ಚೆನ್ನೈ:ದೇಶಾದ್ಯಂತ ನಾಗಾಲೋಟದಲ್ಲಿ ಹರಡುತ್ತಿರುವ ಕೋವಿಡ್ 19 ವೈರಸ್ ಒಂದೆಡೆಯಾದರೆ, ಮತ್ತೊಂದೆಡೆ ವಾಣಿಜ್ಯ, ವ್ಯವಹಾರದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಅದಕ್ಕೆ ಸೇರ್ಪಡೆ ಎಂಬಂತೆ ಕೋವಿಡ್ ಬಿಕ್ಕಟ್ಟಿನಿಂದಾಗಿ ಚೆನ್ನೈ ಮೂಲದ ಸಿನಿಮಾ ನಿರ್ದೇಶಕರೊಬ್ಬರು ತಮ್ಮ ವೃತ್ತಿಗೆ ಗುಡ್ ಬೈ ಹೇಳಿ ರೇಷನ್ ಅಂಗಡಿ ತೆರೆದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಕಳೆದ ಹತ್ತು ವರ್ಷಕ್ಕೂ ಅಧಿಕ ಕಾಲ ತಮಿಳು ಚಿತ್ರರಂಗದಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಆನಂದ್ ಅವರ ಲೆಕ್ಕಚಾರದಂತೆ ಕೋವಿಡ್ 19 ಭೀತಿ ಮುಂದಿನ ವರ್ಷದವರೆಗೂ ಮುಂದುವರೆಯಲಿದ್ದು, ದೇಶಾದ್ಯಂತ ಚಿತ್ರಮಂದಿರಗಳು ಕೂಡಾ ಬಂದ್ ಆಗಲಿದೆ ಎಂಬುದಾಗಿ ಮನಗಂಡಿದ್ದಾರೆ.
ಇದೇ ಪರಿಸ್ಥಿತಿಯಲ್ಲಿ ಮುಂದುವರಿದರೆ ಜೀವನ ಸಾಗಿಸುವುದು ಕಷ್ಟವಾಗಲಿದೆ ಎಂದು ಅರಿತ ನಿರ್ದೇಶಕ ಆನಂದ್ ತಮ್ಮ ಉಳಿತಾಯದ ಹಣದಲ್ಲಿ ಚೆನ್ನೈನ ಮೌಲಿವಕ್ಕಮ್ ನಲ್ಲಿರುವ ಸ್ನೇಹಿತನ ಕಟ್ಟಡದಲ್ಲಿ ಕಿರಾಣಿ ಅಂಗಡಿ ಪ್ರಾರಂಭಿಸಿದ್ದಾರೆ.
ಕೋವಿಡ್ 19 ವೈರಸ್ ನ ಲಾಕ್ ಡೌನ್ ಸಂದರ್ಭದಲ್ಲಿ ಸುಮ್ಮನೆ ಮನೆಯಲ್ಲಿ ಕುಳಿತಿದ್ದಾಗ, ನನ್ನ ಮನಸ್ಸಿಗೆ ಹೊಳೆದದ್ದು ಕಿರಾಣಿ ಅಂಗಡಿ ತೆರೆಯುವುದು. ತಮಿಳುನಾಡಿನಲ್ಲಿ ಕಿರಾಣಿ ಅಂಗಡಿ ತೆರೆಯಲು ಮಾತ್ರ ಅನುಮತಿ ಇದೆ. ಹೀಗಾಗಿ ನಾನು ಅಂಗಡಿ ತೆರೆಯಲು ನಿರ್ಧರಿಸಿದ್ದೆ. ನಾನೀಗ ಅಂಗಡಿಯಲ್ಲಿ ದಿನಬಳಕೆಯ ಅಡುಗೆ ಎಣ್ಣೆ, ಅಕ್ಕಿ, ಟೀ ಪುಡಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದ್ದೇನೆ. ನಾನು ಈಗ ಖುಷಿಯಾಗಿದ್ದೇನೆ ಎಂದು ಮಾಜಿ ನಿರ್ದೇಶಕ ಆನಂದ್ ತಿಳಿಸಿದ್ದಾರೆ!
ಆನಂದ್ ಅವರು Oru Mazhai Naangu Saaral,ಮತ್ತು ‘Mouna Mazhai ಎಂಬ ಸಿನಿಮಾ ನಿರ್ದೇಶಿಸಿದ್ದರು. ಅವರ ಕೊನೆಯ ಸಿನಿಮಾ ಥುಣಿಂತು ಸೈ ಅಂತಿಮ ಹಂತದಲ್ಲಿದ್ದು, ಎರಡು ಹಾಡುಗಳ ರೆಕಾರ್ಡಿಂಗ್ ಬಾಕಿ ಇದ್ದಿರುವುದಾಗಿ ತಿಳಿಸಿದ್ದಾರೆ.