Advertisement

ಜೋತಿಷ ಶಾಸ್ತ್ರದಲ್ಲಿ ಶೀಘ್ರ ಫ‌ಲಾಫ‌ಲ ನಿರ್ದೇಶಿಸುವ ತಾಂಬೂಲ ಪ್ರಶ್ನೆ

11:57 AM May 26, 2022 | Team Udayavani |

ಮಂಗಳೂರು ತಾಲೂಕಿನ ಮಳಲಿಯಲ್ಲಿ ಬುಧವಾರ ತಾಂಬೂಲ ಪ್ರಶ್ನೆ ಇರಿಸಲಾಗಿದೆ. ಹಾಗಿದ್ದರೆ ಜೋತಿಷ ಶಾಸ್ತ್ರದ ಪ್ರಕಾರ ತಾಂಬೂಲ ಪ್ರಶ್ನೆ ಎಂದರೆ ಏನು, ಅದರ ಮಹತ್ವ, ಫ‌ಲಾಫ‌ಲಗಳ ನಿರ್ಣಯ ಹೇಗೆ? ಎನ್ನುವ ಬಗ್ಗೆ ಇಲ್ಲಿ ಲೇಖಕರು ಸಮಗ್ರವಾಗಿ ಬೆಳಕು ಚೆಲ್ಲಿದ್ದಾರೆ.

Advertisement

ಜ್ಯೋತಿಶ್ಚಕ್ಷು-ಎನ್ನುವ ಉಕ್ತಿಯಂತೆ ಜೋತಿಷ ಶಾಸ್ತ್ರವು ಕಣ್ಣಿನ ರೀತಿಯಲ್ಲಿ ಅರ್ಥಾತ್‌ ಕತ್ತಲೆ ಯಲ್ಲಿರುವ ವಸ್ತುವಿಗೆ ಬೆಳಕು ಹಿಡಿದು ಗೋಚರಕ್ಕೆ ಸಿಗುವಂತೆ ಮಾಡುವುದರಿಂದ ಜೋತಿಷ ಶಾಸ್ತ್ರವು ಪ್ರಧಾನವೆನಿಸಿದೆ.

ಈ ಜೋತಿಷ ವಿಭಾಗದಲ್ಲಿ ಹಲವು ರೀತಿಯಿಂದ ಹಲವು ಪ್ರಕಾರವಾಗಿ ವಿಮರ್ಶಿಸುವ ಕ್ರಮವಿದೆ.

ಉದಾ: ಸ್ವರ್ಣಾರೂಢ ಪ್ರಶ್ನೆ, ಮಾನುಷ ಪ್ರಶ್ನೆ, ದೇವ ಪ್ರಶ್ನೆ, ನಷ್ಟ ಪ್ರಶ್ನೆ, ತಾಂಬೂಲ ಪ್ರಶ್ನೆ, ಅಷ್ಟಮಂಗಲ ಪ್ರಶ್ನೆ ಇತ್ಯಾದಿಗಳು. ಇವೆಲ್ಲಕ್ಕೂ ಉತ್ತರಿಸಲು ಜಾತಕ ಫ‌ಲ, ಗೋಚರ ಫ‌ಲ, ಶಕುನ ಫ‌ಲ, ಗ್ರಹರಾಶಿಗಳ ಸರ್ವಕಾರತ್ವ ಇತ್ಯಾದಿ ಎಲ್ಲ ವಿಷಯಗಳ ಸಮ್ಮಿಳಿತವೇ ಜೋತಿಷ ಶಾಸ್ತ್ರ ಗ್ರಂಥವಾಗಿದೆ. ಇದರಲ್ಲಿ ತಾಂಬೂಲ ಪ್ರಶ್ನೆಯು ಪ್ರಸ್ತುತ ಕಾಲಘಟ್ಟದಲ್ಲಿ ವಿಶಿಷ್ಟವೆನಿಸಿಕೊಳ್ಳುತ್ತದೆ.

