ನೆಲಮಂಗಲ: ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಹಾಲಿ ಹಾಗೂ ಮಾಜಿ ಅಧ್ಯಕ್ಷರ ನಡುವಿನ ಗೊಂದಲಕ್ಕೆ ತಹಶೀಲ್ದಾರ್ ಕೆ.ಎನ್.ರಾಜಶೇಖರ್ ತೆರೆ ಎಳೆದಿದ್ದು, ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸೂಚಿಸಿದ್ದಾರೆ.
ತಾಲೂಕು ಕಸಾಪ ಹಾಲಿ ಅಧ್ಯಕ್ಷ ಹೊನ್ನ ಶಾಮಯ್ಯ ವಿರುದ್ಧ ಏಕಪಕ್ಷೀಯ ನಿರ್ಧಾರ, ಕಸಾಪ ಮಾಜಿ ಅಧ್ಯಕ್ಷರು ಹಾಸಗು ಮಹಾಪೋಷಕರಿಗೆ ಮಾಹಿತಿ ನೀಡದೇ ಸಮ್ಮೇಳನಕ್ಕೆ ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿದ್ದವು. ಈ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಕೆ.ಎನ್.ರಾಜಶೇಖರ್ ನೇತೃತ್ವದಲ್ಲಿ ನಡೆದ ಸಭೆ ಏರ್ಪಡಿಸಲಾಗಿತ್ತು.
ಸಮ್ಮೇಳನ ಮುಂದೂಡಲು ಆಗ್ರಹ: ಕಸಾಪ ತಾಲೂಕು ಅಧ್ಯಕ್ಷರು, ತಾಲೂಕು ಸಮ್ಮೇಳನ ನಡೆಸಲು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ಕನ್ನಡ ಪರ ಸಂಘಟನೆ, ಕಸಾಪ ಮಾಜಿ ಅಧ್ಯಕ್ಷರು, ಮಹಾಪೋಷಕರಿಗೆ ಮಾಹಿತಿ ನೀಡದೆ ಸಮ್ಮೇಳನ ನಡೆಸಲಾಗುತ್ತಿದೆ. ಆದ್ದರಿಂದ ಸಮ್ಮೇಳನವನ್ನು ಮುಂದೂಡಬೇಕು ಎಂದು ಮಾಜಿ ಅಧ್ಯಕ್ಷರ ತಂಡ ಆಗ್ರಹಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಹೊನ್ನ ಶಾಮಯ್ಯ, ಇದು ನನ್ನ ಏಕಪಕ್ಷೀಯ ನಿರ್ಧಾರವಲ್ಲ. ಕಾರ್ಯಕಾರಿ ಮಂಡಳಿ ಜೊತೆ ಚರ್ಚಿಸಿ, ಸಮ್ಮೇಳನದ ದಿನಾಂಕ ನಿಗದಿ ಮಾಡಲಾಗಿದೆ. ಈಗಾಗಲೇ ಕಾರ್ಯಕ್ರಮದ ಪೂರ್ಣ ತಯಾರಿ ಹಾಗೂ ಪ್ರಚಾರ ಮಾಡಲಾಗಿದೆ. ಸಮಾರಂಭ ಮುಂದೂಡಲು ಸಾಧ್ಯವಿಲ್ಲ. ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸಲಾಗುವುದು ಎಂದು ಸಮಜಾಯಿಷಿ ನೀಡಿದರು.
