. 

ಸಮಾಜದ ಪ್ರತಿಯೊಂದು ಹಂತದಲ್ಲಿ ಭ್ರಷ್ಟಾಚಾರ ಸರ್ವವ್ಯಾಪಿಯಾಗಿರುವುದರಿಂದ ಜನಸಾಮಾನ್ಯರು ಪಡುತ್ತಿರುವ ಬವಣೆಯನ್ನು ನ್ಯಾ|ಅಮಿತಾವ್‌ ರಾಯ್‌ ತೀರ್ಪಿನಲ್ಲಿ ಪ್ರತ್ಯೇಕವಾಗಿ ಉಲ್ಲೇಖೀಸಿದ್ದಾರೆ. ಮತಗಳಿಕೆಗಾಗಿ ಪುಕ್ಕಟೆ ಕೊಡುಗೆಗಳನ್ನು ನೀಡುವುದು ಭ್ರಷ್ಟಾಚಾರವಲ್ಲದೆ ಇನ್ನೇನು? 

ತಮಿಳುನಾಡಿನಂತೆ ಭ್ರಷ್ಟ ನಾಯಕರನ್ನು ಆರಾಧಿಸುವ ಜನರು ಎಲ್ಲೆಡೆ ಇದ್ದಾರೆ ಎನ್ನುವುದು ಕಹಿಸತ್ಯ. ಈ ವ್ಯವಸ್ಥೆಯಲ್ಲಿ ಪ್ರಾಮಾಣಿಕ ಮಂತ್ರಿಗಳನ್ನು ಅವರ ಪಕ್ಷಗಳು ಮತ್ತು ಜಾತಿಗಳು ಮೂರ್ಖರೇನೋ ಎಂಬಂತೆ ನೋಡುತ್ತವೆ.  ಈಗ ಭ್ರಷ್ಟಾಚಾರವನ್ನು ಜಾತಿ ಅಥವ ಸಮುದಾಯಕ್ಕೆ ತಳಕು ಹಾಕಿಕೊಂಡು ನೋಡುವ ಸಂಪ್ರದಾಯ ಶುರುವಾಗಿದೆ.

ಕರ್ನಾಟಕ, ತಮಿಳುನಾಡು ಅಥವ ಇನ್ಯಾವುದೇ ರಾಜ್ಯದಲ್ಲಿ ಜನರನ್ನು ಸಂತುಷ್ಟರನ್ನಾಗಿಸುವುದೇ ರಾಜಕೀಯ ಎಂದಾಗಿದೆ. ಹೀಗಾಗಿಯೇ ಪ್ರತಿ ಚುನಾವಣೆ ಸಂದರ್ಭದಲ್ಲಿ ಉಚಿತ ಕೊಡುಗೆಗಳ ಸುರಿಮಳೆಯಾಗುತ್ತದೆ. ಪುಕ್ಕಟೆ ಕೊಡುಗೆ ವಿರೋಧಿಸುವ ನಾಯಕ ಈಗ ಸಿಗುವುದು ಅಸಾಧ್ಯ. ಪಳನಿಸ್ವಾಮಿ ನಾಡಿನ ಜನರಿಗೆ ಕೆಲವು ಉಚಿತ ಕೊಡುಗೆಗಳನ್ನು ಘೋಷಿಸುವ ಮೂಲಕ ಅಮ್ಮ ಮತ್ತು ಚಿನ್ನಮ್ಮ ಹಾದಿಯಲ್ಲೇ ತಾನು ಸಾಗುವ ಸುಳಿವನ್ನು ಆರಂಭದಲ್ಲಿಯೇ ನೀಡಿದ್ದಾರೆ.