ಪ್ರಸ್ತುತದಲ್ಲಿ ತಾಂಬೂಲ ಪ್ರಶ್ನೆ ವಿಭಾಗವನ್ನು ವಿಮರ್ಶಿಸುವಾಗ ಒಂದು ವಾಕ್ಯ ಬರುತ್ತದೆ.

Advertisement

ಪ್ರಷ್ಟ್ರಾ ವಿತೀರ್ಣ ತಾಂಬೂಲೈಃ ಶುಭಾಶುಭಮಶೇಷತಃ|
ವಾಚ್ಯಂ ದ್ವಾದಶ ಭಾವೋತ್ಥಂ ತತ್ವಕಾರೋ-ಥ ಲಿಖ್ಯತೇ ||

ಪೃಚ್ಚಕನು (ಪ್ರಶ್ನೆಯನ್ನು ಕೇಳಲಿಕ್ಕಿರುವ ಯಜ ಮಾನರು) ಪ್ರಶ್ನೆಯ ಆರಂಭ ಕಾಲದಲ್ಲಿ ತನಗೆ ಇಷ್ಟ ಬಂದಷ್ಟು ತಾಂಬೂಲವನ್ನು (ವೀಳ್ಯದೆಲೆಯನ್ನು)ಜೋತಿಷಿಗೆ ಕೊಟ್ಟು ತಾನು ಅಂದುಕೊಂಡಂತಹ ವಿಷಯದ ಬಗ್ಗೆ ಎರಡು ವಾಕ್ಯದಲ್ಲಿ ಉತ್ತರಿಸಿದಾಗ ಜೋತಿಷಿಯಾದವನು ಆ ಯಜಮಾನನು ಮೊದಲು ಯಾವ ಅಕ್ಷರವನ್ನು ಹೇಳುತ್ತಾನೋ ಅದನ್ನು ಗಣನೆಗೆ ತೆಗೆದುಕೊಳ್ಳುತ್ತಾನೆ. ಅನಂತರ ಅದನ್ನು ಫ‌ಲ ನಿರ್ದೇಶನ ಮಾಡುವ ಹೊತ್ತಿನಲ್ಲಿ ಯಜಮಾನ ಹೇಳಿದ ಮೊದಲ ಅಕ್ಷರವೂ ಕೂಡ ಚಿಂತನಾ ವಿಷಯವಾಗಿರುತ್ತದೆ. ಯಜಮಾನ ಕೊಟ್ಟಂತಹ ವೀಳ್ಯದೆಲೆಯನ್ನು ಜಾಗರೂಕ ನಾಗಿ ಜೋತಿಷಿಯಾದವನು ತೆಗೆದುಕೊಂಡು ಈ ವೀಳ್ಯದೆಲೆ ಗಳಿಂದ 12 ಭಾವಗಳನ್ನು ಕಲ್ಪಿಸಿ ಒಂದೊಂದು ವೀಳ್ಯದೆಲೆಯು ಒಂದೊಂದು ಆಕಾರವುಳ್ಳದ್ದಾಗಿರುವುದರಿಂದ ಪ್ರತಿಯೊಂದು ವೀಳ್ಯದೆಲೆಯನ್ನು ಕೂಲಂಕಷ ವಾಗಿ ಪರಿಶೀಲಿಸಿ ಶುಭ ಹಾಗೂ ಅಶುಭ ಫ‌ಲಗಳನ್ನು ಹೇಳುತ್ತಾರೆ. ಈ ವೀಳ್ಯದೆಲೆಯಲ್ಲಿ ಶುಭಾಶುಭ ಫ‌ಲ ಹೇಗೆ ಹೇಳುವುದೆಂದು “ಪ್ರಶ್ನೆ ಮಾರ್ಗಂ’ ಎನ್ನುವ ಗ್ರಂಥದಲ್ಲಿ ಹೇಳಲ್ಪಟ್ಟಿದೆ.

