ಹನೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಹನೂರು ಶೈಕ್ಷಣಿಕ ವಲಯ ಉತ್ತಮ ಸಾಧನೆಗೈದಿದ್ದು ಚಾಮರಾಜನಗರ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ರಾಜ್ಯದ 203 ತಾಲೂಕುಗಳ ಪೈಕಿ 11ನೇ ಸ್ಥಾನ ಪಡೆದಿದೆ. ಅಲ್ಲದೆ ಶೈಕ್ಷಣಿಕ ವಲಯದ ವಿದ್ಯಾರ್ಥಿಗಳು ಜಿಲ್ಲೆಯಲ್ಲಿಯೇ 2ನೇ ಮತ್ತು 3ನೇ ಸ್ಥಾನ ಪಡೆದಿದ್ದಾರೆ.
ಜಿಲ್ಲೆಗೆ 2ನೇ ಸ್ಥಾನ ಪಡೆದ ಯಶಸ್ವಿನಿ: ಪಟ್ಟಣದ ಕ್ರಿಸ್ತರಾಜಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕಾಮಗೆರೆ ಗ್ರಾಮದ ಕೆ.ಎಸ್.ರಾಜುಗೌಡ ಮತ್ತು ರೂಪ ದಂಪತಿಗಳ ದ್ವಿತೀಯ ಪುತ್ರಿ ಯಶಸ್ವಿನಿ 625 ಅಂಕಗಳಿಗೆ 616 ಅಂಕಗಳಿಸುವ ಮೂಲಕ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಂಕ ಪಡೆದವರಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕನ್ನಡ 123, ಆಂಗ್ಲ 99, ಹಿಂದಿ 99, ಸಮಾಜ ವಿಜ್ಞಾನ ಮತ್ತು ವಿಜ್ಞಾನದಲ್ಲಿ 100ಕ್ಕೆ 100 ಅಂಕ ಮತ್ತು ಗಣಿತಶಾಸ್ತ್ರದಲ್ಲಿ 95 ಅಂಕ ಪಡೆದಿದ್ದಾರೆ. ವಿದ್ಯಾರ್ಥಿನಿ ಯಶಸ್ವಿನಿಯ ಸಾಧನೆಗೆ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಮಗಳ ಸಾಧನೆ ಕುರಿತು
“ಉದಯವಾಣಿ’ಯೊಂದಿಗೆ ಸಂತಸ ಹಂಚಿಕೊಂಡ ರಾಜುಗೌಡ, ನಾವು ಮೂಲತಃ ರೈತ ಕುಟುಂಬದವರಾಗಿದ್ದು ವ್ಯವಸಾಯವೇ ನಮ್ಮ ಮೂಲ ಕಸುಬಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವ್ಯವಸಾಯದಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಲು ಸಾಧ್ಯವಾಗುತ್ತಿಲ್ಲವಾದ ಹಿನ್ನೆಲೆ ಜೀವನೋಪಾಯಕ್ಕಾಗಿ ಪಂಕ್ಚರ್ ಅಂಗಡಿ ನಡೆಸಲಾಗುತ್ತಿದೆ. ಒಟ್ಟಾರೆ ಮಗಳ ಸಾಧನೆ ಹರ್ಷತಂದಿದೆ ಎಂದರು.
