ಚೆನ್ನೈ: ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಗುಪ್ತಮತದಾನಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಡಿಎಂಕೆ ಶಾಸಕರು ತಮಿಳುನಾಡು ವಿಧಾನಸಭೆಯಲ್ಲಿ ಭಾರೀ ಕೋಲಾಹಲ, ಗೂಂಡಾಗಿರಿ ವರ್ತನೆ ಪ್ರದರ್ಶಿಸಿದ ಘಟನೆ ಶನಿವಾರ ನಡೆಯಿತು. ಕೋಲಾಹಲದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಕಲಾಪವನ್ನು ಮಧ್ಯಾಹ್ನ 1ಗಂಟೆಗೆ ಮುಂದೂಡಿದ್ದಾರೆ.
ವಿಧಾನಸಭೆಯಲ್ಲಿ ಸ್ಪೀಕರ್ ಧನ್ ಪಾಲ್ ಅವರು ಬಹುಮತ ಯಾಚನೆಗೆ ಅವಕಾಶ ಮಾಡಿಕೊಟ್ಟಾಗ, ಡಿಎಂಕೆ ಶಾಸಕರು ಗುಪ್ತಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟು ಹಿಡಿದರು. ಬಳಿಕ ಕುರ್ಚಿ, ಮೇಜು ಪುಡಿಗೈದು, ಸ್ಪೀಕರ್ ಮೈಕ್, ಫೈಲ್ ಅನ್ನು ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಶಾಸಕರ ಹೊಡೆದಾಟದಲ್ಲಿ ಅಟೆಂಡರ್ ಬಾಲಾಜಿ ಹೈಬಿಪಿಯಿಂದಾಗಿ ಕುಸಿದು ಬಿದ್ದಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಏತನ್ಮಧ್ಯೆ ವಿಶ್ವಾಸಮತ ಯಾಚನೆ ಮುಂದೂಡುವ ಬಗ್ಗೆ ಸ್ಪೀಕರ್ ಧನಪಾಲ್ ಅವರು ಸಭೆ ಕರೆದಿದ್ದಾರೆ. ಸಭೆಯಲ್ಲಿ ಡಿಎಂಕೆ, ಎಐಎಡಿಎಂಕೆ ನಾಯಕರು ಭಾಗವಹಿಸಿದ್ದಾರೆ.
ವಿರೋಧ ಪಕ್ಷವಾದ ಡಿಎಂಕೆ ಶಾಸಕರು ಸ್ಪೀಕರ್ ಪಿ ಧನಪಾಲ್ ಅವರ ಸುತ್ತ ಸುತ್ತುವರಿದು ಸ್ಪೀಕರ್ ಟೇಬಲ್ ಅನ್ನು ಎತ್ತಿ ಪುಡಿಗೈದಿದ್ದರು, ಪೇಪರ್ ನ್ನು ಮೇಲಕ್ಕೆ ಎಸೆದು ಸ್ಪೀಕರ್ ಅವರನ್ನು ಹಿಡಿದು ಹಿಗ್ಗಾಮುಗ್ಗಾ ಎಳೆದಾಡಿರುವ ದೃಶ್ಯ ಮಾಧ್ಯಮಗಳಲ್ಲಿ ಸೆರೆಯಾಗಿದೆ.
ಡಿಎಂಕೆಯ 89 ಶಾಸಕರ ಉಚ್ಚಾಟನೆ:
ವಿಧಾನಸಭೆಯೊಳಗಿಂದ ಡಿಎಂಕೆ ಶಾಸಕರನ್ನು ಹೊರಹಾಕುವಂತೆ ಸ್ಪೀಕರ್ ಧನಪಾಲ್ ಅವರು ಮಾರ್ಷಲ್ ಗಳಿಗೆ ಸೂಚಿಸಿದ್ದ ಹಿನ್ನೆಲೆಯಲ್ಲಿ, ಡಿಎಂಕೆಯ ಎಲ್ಲಾ ಶಾಸಕರನ್ನು ಬಲವಂತವಾಗಿ ಹೊರಕ್ಕೆ ಹಾಕಲಾಯಿತು. ಏತನ್ಮಧ್ಯೆ ಡಿಎಂಕೆಯ 89 ಶಾಸಕರನ್ನು ಉಚ್ಛಾಟಿಸಲಾಗಿದೆ.