ತಾಂಬೂಲೈ: ಪೃಷ್ಟದತ್ತೈರಪಿ ಫ‌ಲಮುಖೀಲಂ ತಸ್ಯ ವಕ್ತವ್ಯಮೇವಂ
ಪ್ರಾರಂಭೊಪರ್ಯಧಸ್ತಾದ್ಗಣನಮಿಹ ವಪುಃ ಪೂರ್ವ ಮಹೊಧ್ವಯೋಸ್ಸಾ ತ್‌||
ಮ್ಲಾನಿಕ್ಷಿತ್ಯಾದ್ಯುಪೇತಂ ತದಯುತಮಪಿ ಯದ್ಭಾವ ಸಂಬಂಧಿ ಪತ್ರಂ
ತಸ್ಯ ವ್ಯಾಧ್ಯಾದ್ಯನಿಷ್ಠಂ ಭವತಿ ಶುಭಮಪಿ ಪ್ರಾಪ್ತಿ ಸಂವರ್ಧನಾದ್ಯಮ್‌||
ಯಜಮಾನನಾದವನು ಜೋತಿಷಿಯ ಕೈಯಲ್ಲಿ ಕೊಟ್ಟ ತಾಂಬೂಲಗಳಿಂದ ಕೇವಲ ಮೇಲಿನ 12 ವೀಳ್ಯ ದೆಲೆ ಯಲ್ಲಿ ಮಾತ್ರ 12 ಭಾವಗಳನ್ನು ಚಿಂತಿಸಿಕೊಳ್ಳ ಬೇಕು.

– ಒಂದನೇ ವೀಳ್ಯದೆಲೆಯಲ್ಲಿ ಲಗ್ನಭಾವ ಅರ್ಥಾತ್‌ ಯಜಮಾನನ ಶರೀರದ ಚಿಂತನೆ ಇಲ್ಲ ದಿದ್ದರೆ ಯಜಮಾನನು ಯಾವ ಪ್ರದೇಶವನ್ನು ಅಂದಕೊಂಡಿರುತ್ತಾನೋ ಆ ಸ್ಥಳದ ವಿಮರ್ಶೆ. ಉದಾ: ದೇವಾಲಯ, ಗೃಹ ಇತ್ಯಾದಿ ಮಾಡಬೇಕು.
– ಎರಡನೇ ಎಲೆಯಿಂದ ಯಜಮಾನನ ಅಥವಾ ಸ್ಥಳದಲ್ಲಿರುವ ಧನದ ಚಿಂತನೆ ಮಾಡಬೇಕು.
– ಮೂರನೇ ಎಲೆಯಿಂದ ಯಜಮಾನ ಅಥವಾ ಸ್ಥಳಕ್ಕೆ ಸಹಾಯದ ವಿಮರ್ಶೆ
– ನಾಲ್ಕರಿಂದ ವೃದ್ಧಿ ಅಥವಾ ಹ್ರಾಸ
– ಐದರಿಂದ ಮಂತ್ರ, ಉಪಾಸನಾದಿಗಳು
– ಆರರಿಂದ ಶತ್ರುಗಳ ಚಿಂತನೆ
– ಏಳರಿಂದ ನಷ್ಟಾರ್ಥ, ಭಾರ್ಯಾ ಚಿಂತನೆ
– ಎಂಟರಿಂದ ಮಠ, ಮಂದಿರ, ಆಯುಷ್ಯಾದಿಗಳ ಚಿಂತನೆ
– ಒಂಬತ್ತರಿಂದ ಭಾಗ್ಯಾದಿ ಚಿಂತನೆ
– ಹತ್ತರಿಂದ ದೇವಾಲಯಗಳು, ಕೀರ್ತಿ, ಕರ್ಮಾದಿಗಳ ಚಿಂತನೆ
– ಹನ್ನೊಂದರಿಂದ ಲಾಭಾದಿಗಳು, ಬಂಧು ವರ್ಗಾದಿಗಳ ಚಿಂತನೆ
– ಹನ್ನೆರಡರಿಂದ ಸ್ಥಾನ ಭ್ರಂಶತೆ, ವೈಕಲ್ಯಾದಿಗಳು ಇನ್ನಿತರ ಚಿಂತನೆ
ಹೀಗೆ ಹನ್ನೆರಡು ಭಾವಗಳು ವಿಮರ್ಶಿಸಲ್ಪಡುತ್ತವೆ.

