ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ, ಮಕ್ಕಳ್ ನೀಧಿ ಮಯಂ (ಎಂಎನ್ ಎಂ) ಪಕ್ಷದ ವರಿಷ್ಠ ಕಮಲ್ ಹಾಸನ್ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಮಹಾ ಶಿವರಾತ್ರಿ ಕುರಿತು ಟ್ವೀಟ್ ಮಾಡಿ ಟ್ರೋಲ್ ಆದ ನಟ ಸೋನು ಸೂದ್
ಎಂಎನ್ ಎಂ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶುಕ್ರವಾರ(ಮಾರ್ಚ್ 12) ಬಿಡುಗಡೆಗೊಳಿಸಿದ ನಂತರ ಕಮಲ್ ಹಾಸನ್ ತಮ್ಮ ಸ್ಪರ್ಧೆಯ ಬಗ್ಗೆ ಘೋಷಿಸಿದ್ದಾರೆ.
ಇದಕ್ಕೂ ಮೊದಲು ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಎಂ.ಜಿ.ರಾಮಚಂದ್ರನ್ ಸ್ಪರ್ಧಿಸುತ್ತಿದ್ದ ಚೆನ್ನೈನ ಅಳಂದೂರ್ ನಿಂದ ಕಮಲ್ ಹಾಸನ್ ಸ್ಪರ್ಧಿಸುವ ಸಾಧ್ಯತೆ ಇದ್ದಿರುವುದಾಗಿ ಊಹಾಪೋಹ ಹಬ್ಬಿತ್ತು.
ಹಿಂದೆ ನಡೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ಎಐಎಡಿಎಂಕೆ ಜಯಗಳಿಸಿತ್ತು. ಪ್ರಸ್ತುತ ಎಐಎಡಿಎಂಕೆಯ ಅಮ್ಮಾನ್ ಕೆ ಅರ್ಜುನನ್ ಅವರು ಕೊಯಮತ್ತೂರ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದಾರೆ. ಆದರೆ ನೂತನ ಸೀಟು ಹಂಚಿಕೆಯ ಒಪ್ಪಂದದಲ್ಲಿ ಆಡಳಿತಾರೂಢ ಎಐಎಡಿಎಂಕೆ ಕೊಯಮತ್ತೂರು ದಕ್ಷಿಣ ಕ್ಷೇತ್ರವನ್ನು ಮೈತ್ರಿ ಪಕ್ಷವಾದ ಬಿಜೆಪಿಗೆ ಬಿಟ್ಟುಕೊಟ್ಟಿದೆ. ಇದರಿಂದ ಎಐಎಡಿಎಂಕೆ ಕಾರ್ಯಕರ್ತರಿಗೆ ಅಸಮಾಧಾನ ತಂದಿರುವುದಾಗಿ ವರದಿ ತಿಳಿಸಿದೆ.
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಮಲ್ ಹಾಸನ್ ನೇತೃತ್ವದ ಎಂಎನ್ ಎಂ ಪಕ್ಷ ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ಶೇ.11ರಷ್ಟು ಮತ ಪಡೆದಿತ್ತು. ಸುದ್ದಿಗಾರರ ಜತೆ ಮಾತನಾಡುವ ಸಂದರ್ಭದಲ್ಲಿ ಕಮಲ್ ಹಾಸನ್ ತಮ್ಮ ತಂದೆಯವರನ್ನು ನೆನಪಿಸಿಕೊಂಡಿದ್ದು, ನಾನು ಐಎಎಸ್ ಅಧಿಕಾರಿಯಾಗಬೇಕೆಂದು ಆಸೆ ಪಟ್ಟಿದ್ದರು. ಆದರೆ ನಾನು ಸಿನಿಮಾ ಕ್ಷೇತ್ರ ಆಯ್ಕೆ ಮಾಡಿಕೊಂಡೆ. ಆದರೆ ಇಂದು ನನ್ನ ಪಕ್ಷದಲ್ಲಿ ಹಲವಾರು ಮಂದಿ ನಿವೃತ್ತ ಐಎಎಸ್ ಅಧಿಕಾರಿಗಳಿದ್ದಾರೆ. ಇದು ನನಗೆ ಹೆಮ್ಮೆಯ ತರುವ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.