ದೇವನಹಳ್ಳಿ: ತಾಲೂಕು ಶಾಸನಗಳ ಬೀಡಾಗಿದ್ದು, ಇತ್ತೀಚೆಗಿನ ದಿನಗಳಲ್ಲಿ ಶಾಸನಗಳ ಒಂದರ ಮೇಲೊಂದರಂತೆ ಪತ್ತೆಯಾಗುತ್ತಿವೆ. ತಮಿಳು ಭಾಷಾ ಜ್ಞಾನವುಳ್ಳ ಅಪ್ರಕಟಿತ ಶಾಸನ ತಾಲೂಕಿನ ಅಗಲಕೋಟೆ ಗ್ರಾಮದ ಕೃಷ್ಣಪ್ಪ ಎಂಬುವವರ ತೋಟದಲ್ಲಿ ಪತ್ತೆಯಾಗಿದೆ. ಇದು ಹೊಯ್ಸಳರ, ಚೋಳರ, ವಿಜಯನಗರ ಅರಸರ ಕಾಲದ ಅಪ್ರಕಟಿತ ಶಾಸನವಾಗಿರಬಹುದು ಎಂದು ಊಹಿಸಲಾಗಿದೆ.
ಈ ಶಾಸನವು ಸುಮಾರು 5 ಅಡಿ ಎತ್ತರ, 3 ಅಡಿ ಅಗಲ ಸುಮಾರು ಮುಕ್ಕಾಲು ಅಡಿ ದಪ್ಪವಿದ್ದು, ಕಲ್ಲಿನ ಎರಡು ಬದಿಯಲ್ಲಿ ಕೆಲವು ಚಿತ್ರಣಗಳಿವೆ. ಸೂರ್ಯ-ಚಂದ್ರ-ಛತ್ರಿ, ಗಂಡಭೇರುಂಡ ಹಾಗೂ ಶ್ವಾನದ ಚಿತ್ರಗಳಿವೆ. ನಂತರ ಒಂದು ಭಾಗದಲ್ಲಿ 23 ಸಾಲುಗಳು ಹಾಗೂ ಮತ್ತೂಂದು ಭಾಗದಲ್ಲಿ 14 ಸಾಲಿನ ತಮಿಳು ಬರಹಳಿವೆ. ಪುರಾತತ್ವ ಇಲಾಖೆ ತಮಿಳು ಬಲ್ಲ ತಜ್ಞರನ್ನು ಕರೆಯಿಸಿ ಸಂಶೋಧನೆ ಮಾಡಿದರೆ ಯಾವ ಕಾಲದ ಶಾಸವೆಂಬುವುದು ತಿಳಿಯುತ್ತದೆ ಎಂದು ಇತಿಹಾಸಕಾರರು ಹೇಳುತ್ತಾರೆ.
ಇತಿಹಾಸ ತಜ್ಞ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಬಿ.ಜಿ.ಗುರುಸಿದ್ದಯ್ಯ, ಸ್ಥಳೀಯವಾಗಿ ತಾಲೂಕಿನ ಗಂಗಾವಾರ ಗ್ರಾಮದ ಸೋಮೇಶ್ವರ ದೇವಾಲಯದಲ್ಲಿ ಹಲವಾರು ತಮಿಳು ಶಾಸನಗಳು ಇವೆ. ಇದಲ್ಲದೆ ಇತ್ತಿಚೆಗೆ ಪೋಲನಹಳ್ಳಿ ಗ್ರಾಮದಲ್ಲಿ ತಮಿಳು ಲಿಪಿಯ ಅಪ್ರಕಟಿತ ಶಾಸನವೊಂದು ಪ್ರಕಟಿತವಾಗಿರುತ್ತದೆ. ಹಳಿಯೂರು ಗ್ರಾಮದ ಸಂಜೀವರಾಯ ಸ್ವಾಮಿ ದೇವಾಲಯದ ಪಕ್ಕದಲ್ಲಿಯೂ 2 ಸಾಲಿನ ತಮಿಳು ಶಿಲಾ ಶಾಸನವಿದೆ.