ಹಿಂದೆ ಹೇಳಿದ ಫ‌ಲಗಳ ಶುಭಾಶುಭಗಳನ್ನು ಯಜಮಾನನು ಕೊಟ್ಟಂತಹ ವೀಳ್ಯದೆಲೆಯ ಆಕಾರ ಹಾಗೂ ಆ ವೀಳ್ಯದೆಲೆಯ ಸಮಗ್ರ ಚಿತ್ರಣವನ್ನು ನೋಡಿ ವಿಮರ್ಶಿಸುತ್ತಾರೆ. ವೀಳ್ಯದೆಲೆಯು ಚಿಕ್ಕದೋ, ದೊಡ್ಡದೋ, ಹರಿದಿದೆಯೋ, ಕೊಳಕು ಇದೆಯೋ ಅಥವಾ ನಿರ್ಮಲವಾಗಿದೆಯೋ, ನೀರಿನ ಹನಿ ಇದೆಯೋ, ತೂತಾಗಿದೆಯೋ, ತೂತಾಗಿದ್ದರೆ ಯಾವ ಕಡೆಯಲ್ಲಿ ತೂತಾಗಿದೆ ಆ ಭಾಗದಲ್ಲಿ ಹಾನಿ ಇದೆ ಎಂದು ಹಾಗೂ ಪರಿಪೂರ್ಣತೆಯಾಗಿ ಸುಂದರವಾದ ವೀಳ್ಯದೆಲೆಯಾದರೆ ಆ ಭಾವವು ಬಹಳ ಸೊಗಸಾಗಿದೆ ಎಂದೂ ಆ ಎಲೆಯು ಹಾಳಾಗಿ ತೋರಿದರೆ ಆ ಭಾವವು ನಷ್ಟವಾಗಿದೆ ಎಂದು ವಿಮರ್ಶಿಸುತ್ತಾರೆ. ಉದಾ: ವೀಳ್ಯ ದೆಲೆಯು ರಂಧ್ರವಾಗಿದ್ದರೆ ಶತ್ರುಗಳಿಂದ ಉಪದ್ರವ ಜಾಸ್ತಿ ಇದ್ದು ನಷ್ಟವಾಗಿದೆ ಎಂದೂ, ಎಲೆಯಲ್ಲಿ ನೀರಿದ್ದರೆ ಯಾವ ಭಾವದ ಎಲೆಯು ಆ ಭಾವದ ದಿಕ್ಕಿನಲ್ಲಿ ಜಲ ಸಮೃದ್ಧಿ ಎಂದೂ, ಎಂಟನೇ ಎಲೆ ಪರಿಪೂರ್ಣವಿದ್ದರೆ ಯಜಮಾನ ಅಥವಾ ಸ್ಥಳಕ್ಕೆ ಪರಿಪೂರ್ಣ ಆಯುಷ್ಯವಿದೆ ಎಂದೂ, ಹಾಳಾಗಿದ್ದರೆ ಅಲ್ಪಕಾಲದಲ್ಲಿ ನಾಶವಾಗುವುದೆಂದೂ, ಹತ್ತನೇ ಎಲೆ ಹಾಳಾಗಿದ್ದರೆ ಅಪಕೀರ್ತಿ, ಕರ್ಮಹಾನಿ ಆಗುವುದೆಂದೂ ಆರನೇ ಎಲೆ ದೋಷವಿದ್ದರೆ ಶತ್ರುಕಾಟ, ರೋಗಾದಿ ಬಾಧೆ ಎಂದೂ, ಆರನೇ ಎಲೆ ದೊಡ್ಡದಿದ್ದರೆ ಶತ್ರುಗಳೂ ಕೂಡ ಬಹಳಷ್ಟು ಮಂದಿ ಇದ್ದಾರೆ ಎಂದೂ 9ನೇ ಎಲೆ ಒಳ್ಳೆಯದಿದ್ದರೆ ವಿಪರೀತ ಭಾಗ್ಯಾದಿಗಳು ಲಭಿಸುವುದೆಂದೂ ಎಲೆ ತೂತಾಗಿ ದ್ದರೆ ಅಥವಾ ದೋಷಪೂರಿತವಾಗಿದ್ದರೆ ದೌರ್ಭಾಗ್ಯ ಗಳು ಬರುವುದೆಂದೂ ಚಿಂತಿಸುವ ಪರಿಪಾಠ ವಿದೆ. ಈ ವೀಳ್ಯದೆಲೆಯಲ್ಲಿ ಎಡಭಾಗವು ಸ್ತ್ರೀ ಭಾಗ ಎಂದೂ, ಬಲಭಾಗವು ಪುರುಷ ಭಾಗವೆಂದೂ ವಿಮರ್ಶಿಸುವ ಕ್ರಮವಿದೆ. ಹೀಗೆ ಹಲವು ರೀತಿಯಲ್ಲಿ ತಾಂಬೂಲ ಚಿಂತನೆ ಮಾಡುವ ಕ್ರಮವಿದೆ. ಅದಲ್ಲದೆ ಗ್ರಹೋದಯ ಭಾವ ಚಿಂತನೆ ಎಂದು ಒಂದು ಕ್ರಮವಿದೆ.

