Advertisement

ಕರ್ನಾಟಕಕ್ಕೆ ಮತ್ತೆ ತಮಿಳುನಾಡು ಸವಾಲು

11:06 PM Dec 20, 2021 | Team Udayavani |

ಜೈಪುರ: “ವಿಜಯ್‌ ಹಜಾರೆ ಟ್ರೋಫಿ’ ಕ್ವಾರ್ಟರ್‌ ಫೈನಲ್‌ ಪ್ರವೇ ಶಿಸುವಲ್ಲಿ ಯಶಸ್ವಿಯಾದ ಕರ್ನಾಟಕಕ್ಕೆ ಬದ್ಧ ಎದುರಾಳಿ ತಮಿಳುನಾಡಿನ ಸವಾಲು ಎದುರಾಗಿದೆ. ಇತ್ತೀಚಿನ ಕೂಟಗಳಲ್ಲಿ ತಮಿಳುನಾಡು ವಿರುದ್ಧ ಸೋಲುವುದನ್ನೇ ಹವ್ಯಾಸವನ್ನಾಗಿ ಮಾಡಿಕೊಂಡಿರುವ ರಾಜ್ಯ ತಂಡ ಇಲ್ಲಿ ತಿರುಗಿ ಬಿದ್ದೀತೇ ಎಂಬುದು ಎಲ್ಲರ ಕಾತರ, ನಿರೀಕ್ಷೆ.

Advertisement

ಈ ಕೂಟದ ಲೀಗ್‌ ಹಂತದಲ್ಲೇ ಕರ್ನಾಟಕ ತಂಡ ತಮಿಳುನಾಡಿಗೆ ಶರ ಣಾದ ನಿದರ್ಶನ ಕಣ್ಮುಂದಿದೆ. ಡಿ. 9ರ ತಿರುವನಂತಪುರ ಮುಖಾಮುಖಿಯಲ್ಲಿ ಶೋಚನೀಯ ಬ್ಯಾಟಿಂಗ್‌ ತೋರ್ಪಡಿಸಿದ ಕರ್ನಾಟಕ 122ಕ್ಕೆ ಆಲೌಟ್‌ ಆಗಿ 8 ವಿಕೆಟ್‌ ಸೋಲನ್ನು ಹೊತ್ತುಕೊಂಡಿತ್ತು. ಇದಕ್ಕೂ ಹಿಂದಿನ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟ್ರೋಫಿ ಫೈನಲ್‌ನಲ್ಲಿ ಶಾರೂಖ್‌ ಖಾನ್‌ ಅಂತಿಮ ಎಸೆತದಲ್ಲಿ ಸಿಕ್ಸರ್‌ ಸಿಡಿಸಿ ಕರ್ನಾಟಕದ ಗೆಲುವನ್ನು ಕಸಿದಿದ್ದರು. ಈ ಎರಡು ಸೋಲುಗಳಿಗೆ ಸೇಡು ತೀರಿಸಿಕೊಳ್ಳಲು ಮನೀಷ್‌ ಪಾಂಡೆ ಪಡೆಯ ಮುಂದೆ ಉತ್ತಮ ಅವಕಾಶವೊಂದು ಎದುರಾಗಿದೆ.

ತಮಿಳುನಾಡು ತಂಡ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಹೆಗ್ಗಳಿಕೆ ಹೊಂದಿದೆ. ಇದೇ ವಿಭಾಗದಲ್ಲಿದ್ದ ಕರ್ನಾಟಕ ಪ್ರಿ-ಕ್ವಾರ್ಟರ್‌ ಫೈನಲ್‌ ಗೆದ್ದು ಅಂತಿಮ ಎಂಟರ ಸುತ್ತಿಗೆ ಬಂದಿದೆ. ರವಿವಾರ ಆತಿಥೇಯ ರಾಜಸ್ಥಾನವನ್ನು ಮಣಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ಭಾರತ “ಎ’ ತಂಡದ ಪರ ಆಡುತ್ತಿದ್ದ ದೇವದತ್ತ ಪಡಿಕ್ಕಲ್‌, ಕೆ. ಗೌತಮ್‌, ಪ್ರಸಿದ್ಧ್ ಕೃಷ್ಣ ಮರಳಿರುವುದರಿಂದ ಕರ್ನಾಟಕ ತಂಡ ಹೆಚ್ಚು ಬಲಿಷ್ಠಗೊಂಡಿದೆ. ಆದರೆ ಇವರಿಗಾಗಿ ಸ್ಥಾನ ಬಿಟ್ಟುಕೊಟ್ಟವರ ಸಾಧನೆಯೂ ಕಡಿಮೆ ಏನಿರಲಿಲ್ಲ.

ಇದನ್ನೂ ಓದಿ:ನಡಾಲ್‌ಗೆ ಕೋವಿಡ್: ಆಸ್ಟ್ರೇಲಿಯನ್‌ ಓಪನ್‌ಗೆ ಅನುಮಾನ

Advertisement

ಬೌಲಿಂಗ್‌ ಪಾತ್ರ ನಿರ್ಣಾಯಕ
ತನ್ನ ಬ್ಯಾಟಿಂಗ್‌ ಲೈನ್‌ಅಪ್‌ ಎಷ್ಟು ಬಲಿಷ್ಠ ಎಂಬುದನ್ನು ಕರ್ನಾಟಕ ಈ ಪಂದ್ಯದಲ್ಲಿ ತೋರಿಸಿಕೊಡಬೇಕಿದೆ. ತಮಿಳುನಾಡು ಬ್ಯಾಟಿಂಗ್‌ ಸರದಿಯೂ ಸದೃಢವಾಗಿದೆ. ಬೌಲಿಂಗ್‌ನಲ್ಲಿ ಮೇಲುಗೈ ಸಾಧಿಸಿದವರಿಗೆ ಗೆಲುವು ಒಲಿಯಲಿದೆ ಎಂಬುದು ಸದ್ಯದ ಲೆಕ್ಕಾಚಾರ.

ದಿನದ ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಉತ್ತರ ಪ್ರದೇಶ-ಹಿಮಾಚಲ ಪ್ರದೇಶ ಎದುರಾಗಲಿವೆ. ಉಳಿದೆರಡು ಕ್ವಾರ್ಟರ್‌ ಫೈನಲ್ಸ್‌ ಬುಧವಾರ ನಡೆಯಲಿವೆ.

 

Advertisement

Udayavani is now on Telegram. Click here to join our channel and stay updated with the latest news.

Next