ನವದೆಹಲಿ: ಭಾರತದಲ್ಲಿ 70 ವರ್ಷಗಳ ಹಿಂದೆಯೇ ಚೀತಾ ಸಂತತಿ ನಶಿಸಿಹೋಗಲು ಕಾರಣ ಬೇಟೆ ಮತ್ತು ಹವಾಮಾನ ವೈಪರೀತ್ಯ!
ಐಎಫ್ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಅವರು ಮಾಡಿರುವ ಟ್ವೀಟ್‌ಗಳು ಈ ವಿಚಾರವನ್ನು ಬಿಚ್ಚಿಟ್ಟಿವೆ. ನಮೀಬಿಯಾದಿಂದ ಭಾರತಕ್ಕೆ 8 ಚಿರತೆಗಳನ್ನು ಕರೆತರಲಾದ ದಿನವೇ ಕಾಸ್ವಾನ್ ಅವರು, ನಮ್ಮ ದೇಶದಲ್ಲಿ ಈ ಹಿಂದೆ ಚೀತಾಗಳನ್ನು ನಾಯಿಯಂತೆ ಸಾಕುತ್ತಿದ್ದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಚೀತಾಗಳು ಸಿಂಹ, ಹುಲಿ, ಚಿರತೆಯಂತಲ್ಲ. ಅವು ಮನುಷ್ಯರೊಂದಿಗೆ ಬೇಗ ಪಳಗುತ್ತವೆ. ಅದೇ ಕಾರಣಕ್ಕೆ 1878ರ ವೇಳೆ ಚೀತಾಗಳನ್ನು ನಾಯಿಗಳಂತೆ ಹಗ್ಗದಲ್ಲಿ ಕಟ್ಟಿ ಸಾಕಲಾಗುತ್ತಿತ್ತು. ಅದನ್ನು ಬಳಸಿಕೊಂಡು ಬೇರೆ ಪ್ರಾಣಿಗಳನ್ನು ಬೇಟೆಯಾಡಲಾಗುತ್ತಿತ್ತು. ಅನೇಕ ರಾಜ ಮನೆತನದ ಆಳ್ವಿಕೆಗೆ ಒಳಗಾದ ನಮ್ಮ ದೇಶದಲ್ಲಿ ರಾಜರುಗಳೂ ಚೀತಾಗಳನ್ನು ಬೇಟೆಗೆ ಬಳಸಿಕೊಳ್ಳುತ್ತಿದ್ದರು. 1556-1605ರ ಕಾಲದಲ್ಲಿ ಆಡಳಿತ ನಡೆಸಿದ್ದ ಮೊಘಲರ ರಾಜ ಅಕºರ್ ಬಳಿಯೇ ಬರೋಬ್ಬರಿ 9,000 ಚೀತಾಗಳಿದ್ದವು ಎಂಬ ಉಲ್ಲೇಖವಿದೆ.
ಬ್ರಿಟಿಷ್‌ರ ಆಕ್ರಮಣದ ನಂತರ ಎಲ್ಲೆಡೆ ಟೀ, ಕಾಫಿ ಪ್ಲಾಂಟೇಷನ್ ಮಾಡಲಾಯಿತು. ಆಗ ಚೀತಾಗಳಿಂದ ತೊಂದರೆಯಾಗಬಾರದೆಂದು ಅವುಗಳನ್ನು ಬೇಟೆಯಾಡುವುದಕ್ಕೆ ಪ್ರೋತ್ಸಾಹಿಸಲಾಯಿತು. 1871ರ ವೇಳೆಗೆ ಚೀತಾ ಮರಿ ಬೇಟೆಗೆ 6 ರೂ. ಹಾಗೂ ದೊಡ್ಡ ಚೀತಾ ಬೇಟೆಗೆ 12 ರೂ. ಪ್ರೋತ್ಸಾಹ ಧನವನ್ನು ಬ್ರಿಟಿಷ್ ಸರ್ಕಾರ ನೀಡಿತ್ತು.
ಇದಷ್ಟೇ ಅಲ್ಲದೆ ಹವಾಮಾನ ಬದಲಾವಣೆಯಿಂದಾಗಿ ಚೀತಾಗಳ ಸಂತಾನೋತ್ಪತ್ತಿ ಸಾಮರ್ಥ್ಯ ಕುಸಿದು, ಸಂತತಿಯೇ ಅವನತಿಯತ್ತ ಸಾಗಿತು ಎಂದೂ ಅವರು ಹೇಳಿದ್ದಾರೆ.
ಜಮೀನು ಬೆಲೆ ಏರಿಕೆ:
ಚೀತಾಗಳು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಬರುತ್ತಿದ್ದಂತೆಯೇ ಜಿಲ್ಲೆಯಾದ್ಯಂತ ರಿಯಲ್ ಎಸ್ಟೇಟ್ ಉದ್ಯಮ ಚೇತರಿಸಿಕೊಂಡಿದೆ. ಉದ್ಯಾನದ ಮುಖ್ಯ ದ್ವಾರವಿರುವ ಟಿಕ್ಟೋಲಿ ಗ್ರಾಮ ಮತ್ತು ಅದರ ಸುತ್ತಮುತ್ತಲಿನ ಗ್ರಾಮಗಳ ಜಮೀನಿನ ಬೆಲೆ ದುಪ್ಪಟ್ಟು ಏರಿದೆ. ಈ ಹಿಂದೆ ಬಿಘಾಕ್ಕೆ(0.619 ಎಕರೆ) 9-10 ಲಕ್ಷ ರೂ. ಇದ್ದ ಬೆಲೆ ಇದೀಗ 19-20 ಲಕ್ಷ ರೂ. ಆಗಿದೆ.