ರಾಜ್ಯಪಾಲರ ನಿರ್ಧಾರ ಸರಿಯಾಗಿತ್ತು
ರಾಜ್ಯಪಾಲ ವಿದ್ಯಾಸಾಗರ್‌ ರಾವ್‌ ಹೊಸ ಸರಕಾರ ರಚನೆ ವಿಳಂಬಿಸುತ್ತಿದ್ದಾರೆ ಎಂಬ ಟೀಕೆಗಳು ಕೇಳಿ ಬಂದಿದ್ದವು. ಸುಪ್ರೀಂ ಕೋರ್ಟಿನ ಪ್ರಥಮ ಮಹಿಳಾ ನ್ಯಾಯಾಧೀಶರೂ ಆಗಿದ್ದ ತಮಿಳುನಾಡಿನ ಮಾಜಿ ರಾಜ್ಯಪಾಲೆ ಫಾತಿಮಾ ಬೀವಿ ಇದೇ ರೀತಿಯ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಕೈಗೊಂಡ ನಿರ್ಧಾರವನ್ನು ಈ ಟೀಕಾಕಾರರು ನೆನಪಿಸಿಕೊಳ್ಳುವುದು ಒಳ್ಳೆಯದು. 

2001 ಮೇ ತಿಂಗಳಲ್ಲಿ ಇನ್ನೊಂದು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಎಂದು ಸಾಬೀತಾಗಿ ಚುನಾವಣೆಗೆ ಸ್ಪರ್ಧಿಸುವುದರಿಂದ ಅನರ್ಹಗೊಂಡಿದ್ದ ಇದೇ ಜಯಲಲಿತಾ ಅವರಿಗೆ ಫಾತಿಮಾ ಬೀವಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಬೋಧಿಸಿದರು. 

ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಅಂದಿನ ಎನ್‌ಡಿಎ ಸರಕಾರ ಈ ನಿರ್ಧಾರವನ್ನು ಒಪ್ಪಿಕೊಳ್ಳಲಿಲ್ಲ. ಪರಿಣಾಮವಾಗಿ ಫಾತಿಮಾ ಬೀವಿ ರಾಜ್ಯಪಾಲ ಹುದ್ದೆಯಿಂದ ಕೆಳಗಿಳಿಯಬೇಕಾಯಿತು. ಇದೇ ಪನ್ನೀರ್‌ಸೆಲ್ವಂ ಹಂಗಾಮಿ ಮುಖ್ಯಮಂತ್ರಿಯಾಗಿ ಜಯಲಲಿತಾ ಮರಳಿ ಬರುವ ತನಕ ಆಡಳಿತ ನಡೆಸಿದರು. ಹೀಗಾಗಿ ವಿದ್ಯಾಸಾಗರ್‌ ರಾವ್‌ ಸಮುಚಿತವಾದ ನಿರ್ಧಾರವನ್ನೇ ಕೈಗೊಂಡರು ಎಂದು ಹೇಳಬಹುದು.

ಜೈಲಿನಲ್ಲಿರುವ ಶಶಿಕಲಾಗೆ ಇಂಗ್ಲೀಷ್‌ ಪತ್ರಿಕೆ ನೀಡಲಾಗುತ್ತಿದೆ ಎಂಬ ವರದಿಯನ್ನು ಓದಿದಾಗ ನನಗೆ ಆಶ್ಚರ್ಯವಾಯಿತು. ಶಶಿಕಲಾಗೆ ಇಂಗ್ಲೀಷ್‌ ಗೊತ್ತಿಲ್ಲ. ಹೀಗಾಗಿ ಎಲ್ಲ ದಾಖಲೆಗಳನ್ನು ತಮಿಳಿಗೆ ತರ್ಜುಮೆ ಮಾಡಬೇಕೆಂದು ವಿಚಾರಣಾ ನ್ಯಾಯಾಲಯದಲ್ಲಿ ಅವರ ವಕೀಲ ವಿನಂತಿಸಿದ್ದರು. ಈ ತಂತ್ರದಿಂದಾಗಿ ವಿಚಾರಣೆ ಕನಿಷ್ಠ ಎರಡು ವರ್ಷ ವಿಳಂಬವಾಯಿತು. ಅನಂತರ ಶಶಿಕಲಾಗೆ ಜಯಲಲಿತಾ ಇಂಗ್ಲೀಷ್‌ ಕಲಿಸಿ ದ್ರಾವಿಡ ಜನರ ಹೆಸರು ಬಳಸಿಕೊಂಡು ಸಂಪತ್ತು ಗುಡ್ಡೆ ಹಾಕುವ ವಿದ್ಯೆಯನ್ನು ಹೇಳಿಕೊಟ್ಟಿರಬೇಕು.

ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next