ಯಜಮಾನನಾದವನು ಜೋತಿಷಿಗೆ ಕೊಡುವ ವೀಳ್ಯದೆಲೆ ಎಲ್ಲವನ್ನೂ ಲೆಕ್ಕಹಾಕಿ ಅದನ್ನು ಎರಡರಿಂದ ಗುಣಿಸಿ ಬಂದ ಮೊತ್ತಕ್ಕೆ ಪುನಃ ಐದರಿಂದ ಗುಣಿಸಿ ಒಂದು ಕೂಡಿಸಿ ಏಳರಿಂದ ಭಾಗಿಸಿ ಬಂದ ಶೇಷ ಒಂದು ಆದರೆ ಚಂದ್ರೋದಯ, ಮೂರು ಆದರೆ ಕುಜೋದಯ, ನಾಲ್ಕು ಆದರೆ ಬುಧ, ಐದು ಆದರೆ ಗುರು, ಆರು ಆದರೆ ಶುಕ್ರ, ಸೊನ್ನೆಯಾದರೆ ಶನಿ ಉದಯ ಎಂದು ಚಿಂತಿಸಿ. ತತ್ಕಾಲ ಗ್ರಹಸ್ಥಿತಿಯಲ್ಲಿ ಈಗ ಉದಿತನಾದ ಗ್ರಹನು ಕುಂಡಲಿಯಲ್ಲಿ ಎಲ್ಲಿ ಇದ್ದಾನೋ ಅದನ್ನೇ ಲಗ್ನಭಾವ ಎಂದು ವಿಮರ್ಶೆ ಮಾಡಿ 12 ಭಾವಗಳ ಫ‌ಲ ಹೇಳುವ ಕ್ರಮವೂ ಇದೆ.ಈ ರೀತಿಯಾಗಿ ಈ ತಾಂಬೂಲಾದಿ ಪ್ರಶ್ನೆಗಳು ನಿರಂತರ ಜೋತಿಷದ ಅಭ್ಯಾಸ ಹಾಗೂ ಅನುಭವದ ಪ್ರಕಾರ ವಿಮರ್ಶೆಗೊಳ್ಳುತ್ತಾ ಹೋಗುತ್ತದೆ. ಗುರುಮುಖೇನ ಅಭ್ಯಾಸ ಮಾಡಿ ಅನಂತರ ಮಾಡುವ ಪ್ರಶ್ನಾದಿಗಳು ಫ‌ಲಪ್ರದವಾಗುವುದರಲ್ಲಿ ಸಂಶಯವೇ ಇಲ್ಲ.