ಆರೋಪದಿಂದ ಸಭೆಯಲ್ಲಿ ಗದ್ದಲ: ಮಾಜಿ ಅಧ್ಯಕ್ಷರ ಅವಧಿಯಲ್ಲಿ ಕಸಾಪದ ಪ್ರಚಾರವೇ ಆಗಿರಲಿಲ್ಲ ಎಂದು ಆರೋಪಿಸಿದ ಸದಸ್ಯ ಉಮೇಶ್ ವಿರುದ್ಧ ಮಾಜಿ ಅಧ್ಯಕ್ಷರು ಕೆಂಡಾಮಂಡಲವಾದರು. ಅವರಿಗೆ ಪ್ರತಿಕ್ರಿಯಿಸಿ, ತಾಲೂಕು ಕಸಾಪ ಬೆಳವಣಿಗೆಗೆ ನಾವು ಸಾಕಷ್ಟು ಶ್ರಮಿಸಿದ್ದೇವೆ. ಸಂಕಷ್ಟದಲ್ಲಿದ್ದಾಗ ಉಳಿಸಿ, ಬೆಳೆಸಿದ್ದೇವೆ. ಇಂತ ಅರೋಪಗಳು ಖಂಡನೀಯ ಎಂದರು. ಈ ವೇಳೆ ಸಭೆಯಲ್ಲಿ ಪರ-ವಿರೋಧ ಸದಸ್ಯರ ನಡುವೆ ಗದ್ದಲ ಉಂಟಾಯಿತು. ಇದರಿಂದಾಗಿ ತಹಶೀಲ್ದಾರ್ ಕೆ.ಎನ್ ರಾಜಶೇಖರ್, ಮಧ್ಯ ಪ್ರವೇಶಿಸಿ ಶಾಂತಿಯಿಂದ ಚರ್ಚೆ ಮಾಡುವಂತೆ ಆಗ್ರಹಿಸಿದರು.
ನಿಗದಿಯಂತೆ ಸಮ್ಮೇಳನ ನಡೆಯಲಿ: ತಹಶೀಲ್ದಾರ್ ರಾಜಶೇಖರ್ ಮಧ್ಯ ಪ್ರವೇಶಿಸಿದರೂ ಹಾಲಿ ಹಾಗೂ ಮಾಜಿ ಅಧ್ಯಕ್ಷರ ಗದ್ದಲ ನಿಲ್ಲಲಿಲ್ಲ. ಸಭೆಯನ್ನು ಶಾಂತಸ್ಥಿತಿಗೆ ಮರಳಿಸಿ, ಸಮ್ಮೇಳನಕ್ಕೆ ಸಂಬಂಧಿಸಿದಂತೆ ಹಾಲಿ ಅಧ್ಯಕ್ಷರು ಈಗಾಗಲೇ ಕ್ಷಮೆಯಾಚಿಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಈ ರೀತಿ ಬೇಜವಾಬ್ದಾರಿತನ ತೋರದಂತೆ ಸೂಚಿಸುತ್ತೇನೆ. ಹೀಗಾಗಿ ಈಗಾಗಲೇ ನಿಗದಿಯಾಗಿರುವ ಜುಲೈ 27ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿ. ಸಮ್ಮೇಳನದ ಯಶಸ್ಸಿಯಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಸೂಚಿಸಿ ಸಭೆಯನ್ನು ಅಂತ್ಯಗೊಳಿಸಿದರು.
ತಹಸೀಲ್ದಾರ್ ಕೆ.ಎನ್.ರಾಜಶೇಖರ್, ಉಪತಹಸೀಲ್ದಾರ್ ರಮೇಶ್, ಶಿರಸ್ತೇದಾರ ಶ್ರೀನಿವಾಸ ಮೂರ್ತಿ, ಹಾಲಿ ಅಧ್ಯಕ್ಷ ಹೊನ್ನಶಾಮಯ್ಯ, ನಿಕಟ ಪೂರ್ವ ಅಧ್ಯಕ್ಷ ರಾಜಶೇಖರ್, ಮಾಜಿ ಅಧ್ಯಕ್ಷ ನೆಗಳೂರು, ಗೋಪಾಲ್, ಸಿದ್ಧರಾಜು, ಖಲೀಂ ವುಲ್ಲಾ, ಕಾರ್ಯದರ್ಶಿ ಗಂಗರಾಜು, ಕೋಶಾಧ್ಯಕ್ಷ ಕೇಶವ ಮೂರ್ತಿ, ರಂಗನಾಥ್ ಇದ್ದರು.