ಡಾಕ್ಟರ್ ಮಗಳು ಜಿಲ್ಲೆಗೆ 3ನೇಸ್ಥಾನ: ಪಟ್ಟಣದ ವಿವೇಕಾನಂದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕೌದಳ್ಳಿ ಗ್ರಾಮದ ಅರ್ಬಿಯಾ ಸಲೀಮ್ 625ಕ್ಕೆ 613 ಅಂಕ ಪಡೆಯುವ ಮೂಲಕ ಜಿಲ್ಲೆಗೆ 3ನೇ ಸ್ಥಾನ ಪಡೆದಿದ್ದಾಳೆ. ಅರ್ಬಿಯಾ ಸಲೀಮ್ ಕನ್ನಡ 124 ಅಂಕ, ಆಂಗ್ಲ 97, ಗಣಿತ ಮತ್ತು ಹಿಂದಿಯಲ್ಲಿ 100ಕ್ಕೆ 100, ವಿಜ್ಞಾನ 99 ಮತ್ತು ಸಮಾಜ ವಿಜ್ಞಾನ 93 ಅಂಕ ಪಡೆದಿದ್ದಾರೆ. ಈಕೆ ರಾಮಾಪುರ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಕೌದಳ್ಳಿ ಗ್ರಾಮದ ಡಾ.ಅಥಿಯಾ ಫೈರೋಜ್ ಮತ್ತು ಸಲೀಂ ಪಾಷಾ ಅವರ ಪುತ್ರಿ.
ಸತತ 4ನೇ ಬಾರಿಗೆ ಪ್ರಥಮ ಸ್ಥಾನ: ಹನೂರು ಶೈಕ್ಷಣಿಕ ವಲಯವು ಈ ಬಾರಿಯೂ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಸತತ 4ನೇ ಬಾರಿಗೆ ಪ್ರಥಮ ಸ್ಥಾನ ಉಳಿಸಿಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಹನೂರು ಕ್ಷೇತ್ರವು ಗುಡ್ಡಗಾಡು ಪ್ರದೇಶಗಳಿಂದ ಆವೃತ್ತವಾಗಿದ್ದು ತೀರಾ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಈ ನಡುವೆಯೂ ಹನೂರು ಶೈಕ್ಷಣಿಕ ವಲಯ ಉತ್ತಮ ಸಾಧನೆಗೈಯುತ್ತಿದ್ದು ಪ್ರಗತಿಯ ಸಂಕೇತವಾಗಿದೆ.
ರಾಜ್ಯದಲ್ಲಿಯೇ 11ನೇ ಸ್ಥಾನ: ಹನೂರು ಶೈಕ್ಷಣಿಕ ವಲಯವು ರಾಜ್ಯದ 203 ತಾಲೂಕುಗಳ ಪೈಕಿ 11ನೇ ಸ್ಥಾನ ಪಡೆದಿದೆ. 2016-17ನೇ ಸಾಲಿನಲ್ಲಿ ರಾಜ್ಯದಲ್ಲಿಯೇ 8ನೇ ಸ್ಥಾನ ಪಡೆದಿದ್ದು ಸಾಧನೆಯಾಗಿತ್ತು. ಆದರೆ ಕಳೆದ ಸಾಲಿನಲ್ಲಿ 2017-18ನೇ ಸಾಲಿನಲ್ಲಿ 23ನೇ ಸ್ಥಾನ ಪಡೆಯುವ ಮೂಲಕ ಕೊಂಚ ಹಿನ್ನೆಡೆ ಅನುಭವಿಸಲಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಮತ್ತೂಮ್ಮೆ ಪುಟಿದೆದ್ದು ಶೈಕ್ಷಣಿಕ ವಲಯವು ಉತ್ತಮ ಸಾಧನೆಗೈದಿದ್ದು 11ನೇ ಸ್ಥಾನ ಪಡೆದಿದೆ.
ಶಾಸಕರಿಂದ ಅಭಿನಂದನೆ: ಈ ಎಲ್ಲಾ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ, ಎಲ್ಲಾ ಶಾಲೆಗಳ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದದ ಪರಿಶ್ರಮ ಮತ್ತು ವಿದ್ಯಾರ್ಥಿಗಳ ಪೋಷಕರ ಪಾತ್ರವೂ ಪ್ರಮುಖವಾಗಿದ್ದು ಸಾಧನೆಗೈದ ವಿದ್ಯಾರ್ಥಿಗಳಿಗೆ ಶಾಸಕರು ಅಭಿನಂದನೆ ಸಲ್ಲಿಸಿದ್ದಾರೆ.