ಚೆನ್ನೈ: ತಮಿಳುನಾಡಿನಲ್ಲಿ ನಡೆದಿರುವ ಕಳ್ಳಭಟ್ಟಿ ದುರಂತ ಆಡಳಿತಾತ್ಮಕ, ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯವಾಗಿದೆ ಎನ್ನುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಕಿಡಿ ಕಾರಿದ್ದಾರೆ.
ಕಲ್ಲಕುರಿಚಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕಳ್ಳಭಟ್ಟಿ ದುರಂತದ ಸಂತ್ರಸ್ತರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. “ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ, ಕಳೆದ 4 ಗಂಟೆಗಳಲ್ಲಿ ನಾವು ಸಂತ್ರಸ್ತರ ಎಲ್ಲಾ ಮನೆಗಳಿಗೆ ಭೇಟಿ ನೀಡಿದ್ದೇವೆ. ತಮಿಳುನಾಡು ಬಿಜೆಪಿ ಮೃತರ ಕುಟುಂಬಗಳಿಗೆ ತಲಾ 1 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡುತ್ತಿದೆ’ ಎಂದರು.
‘ನಮ್ಮ ಹಿರಿಯ ಉಪಾಧ್ಯಕ್ಷರ ನೇತೃತ್ವದ ಸಮಿತಿಯು ಇಲ್ಲಿನ ಎಲ್ಲ ಮನೆಗಳಿಗೆ ಭೇಟಿ ನೀಡಲಿದೆ. ಅವರು ಈ ಮನೆಗಳನ್ನು ತಲುಪಬೇಕಾದ ಒಂದು ಕೇಂದ್ರ ಯೋಜನೆಯ ಬಗ್ಗೆ ವರದಿಯನ್ನು ಸಲ್ಲಿಸುತ್ತಾರೆ. ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಬಿಜೆಪಿ ಶನಿವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ. ಬೇಡಿಕೆಗಳನ್ನು ಈಡೇರಿಸದಿದ್ದರೆ, ನಾವು ಚೆನ್ನೈನಿಂದ ಕೋಟೈಗೆ ಬೃಹತ್ ಮೆರವಣಿಗೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
‘ಆಡಳಿತಾರೂಢ ಡಿಎಂಕೆ ಕಡೆಯಿಂದ, ಸಿಎಂ ಎಂ.ಕೆ. ಸ್ಟಾಲಿನ್ ಇನ್ನೂ ಕಲ್ಲಕುರಿಚಿಗೆ ಬರದಿರುವುದು ತೀವ್ರ ನಿರಾಶೆಯನ್ನುಂಟುಮಾಡಿದೆ. ಆದರೆ ಅವರು ತಮ್ಮ ಪುತ್ರ ಉದಯನಿಧಿ ಸ್ಟಾಲಿನ್ ಅವರನ್ನು ಕಳುಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲೂ ವಂಶಾಡಳಿತ ರಾಜಕಾರಣ ಮಾಡಬೇಕೆಂಬ ಆಸೆ ಅವರದು. ಸಿಎಂ ಕೂಡಲೇ ಕಕಲ್ಲಕುರಿಚಿಗೆ ಭೇಟಿ ನೀಡಬೇಕು. 24 ಗಂಟೆಗಳ ಒಳಗೆ ಅಬಕಾರಿ ಸಚಿವರನ್ನು ವಜಾಗೊಳಿಸಬೇಕೆಂದು ನಾವು ಒತ್ತಾಯಿಸುತ್ತೇವೆ’ ಎಂದು ಅಣ್ಣಾಮಲೈ ಕಿಡಿ ಕಾರಿದರು.
“ಸಿಬಿಐ ತನಿಖೆಗೆ ಕೋರಿ ನಾನು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಡಿಎಂಕೆ ಪಕ್ಷದ ಪದಾಧಿಕಾರಿಗಳು ಮತ್ತು ಸ್ಥಳೀಯ ಮಟ್ಟದಲ್ಲಿ ಮದ್ಯ ಮಾರಾಟ ಮಾಡುವವರ ನಡುವೆ ಕುತಂತ್ರವಿದೆ. ದುರ್ಘಟನೆ ನ್ಯಾಯಾಲಯ ಮತ್ತು ಪೊಲೀಸ್ ಠಾಣೆಯ ಕೆಲವೇ ಮೀಟರ್‌ಗಳ ಅಂತರದಲ್ಲಿ ನಡೆದಿದೆ.” ಎಂದು ಕಿಡಿ ಕಾರಿದರು.
ಕಳ್ಳಭಟ್ಟಿ ಸೇವಿಸಿ 34 ಮಂದಿ ಮೃತಪಟ್ಟಿದ್ದು, 60ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದು ಕಲ್ಲಕುರಿಚಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.