ದಾವಣಗೆರೆ: ಸರ್ಕಾರದಿಂದ ಏನೆಲ್ಲ ಸೌಲಭ್ಯ ಒದಗಿಸಿದರೂ, ಆರೋಗ್ಯ ಕ್ಷೇತ್ರದಲ್ಲಿ ಎಷ್ಟೆಲ್ಲ ಬದಲಾವಣೆ, ಆವಿಷ್ಕಾರ ಆಗಿದ್ದರೂ ಮಕ್ಕಳಲ್ಲಿ ಇನ್ನೂ ಅಪೌಷ್ಠಿಕತೆ ಏಕೆ ಕಾಡುತ್ತಿದೆ, ಇದರ ಶ್ವಾಶ್ವತ ನಿರ್ಮೂಲನೆಗೆ ಏನೆಲ್ಲ ಕ್ರಮವಾಗಬೇಕು ಎಂಬ ಸ್ವಾರಸ್ಯಕರ ಚರ್ಚೆ ಮಂಗಳವಾರ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾತನಾಡಿ, ತಾಲೂಕಿನಲ್ಲಿ 33 ಅಪೌಷ್ಟಿಕ ಮಕ್ಕಳು ಕಂಡು ಬಂದಿದ್ದಾರೆ. ಇವರ ವೈದ್ಯಕೀಯ ವೆಚ್ಚಕ್ಕಾಗಿ 8168 ರೂ. ಖರ್ಚು ಮಾಡಲಾಗಿದೆ ಎಂದು ತಿಳಿಸಿದರು. ಪ್ರಗತಿ ಪರಿಶೀಲನೆ ವೇಳೆ ತಾಪಂ ಕಾರ್ಯನಿರ್ವಹಣಾಧಿಕಾರಿ ಬಿ.ಎಂ. ದಾರುಕೇಶ್, ಸರ್ಕಾರ ಅಂಗನವಾಡಿ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುತ್ತಿದೆ. ಹುಟ್ಟುವ ಮಕ್ಕಳು ಆರೋಗ್ಯಕರವಾಗಿರಲಿ ಎಂದು ಗರ್ಭಿಣಿಯರಿಗೂ ಮಾತೃವಂದನಾ ಯೋಜನೆ ಮೂಲಕ ಪೌಷ್ಟಿಕ ಆಹಾರಕ್ಕೆ ಸಹಾಯ ಮಾಡುತ್ತಿದೆ. ಕಬ್ಬಿಣಾಂಶದ ಮಾತ್ರೆಗಳನ್ನು ಸಹ ನೀಡುತ್ತಿದೆ. ಇನ್ನು ಆರೋಗ್ಯ ಕ್ಷೇತ್ರದಲ್ಲಿ ಅತ್ಯಾಧುನಿಕ ಆವಿಷ್ಕಾರಗಳು ನಡೆದು ಮಗುವಿನ ದೇಹದಲ್ಲಿ ಕೊರತೆ ಇರುವ ವಿಟಮಿನ್‌ಗಳನ್ನು ಗುರುತಿಸಿ ಅವುಗಳನ್ನು ಔಷಧ ಮೂಲಕ ನೀಡುವ ವ್ಯವಸ್ಥೆಯೂ ಬಂದಿದೆ. ಇಷ್ಟಾದರೂ ಮಕ್ಕಳಲ್ಲಿಅಪೌಷ್ಟಿಕತೆ ಕಾಡಲು ಕಾರಣವೇನು ಎಂದು ಪ್ರಶ್ನಿಸುವ ಮೂಲಕ ಚರ್ಚೆಗೆ ನಾಂದಿ ಹಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಸರ್ಕಾರ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ಪೋಷಕಾಂಶಯುಕ್ತ ಆಹಾರ ಕೊಟ್ಟರೂಅದು ಒಂದು ಹೊತ್ತಿಗೆ ಮಾತ್ರ ಕೊಡಲಾಗುತ್ತದೆ. ಕೆಲ ಬಡಮಕ್ಕಳು ಮನೆಯಲ್ಲಿ ಊಟ ಮಾಡುವುದೇ ಇಲ್ಲ. ಇನ್ನು ಕೆಲವು ಮನೆಗಳಲ್ಲಿ ಮಕ್ಕಳಿಗೆ ಊಟ ಮಾಡಿಸಲು ಹಿರಿಯರು ಇರುವುದಿಲ್ಲ. ಮಕ್ಕಳಿಗೆ ಊಟ ಇಟ್ಟು ಹಿರಿಯರು ಕೆಲಸಕ್ಕೆ ಹೋಗಿರುತ್ತಾರೆ. ಸಮರ್ಪಕ ಆಹಾರ ಇಲ್ಲದೇ ಮಕ್ಕಳು ಸೊರಗುತ್ತಾರೆ.