Advertisement

ತಾ.ಪಂ., ಜಿ.ಪಂ. ಕ್ಷೇತ್ರಗಳ ಸಂಖ್ಯೆ ಏರುಪೇರು

11:22 PM Jan 04, 2023 | Team Udayavani |

ಬೆಂಗಳೂರು: ರಾಜ್ಯದ ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ ಕ್ಷೇತ್ರಗಳು ಮತ್ತದರ ಭೌಗೋಳಿಕ ಗಡಿಗಳನ್ನು ಹಾಗೂ ಚುನಾಯಿತ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಿ ಕರ್ನಾಟಕ ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗ ಕೊನೆಗೂ ಅಧಿಸೂಚನೆ ಹೊರಡಿಸಿದ್ದು, ಕ್ಷೇತ್ರಗಳ ಸಂಖ್ಯೆಯಲ್ಲಿ ಏರುಪೇರು ಆಗಿದೆ.

Advertisement

ಸೀಮಾ ನಿರ್ಣಯ ಆಯೋಗ ಸೋಮವಾರ ಪ್ರಕಟಿಸಿದಂತೆ ಜಿಲ್ಲಾ ಪಂಚಾಯತ್‌ ಕ್ಷೇತ್ರಗಳು 1,117 ಹಾಗೂ ತಾಲೂಕು ಪಂಚಾಯತ್‌ ಕ್ಷೇತ್ರಗಳು 3,649 ಆಗಿವೆ. 2021ರಲ್ಲಿ ರಾಜ್ಯ ಚುನಾವಣ ಆಯೋಗ ಪ್ರಕಟಿಸಿದ ಪ್ರಕಾರ 1,192 ಜಿ.ಪಂ ಹಾಗೂ 3,298 ತಾ.ಪಂ. ಕ್ಷೇತ್ರಗಳಿದ್ದವು. ಈಗ ಸೀಮಾ ನಿರ್ಣಯ ಆಯೋಗ ಹೊಸ ಅಧಿಸೂಚನೆ ಪ್ರಕಟಿಸಿದ ಮೇಲೆ 75 ಜಿ.ಪಂ. ಕ್ಷೇತ್ರಗಳು ಕಡಿಮೆ ಆಗಿದ್ದು, 351 ತಾ.ಪಂ. ಕ್ಷೇತ್ರಗಳು ಹೆಚ್ಚಾಗಿವೆ. ಆಕ್ಷೇಪಣೆಗಳಿಗೆ 15 ದಿನ ಕಾಲಾವಕಾಶವನ್ನು ಸೀಮಾ ನಿರ್ಣಯ ಆಯೋಗ ಕೊಟ್ಟಿದೆ. ಆಕ್ಷೇಪಣೆಗಳ ಪ್ರಮಾಣ ಹಾಗೂ ಬಗೆ ಹೇಗಿರುತ್ತದೆ ಎಂಬುದರ ಮೇಲೆ ಮುಂದಿನ ಪ್ರಕ್ರಿಯೆ ಅವಲಂಬಿತವಾಗಿದೆ.

ಜನಸಂಖ್ಯೆ ಮತ್ತು ಕಾಯ್ದೆಯಲ್ಲಿರುವ ಅವಕಾಶಗಳನ್ನು ಆಧರಿಸಿ ಕ್ಷೇತ್ರಗಳು ಹಾಗೂ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ ಎಂದು ಸೀಮಾ ನಿರ್ಣಯ ಆಯೋಗ ಹೇಳುತ್ತಿದೆ. ಕ್ಷೇತ್ರಗಳು ಮತ್ತು ಸದಸ್ಯರ ಸಂಖ್ಯೆ ಅಂತಿಮಗೊಂಡ ಬಳಿಕ ಮೀಸಲಾತಿ ನಿಗದಿ ಪ್ರಕ್ರಿಯೆ ಪ್ರಾರಂಭಿಸಬೇಕಾಗುತ್ತದೆ. ಒಬಿಸಿ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ನೀಡುವ ಸಂಬಂಧ ರಚಿಸಲಾಗಿರುವ ನ್ಯಾ. ಭಕ್ತವತ್ಸಲ ಆಯೋಗದ ವರದಿಯಂತೆ ತಾ.ಪಂ. ಮತ್ತು ಜಿ.ಪಂ, ಮೀಸಲಾತಿ ನಿಗದಿಪಡಿಸಬೇಕಾಗಿರುವುದರಿಂದ ಸರ್ಕಾರದ ಪಾಲಿಗೆ ಇದು ಸವಾಲಿನ ಕೆಲಸ ಆಗಿದೆ.

ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು:

ತಾ.ಪಂ. ಹಾಗೂ ಜಿ.ಪಂ. ಕ್ಷೇತ್ರಗಳ ಜನಸಂಖ್ಯೆ ಬಗ್ಗೆ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆಗೆ 2022ರ ಡಿಸೆಂಬರ್‌ನಲ್ಲಿ ತಿದ್ದುಪಡಿ ತರಲಾಗಿತ್ತು. ಸೆಕ್ಷನ್‌ 119ರಿಂದ 121 ಮತ್ತು ಸೆಕ್ಷನ್‌ 160ರಿಂದ 164ಕ್ಕೆ ತಿದ್ದುಪಡಿ ತಂದು 7 ಲಕ್ಷ ಜನಸಂಖ್ಯೆಗೆ ಕನಿಷ್ಠ 25 ಜಿ.ಪಂ. ಸದಸ್ಯರು, 7ರಿಂದ 9.5 ಲಕ್ಷ ಜನಸಂಖ್ಯೆಗೆ ಕನಿಷ್ಠ 28 ಜಿ.ಪಂ ಸದಸ್ಯರು ಇರಬೇಕು. ಅದೇ ರೀತಿ 2.30 ಲಕ್ಷ ಗ್ರಾಮೀಣ ಜನಸಂಖ್ಯೆಗೆ ಕನಿಷ್ಠ 12 ತಾ.ಪಂ ಸದಸ್ಯರು ಇರಬೇಕು ಎಂಬ ಆಂಶ ತರಲಾಗಿತ್ತು. ಸೆಕ್ಷನ್‌ 121 ಪ್ರಕಾರ 2 ಲಕ್ಷ ಗ್ರಾಮೀಣ ಜನಸಂಖ್ಯೆ ಹೊಂದಿರುವ ತಾಲೂಕುಗಳಲ್ಲಿ ಪ್ರತಿ 12 ಸಾವಿರಕ್ಕೆ ಕಡಿಮೆಯಿಲ್ಲದ ಜನಸಂಖ್ಯೆಗೆ ಒಬ್ಬ ತಾ.ಪಂ. ಸದಸ್ಯ ಇರಬೇಕು.

Advertisement

ಅದೇ ರೀತಿ 1 ಲಕ್ಷ ಮೀರಿದ ಹಾಗೂ 2 ಲಕ್ಷ ಮೀರದ ಗ್ರಾಮೀಣ ಜನಸಂಖ್ಯೆ ಹೊಂದಿರುವ ತಾಲೂಕುಗಳಲ್ಲಿ ಪ್ರತಿ 10 ಸಾವಿರ ಜನಸಂಖ್ಯೆಗೆ ಒಬ್ಬ ತಾ.ಪಂ. ಸದಸ್ಯರಂತೆ ಕನಿಷ್ಠ 11 ಚುನಾಯಿತ ಸದಸ್ಯರು ಇರಬೇಕು. 50ರಿಂದ 1 ಲಕ್ಷ ಜನಸಂಖ್ಯೆಗೆ ಒಂಭತ್ತು ಸದಸ್ಯರು. 50 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಗೆ ಏಳು ಮಂದಿ ಸದಸ್ಯರು ಇರಬೇಕು. ಅದೇ ರೀತಿ ಸೆಕ್ಷನ್‌ 160 ಪ್ರಕಾರ ಒಂದು ಜಿಲ್ಲೆಯಲ್ಲಿ 35ರಿಂದ 45 ಸಾವಿರ ಜನಸಂಖ್ಯೆಗೆ ಒಬ್ಬರಂತೆ ಒಂದು ಜಿÇÉೆಯಲ್ಲಿ 20 ಜಿ.ಪಂ. ಸದಸ್ಯರು ಇರಬೇಕು ಎಂದು ತಿದ್ದುಪಡಿ ತರಲಾಗಿತ್ತು. ಅದನ್ನು ಆಧರಿಸಿಯೇ ಈಗ ಕ್ಷೇತ್ರಗಳ ಗಡಿ ಮತ್ತು ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ.

ಜಿ.ಪಂ. ತಾ.ಪಂ. ಕ್ಷೇತ್ರಗಳ ಭೌಗೋಳಿಕ ಪ್ರದೇಶ ಹಾಗೂ ಚುನಾಯಿತ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ. ಸಾರ್ವಜನಿಕರಿಂದ ಬರುವ ಆಕ್ಷೇಪಣೆಗಳನ್ನು ಆಲಿಸಿ ಅಂತಿಮ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ಅದಾದ ಬಳಿಕ ಸರ್ಕಾರ ಮೀಸಲಾತಿ ನಿಗದಿಪಡಿಸಲಿದೆ.ಎಂ. ಲಕ್ಷ್ಮೀನಾರಾಯಣ,  ಸೀಮಾ ನಿರ್ಣಯ ಆಯೋಗ ಅಧ್ಯಕ್ಷ

 ಸೀಮಾ ನಿರ್ಣಯ ಆಯೋಗ ಹೊರಡಿಸಿರುವ ಅಧಿಸೂಚನೆ ಪರಿಶೀಲಿಸಲಾಗುತ್ತಿದೆ. ಅಂತಿಮ ಮೀಸಲಾತಿ ಪ್ರಕಟಿಸಿದ ಬಳಿಕ ಚುನಾವಣ ಆಯೋಗದ ಕೆಲಸ ಪ್ರಾರಂಭವಾಗುತ್ತದೆ. ಮೀಸಲಾತಿ ಅಂತಿಮ ಯಾವಾಗ ಆಗುತ್ತದೆ, ಅದಾದ ನಂತರ ಪರಿಸ್ಥಿತಿ ಹೇಗಿರುತ್ತದೆ ಎಂದು ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಎಸ್‌. ಹೊನ್ನಾಂಬ,  ರಾಜ್ಯ ಚುನಾವಣ ಆಯೋಗ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next