ಬನ್ನಿಮಂಗಲ ಗ್ರಾಮದ ಕೆರೆಯ ತೂಬಿನಲ್ಲಿಯೂ ಮೂರು ಬದಿಯಲ್ಲಿ ತಮಿಳು ಲಿಪಿಯ ಶಾಸನ ದೊರೆತಿದೆ. ಇವುಗಳ ಅದ್ಯಯನವಾಗಬೇಕಿದೆ. ಪುರಾತತ್ವ ಇಲಾಖೆ ಹಾಗೂ ಇತಿಹಾಸ ಸಂಶೋಧಕರು ಕಳೆದ 5 ವರ್ಷಗಳಿಂದ ದೊರೆತಿರುವ ಅಪ್ರಕಟಿತ ಶಾಸನಗಳ ಲಿಪಿಗಳ ಭೇದಿಸುವುದಲ್ಲಿ ಯಶಸ್ವಿಯಾದರೆ, ದೇವನಹಳ್ಳಿ ತಾಲೂಕಿನ ಇತಿಹಾಸದ ಹೊಸ ಸಂಗತಿಗಳು ಬೆಳಕಿಗೆ ಬರಬಹುದು.
ಇತಿಹಾಸ ಪುಸ್ತಕಗಳಲ್ಲಿ ಹಲವಾರು ರಾಜಮನೆತನದ ಸಂಶೋಧನೆ ಕಾಣುತ್ತಿದ್ದೇವೆ. ನಮ್ಮ ನಾಡನ್ನು ಆಳಿದ ರಾಜವಂಶಸ್ಥರು ಬಿಟ್ಟಿ ಹೋಗಿರುವ ಪುರಾವೆಗಳನ್ನು ಅವಲೋಕಿಸಿದರೆ ಮುಂದಿನ ಪಿಳೀಗೆಗೆ ಹೆಚ್ಚು ಅನುಕೂಲವಾಗುತ್ತದೆ. ಜೊತೆಗೆ ಇತಿಹಾಸ ತಿಳಿಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಅಗಲಕೋಟೆ ಗ್ರಾಮದ ರೈತ ಕೃಷ್ಣಪ್ಪ ಮಾತನಾಡಿ, ಹಿಂದೆ ದೇವನಹಳ್ಳಿ ಕೋಟೆ, ಅಗಲಕೋಟೆ, ಬೆಟ್ಟಕೋಟೆ, ನಲ್ಲೂರು ಕೋಟೆ ಇವುಗಳ ಅದರದೇ ಆದ ಇತಿಹಾಸವಿದೆ. ಅಗಲಕೋಟೆಯು ಕೋಟೆಕೊತ್ತಲಗಳನ್ನು ಒಳಗೊಂಡಿತ್ತು ಎಂಬುವುದನ್ನು ನಮ್ಮ ಪೂರ್ವಿಕರು ಹೇಳುತ್ತಿದ್ದರು.
ನಮ್ಮ ತೋಟದ ಸಮೀಪದಲ್ಲಿ ಪ್ರಾಚೀನ ಕಾಲದ ಮುಜುರಾಯಿ ಇಲಾಖೆಗೆ ಸೇರಿದಂತಹ ಹನುಮಾನ ದೇವಾಲಯವಿದೆ. ತೋಟದಲ್ಲಿ ಪುರಾತನ ಕಾಲದಿಂದಲೂ ಕಲ್ಲಿನ ಶಾಸನ ಕಂಡುಬಂದಿತ್ತು. ಇತಿಹಾಸ ತಜ್ಞ ಬಿಟ್ಟಸಂದ್ರ ಗುರುಸಿದ್ದಯ್ಯ ಅವರನ್ನು ಸಂಪರ್ಕಿಸಿದಾಗ ಅಪ್ರಕಟಿತ ತಮಿಳು ಶಾಸನ ಎಂದು ತಿಳಿಸಿದ್ದಾರೆ. ಇದರ ಜಾಡು ಹಿಡಿದು ಇದರ ಬಗ್ಗೆ ಹೆಚ್ಚು ಮಾಹಿತಿ ತಿಳಿಯಬೇಕಿದೆ ಎಂದು ಕೂತುಹಲ ವ್ಯಕ್ತಪಡಿಸಿದರು. ಅರ್ಚಕ ರಾಮಮೂರ್ತಿ, ಗ್ರಾಮಸ್ಥ ವೆಂಕಟೇಶ್, ಶಶಿಧರ್ ಗೌಡ ಮತ್ತಿತರರು ಇದ್ದರು.