ಇವುಗಳಿಗಿಂತ ಮುಖ್ಯವಾಗಿ ಗರ್ಭಿಣಿಯಿದ್ದಾಗ ತಾಯಿ ಪೋಷಕಾಂಶಯುಕ್ತ ಆಹಾರ ಸೇವಿಸದೆ ಇರುವುದು, ಕಬ್ಬಿಣಾಂಶ,ರಕ್ತದ ಹೆಚ್ಚಿಸುವ ಮಾತ್ರೆ ನುಂಗದೇ ಇರುವುದು. ಮದ್ಯ, ಧೂಮಪಾನದಂಥ ವ್ಯಸನಯುಕ್ತ ಪೋಷಕರಿಂದಾಗಿ ಅಪೌಷ್ಟಿಕ ಮಕ್ಕಳು ಹುಟ್ಟುತ್ತವೆ. ಆರೋಗ್ಯವಂತ ಹುಟ್ಟಿದ ಮಗುವಿನ ತೂಕ ಸರಾಸರಿ 2.5 ಕೆಜಿ ಇರಬೇಕು. ಅಪೌಷ್ಟಿಕತೆಯುಳ್ಳ ಮಗುವಿನ ತೂಕ 2.5 ಕೆಜಿಗಿಂತ ಕಡಿಮೆ ಇರುತ್ತದೆ. ಅಪೌಷ್ಟಿಕ ಮಕ್ಕಳು ಜನನವಾಗದಂತೆ ನೋಡಿಕೊಳ್ಳಲು ಗರ್ಭಿಣಿಯಿದ್ದಾಗ ತಾಯಿಯ ಆರೋಗ್ಯ, ಆಹಾರವೂ ಮುಖ್ಯವಾಗಿದೆ ಎಂದರು.
ಜಂಕ್‌ಫುಡ್ ಹಾವಳಿ: ಮಕ್ಕಳು ಸಾಮಾನ್ಯವಾಗಿ ಆರೋಗ್ಯಕ್ಕೆ ಏನು ಅವಶ್ಯವೋ ಅದನ್ನು ತಿನ್ನುವ ಬದಲಿಗೆ ನಾಲಿಗೆ ರುಚಿ ಇರುವ ಆಹಾರ ವಸ್ತುಗಳನ್ನು ತಿನ್ನಲು ಬಯಸುತ್ತವೆ. ಕುರಕುರೆ, ಬೇಕರಿ ಫುಡ್‌ನಂಥಜಂಕ್ ಆಹಾರಗಳನ್ನೇ ಹೆಚ್ಚಾಗಿ ತಿನ್ನುತ್ತವೆ. ಇದರಲ್ಲಿ ರುಚಿಗಾಗಿ ಟೇಸ್ಟಿಂಗ್ ಪೌಡರ್ ಹಾಕಲಾಗುತ್ತದೆ. ಈ ಪೌಡರ್ ನಿಗದಿತ ಪ್ರಮಾಣದಲ್ಲಿ ಹಾಕಿದರೆ ಆರೋಗ್ಯಕ್ಕೆ ತೊಂದರೆ ಇಲ್ಲ. ಆದರೆ ತಯಾರಕರು ಹೆಚ್ಚು ವ್ಯಾಪಾರದದೃಷ್ಟಿಯಿಂದ ಇದನ್ನು ಲೆಕ್ಕ ಮೀರಿ ಹಾಕುತ್ತಾರೆ. ಇದನ್ನೇ ಹೆಚ್ಚು ತಿನ್ನುವುದರಿಂದಲೂ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬರುತ್ತಿದೆ ಎಂದು ತಾಪಂ ಇಒ ಪ್ರಸ್ತಾಪಿಸಿದರು. ಇದಕ್ಕೆ ತಾಪಂ ಉಪಾಧ್ಯಕ್ಷೆ ಮೀನಾ ಶ್ರೀನಿವಾಸ್ ಸಹಮತ ವ್ಯಕ್ತಪಡಿಸಿ, ಆಹಾರ ನಿರೀಕ್ಷಕರು ಈ ಬಗ್ಗೆ ನಿಗಾ ವಹಿಸಿಜನರ ಆರೋಗ್ಯ ಕಾಪಾಡುವ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಎಲ್ಲ ಆಹಾರ ವಿಷಯುಕ್ತ: ಮಕ್ಕಳ ಅಪೌಷ್ಟಿಕತೆ ಕುರಿತು ಸಾಕಷ್ಟು ಚರ್ಚೆ ನಡೆದ ಬಳಿಕ, ಇಂದು