ತಾಂಬೂಲ ಪ್ರಶ್ನೆಯ ಮಹತ್ವ
ಆರೂಢಾದಿ ಪ್ರಶ್ನೆಗಳಲ್ಲಿ ಗ್ರಹ ಗಣಿತದ ಮುಖೇನ ಚಿಂತಿಸಿ ಹೇಳುವ ಕ್ರಮ ವಿರುವುದರಿಂದ ಜೋತಿಷ ವಿಭಾಗದ ಕಲ್ಪನೆ ಇದ್ದವರಿಗೆ ಅದು ಅರ್ಥವಾಗುತ್ತದೆ. ಆದರೆ ಸಾಮಾನ್ಯ ಜನರಿಗೆ ಇದು ಅರ್ಥವಾಗದೇ ಜೋತಿಷಿಗಳ ಮಾತನ್ನು ಮಾತ್ರ ನಂಬುವಂಥ ಪರಿಸ್ಥಿತಿ ಬರುತ್ತದೆ. ಆದರೆ ತಾಂಬೂಲ ಪ್ರಶ್ನೆಯಲ್ಲಿ ಪ್ರತಿಯೊಂದೂ ವೀಳ್ಯದೆಲೆಯನ್ನು ಕೂಲಂಕಷವಾಗಿ ವಿಮರ್ಶಿಸಿ ಆ ಎಲೆಯ ಲೋಪದೋಷಗಳು ಇತ ರರಿಗೂ ನೋಡಲು ಸಿಗುವುದರಿಂದ ಹಾಗೂ ಆ ಲೋಪದೋಷಗಳು ಆ ವೀಳ್ಯದೆಲೆಯ ಯಾವ ಭಾಗದಲ್ಲಿ ಆಗಿದೆಯೋ ಅದೇ ಭಾಗದಲ್ಲಿ ಪ್ರಸ್ತುತ ಕಾಲಘಟ್ಟವನ್ನು ವಿಮರ್ಶಿಸುವುದರಿಂದ ತಾಂಬೂಲ ಪ್ರಶ್ನೆಯೆನ್ನುವುದು ಜನ ಜನಿತವಾಗಿ ಬಂದಿದೆ. ಅಷ್ಟಮಂಗಲ ಮೊದ ಲಾದ ಪ್ರಶ್ನಾ ಚಿಂತನೆಯಲ್ಲಿ ತುಂಬಾ ದಿನಗಳ ತನಕ ವಿಮಶಾìದಿಗಳನ್ನು ಮಾಡಿ ಕೊನೆಗೆ ಅದರ ಫ‌ಲಾಫ‌ಲಗಳನ್ನು ಹೇಳು ವುದರಿಂದ ಅಷ್ಟು ಸಮಯದ ತನಕ ಜನರಿಗೆ ಕಾಯುವ ತಾಳ್ಮೆಯು ಇಲ್ಲ ದಿರುವಾಗ ಈ ತಾಂಬೂಲ ಪ್ರಶ್ನೆ ಎನ್ನು ವಂಥದ್ದು ಯಜಮಾನನ ಕೈಯಿಂದ ತೆಗೆದು ಕೊಂಡ ಶೀಘ್ರದಲ್ಲಿಯೇ ಫ‌ಲಾ ಫ‌ಲ ಗಳು ನಿರ್ದೇಶಿತವಾಗುವುದರಿಂದ ಕೂಡ “ತಾಂಬೂಲ ಪ್ರಶ್ನೆ’ ಅತ್ಯಂತ ಮಹತ್ವ ದ್ದಾಗಿ ರುತ್ತದೆ ಹಾಗೂ ಸ್ಪಷ್ಟವಾದ ಸತ್ಯದ ಸುಳುಹನ್ನು ಕೂಡ ಕೊಡುವ ಕಾರಣ ಪ್ರಸ್ತುತ ಕಾಲಘಟ್ಟದಲ್ಲಿಯೂ ತಾಂಬೂಲ ಪ್ರಶ್ನೆಯು ಪ್ರಸಿದ್ಧಿಯನ್ನು ಪಡೆದಿದೆ.

(ಲೇಖಕರು: ಜೋತಿಷಿ ಮತ್ತು ವೈದಿಕರು, ಉಡುಪಿ)

– ಕೊರಂಗ್ರಪಾಡಿ ಶ್ರೀನಿವಾಸ ತಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next