ಬೀಳಗಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿರುವ ಏಜೆನ್ಸಿ ಕೈ ಬಿಟ್ಟು, ಉತ್ತಮ ಮಹಿಳಾ ಸಂಘಟನೆಗಳಿಗೆ ವಹಿಸಿಕೊಡಬೇಕು. ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳ ಪೂರೈಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಸದಸ್ಯ ಶ್ರೀಶೈಲ ಸೂಳಿಕೇರಿ ಒತ್ತಾಯಿಸಿದರು.
ಸ್ಥಳೀಯ ತಾಪಂ ಸಭಾ ಭವನದಲ್ಲಿ, ತಾಪಂ ಅಧ್ಯಕ್ಷ ರಾಮಣ್ಣ ಬಿರಾದಾರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ 24ನೇ ತಾಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡುವ ಮೂಲಕ ಆಹಾರ ಸಾಮಗ್ರಿ ಸರಬರಾಜಿನಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ಈ ಹಿಂದಿನ ತಾಪಂ ಸಾಮಾನ್ಯ ಸಭೆಯಲ್ಲಿಯೇ ಈ ಕುರಿತಾಗಿ ಸೂಚನೆ ನೀಡುವುದರೊಂದಿಗೆ ಠರಾವು ಕೂಡ ಪಾಸ್ ಮಾಡಲಾಗಿದೆ. ಆದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದ ಸೂಳಿಕೇರಿಯವರ ಆರೋಪಕ್ಕೆ ಕೆಲ ಸದಸ್ಯರೂ ಕೂಡ ಧ್ವನಿಯಾದರು. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರುವ ಮೂಲಕ ಶೀಘ್ರ ಕ್ರಮ ಕೈಗೊಳ್ಳುವ ಸಿಡಿಪಿಒ ಭರವಸೆ ನೀಡಿದರು.
ಗಿರಿಸಾಗರ ಗ್ರಾಮದ ಅಂಗನವಾಡಿ ಕೇಂದ್ರದ ನೂತನ ಕಟ್ಟಡಕ್ಕೆ ಹಣ ಮಂಜೂರಾಗಿ ವರ್ಷಗಳು ಗತಿಸಿದರೂ ಕೂಡ ಕಟ್ಟಡ ಕಾಮಗಾರಿ ಆರಂಭಿಸಿಲ್ಲ. ಕಾಮಗಾರಿ ಟೆಂಡರ್ ಕೂಡ ಕರೆದಿಲ್ಲ. ಅಧಿಕಾರಿಗಳ ನಿರ್ಲಕ್ಷಕ್ಕೆ ನಾಚಿಕೆಯಾಗಬೇಕೆಂದು ತಾಪಂ ಸದಸ್ಯೆ ಗಂಗೂಬಾಯಿ ಯರನಾಳ ಹರಿಹಾಯ್ದರು.
ಗರ್ಭಿಣಿ ಬಾಣಂತಿಯರಿಗೆ, ಮಕ್ಕಳಿಗೆ ಲಾಕ್‌ಡೌನ್ ವೇಳೆ ಮತ್ತು ಪ್ರಸ್ತುತ ಆಹಾರ ಸಾಮಗ್ರಿ ವಿತರಿಸಿದ ಕುರಿತು ಮಾಹಿತಿ ನೀಡಿ. ಆಹಾರ ಸಾಮಗ್ರಿ ವಿತರಣೆಯಲ್ಲೂ ಗೋಲ್‌ಮಾಲ್ ನಡೆದಿರುವ ಶಂಕೆಯಿದೆ. ಅಂಗನವಾಡಿಯಿಂದ ಮೊಟ್ಟೆ ಕೂಡ ವಿತರಿಸಿಲ್ಲ ಎಂದು ಸದಸ್ಯೆ ರೂಪಾ ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯರು ಸಿಡಿಪಿಒ ಇಲಾಖೆ ಅಧಿಕಾರಿಯನ್ನು ತೀವ್ರ ತರಾಟೆ ತೆಗೆದುಕೊಂಡರು. ಸಭೆಯ ಎಲ್ಲ ಪ್ರಶ್ನೆಗಳಿಗೂ ಸಿಡಿಪಿಒ ಸೂಕ್ತ ಕ್ರಮದ ಭರವಸೆ ನೀಡಿದರು. ಗಿರಿಸಾಗರ ಗ್ರಾಮದ ಬೀರೇಶ್ವರ ದೇವಸ್ಥಾನದ ಹತ್ತಿರದ ಇಕ್ಕಟ್ಟಾದ ರಸ್ತೆಯಲ್ಲಿನ ಟಿಸಿಯಿಂದಾಗಿ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.
ಒಂದು ಕುರಿ ಸತ್ತಿದೆ, ಎಮ್ಮೆಗೆ ಶಾಕ್ ತಗುಲಿದೆ. ಮೇವು ತುಂಬಿದ ಟ್ರ್ಯಾಕ್ಟರ್‌ಗೆ ಬೆಂಕಿ ತಗುಲಿದ್ದರೂ ಟಿಸಿ ಸ್ಥಳಾಂತರ ಮಾಡಲು ಹೆಸ್ಕಾಂ ಮುಂದಾಗುತ್ತಿಲ್ಲ. ಈ ಕುರಿತು ಗಮನ ಸೆಳೆದರೂ ನಿರ್ಲಕ್ಷ್ಯ ತಾಳುತ್ತಿದ್ದಾರೆ ಕೂಡಲೇ ಟಿಸಿ ಸ್ಥಳಾಂತರಿಸಬೇಕೆಂದು ಜಿಪಂ ಸದಸ್ಯ ಹನುಮಂತ ಕಾಖಂಡಕಿ ಸೂಚಿಸಿದರು.
ಬಿಸನಾಳ ಎಸ್‌ಟಿ ಕಾಲೋನಿಗೆ ವಿದ್ಯುತ್ ಕಂಬ ಅಳವಡಿಸಿ, ವಿದ್ಯುತ್ ಸರಬರಾಜು ನೀಡುವಂತೆ ತಾಪಂ ಸದಸ್ಯೆ ರೇಖಾ ಕಟ್ಟೆಪ್ಪನವರ ಸೂಚಿಸಿದರು. ತಾಪಂ ಉಪಾಧ್ಯಕ್ಷೆ ಸುನಂದಾ ಪವಾರ, ತಾಪಂ ಇಒ ಎಂ.ಕೆ.ತೊದಲಬಾಗಿ, ತಹಶೀಲ್ದಾರ್ ಭೀಮಪ್ಪ ಅಜೂರ ಇದ್ದರು.