ಎಲ್ಲ ಆಹಾರವೂ ವಿಷಯುಕ್ತವಾಗಿರುವ ಬಗ್ಗೆ ಎಲ್ಲರಿಂದ ವಿಷಾದ ವ್ಯಕ್ತವಾಯಿತು. ಇಂದು ನಾವು ತಿನ್ನುವ ಎಲ್ಲ ವಸ್ತುಗಳಿಗೆ ರಾಸಾಯನಿಕ ಸೇರಿದಂತೆ ಇನ್ನಿತರ ವಿಷಯುಕ್ತ ಅಂಶಗಳನ್ನು ಸೇರಿಸಲಾಗುತ್ತಿದೆ. ಸೊಪ್ಪು, ತರಕಾರಿ, ಹಣ್ಣು, ಧಾನ್ಯಗಳಲ್ಲಿಯೇ ರಾಸಾಯನಿಕವಿಷ ತುಂಬಿದೆ. ಎಷ್ಟೇ ಪೋಷಕಾಂಶಯುಕ್ತ ಆಹಾರ ಸೇವಿಸುತ್ತಿದ್ದೇವೆ ಎಂದು ಕೊಂಡರೂ ಎಲ್ಲವೂ ವಿಷಪೂರಿತವಾಗಿರುವುದು ದುರಂತ. ಈಕಾರಣದಿಂದಲೂ ಮಕ್ಕಳು ಅಪೌಷ್ಟಿಕತೆಯಿಂದ ಬಳಲುವಂತಾಗಿದೆ ಎಂದು ಅಧಿಕಾರಿಗಳು
ಅಭಿಪ್ರಾಯಿಸಿದರು. ಆರೋಗ್ಯ ಇಲಾಖೆ, ಕೃಷಿ ಇಲಾಖೆ,ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳಸಮ್ಮುಖದಲ್ಲಿ ಸುಮಾರು ಅರ್ಧ ತಾಸು ಈ ಸ್ವಾರಸ್ಯಕರ ಚರ್ಚೆ ನಡೆಯಿತು. ಬಳಿಕ ಜನರಿಗೆ ಈ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಕೃಷಿಕರಲ್ಲಿಯೂ ರಸಾಯನಿಕಮುಕ್ತ ಆಹಾರ ಬೆಳೆ ಬೆಳೆಯಲು ಪ್ರೋತ್ಸಾಹಿಸಬೇಕು ಎಂಬ ಅಭಿಪ್ರಾಯದೊಂದಿಗೆ ಚರ್ಚೆಗೆ ತೆರೆ ಎಳೆಯಲಾಯಿತು.
ಕಡಿಮೆ ವಿಷ ನಮ್ಮ ಆಯ್ಕೆಯಾಗಲಿ! : ಚರ್ಚೆಗೆ ಪೂರಕವಾಗಿ ತಾಪಂ ಇಒ ಬಿ.ಎಂ. ದಾರುಕೇಶ್, ರಾಸಾಯನಿಕ ಗೊಬ್ಬರ, ಕೀಟನಾಶಕಬಳಸದೆ ಬೆಳೆಯುವ ಆಹಾರ ಬೆಳೆ ಯಾವುದಾದಾರೂ ಇದೆಯೇ ಎಂದು ಕುತೂಹಲದಿಂದ ಕೃಷಿ ಅಧಿಕಾರಿಯನ್ನುಪ್ರಶ್ನಿಸಿದರು. ಇಂದು ರಸಗೊಬ್ಬರ,ಕೀಟನಾಶಕ ಇಲ್ಲದೇ ಕೃಷಿಯೇಇಲ್ಲ ಎಂಬಂಥ ಸ್ಥಿತಿಗೆ ತಲುಪಿದ್ದೇವೆ. ಇದ್ದುದರಲ್ಲಿಯೇ ಸಾವಯವ ಗೊಬ್ಬರ ಬಳಸಿ, ಕಡಿಮೆ ಕೀಟನಾಶಕ ಬಳಸಿ ಉತ್ತಮ ಬೆಳೆ ಬೆಳೆಯುಬಹುದು. ರಾಗಿ ಉತ್ತಮ ಪೋಷಕಾಂಶಯುಕ್ತ ಆಹಾರವಾಗಿದ್ದು ಇದನ್ನು ಬೆಳೆಯಲು ಅತಿ ಕಡಿಮೆ ರಾಸಾಯನಿಕ, ಅತಿಕಡಿಮೆ ಕೀಟನಾಶಕ ಸಾಕಾಗುತ್ತದೆ.ಹೆಚ್ಚು ಪೋಷಕಾಂಶ, ಕಡಿಮೆ ರಾಸಾಯನಿಕ ಇರುವ ಆಹಾರ ನಮ್ಮ ಆಯ್ಕೆಯಾಗಬೇಕು ಎಂದು ಅವರು ಸಲಹೆ ನೀಡಿದರು.