Advertisement

ಕುಂದು ಕೊರತೆ ಸಭೆಗೆ ಬಾರದ ತಾಲೂಕು ಪಂಚಾಯತ್ ಇ.ಓ:  ಕೂಲಿ ಕಾರ್ಮಿಕರ ಆಕ್ರೋಶ

07:57 PM Mar 03, 2022 | Team Udayavani |

ಹುನಗುಂದ : ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ಕುಂದು ಕೊರತೆಗಳ ಸಭೆಗೆ ಹುನಗುಂದ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಕಾಂತ ಮ್ಯಾಗೇರಿ ಸಭೆಗೆ ಬಾರದೇ ನುಣುಚಿಕೊಂಡು ಕೂಲಿ ಕಾರ್ಮಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ..

Advertisement

ಕಾರ್ಯನಿರ್ವಾಕ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ತಾಲೂಕ ಪಂಚಾಯತ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕೂಲಿ ಕಾರ್ಮಿಕರ ಸಂಘದ ಮಹಿಳೆ ಸುವರ್ಣಾ ತೊಗರಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಮಗೆ ಸೂಕ್ತ ಸಮಯಕ್ಕೆ ಕೆಲಸ ನೀಡುತ್ತಿಲ್ಲ, ಜೊತೆಗೆ ಕೆಲಸ ಕೊಟ್ಟರೂ ಸರಿಯಾದ ಸಮಯಕ್ಕೆ ದುಡಿದ ಹಣ ಜಮವಾಗುತ್ತಿಲ್ಲ ಇದರಿಂದ ನಾವು ಬೇಸತ್ತು ಹೋಗಿತ್ತು ಕೂಡಲೇ ನಮ್ಮ ಸಮಸ್ಯೆಗಳನ್ನು ಸಂಭಂಧಪಟ್ಟ ಅಧಿಕಾರಿಗಳು ಕೂಡಲೇ ಪರಿಹರಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು..

ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳ ಸೌಲಭ್ಯಗಳನ್ನು ಅಧಿಕಾರಿಗಳು ಸರಿಯಾಗಿ ತಲುಪಿಸುತ್ತಿಲ್ಲ ಎಂದರು..

ಪಿಡಿಓ, ಕೂಲಿಕಾರ್ಮಿಕರ ಜಟಾಪಟಿ: ಸಭೆಗೆ ಆಗಮಿಸಿದ್ದ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಮತ್ತು ಕೂಲಿ ಕಾರ್ಮಿಕರ ನಡುವೆ ಜಟಾಪಟಿಯೂ ನಡೆಯಿತು, ಅಧಿಕಾರಿಗಳು ಕೂಲಿ ಕಾರ್ಮಿಕರ ಸಮಸ್ಯೆಗಳಿಗೆ ಸಬೂಬು ಹೇಳಲು ಬಂದಾಗ ಕೂಲಿ ಕಾರ್ಮಿಕರು ಆಕ್ರೋಶಗೊಂಡು ಪಿಡಿಓ ಗಳನ್ನು ತರಾಟೆಗೆ ತೆಗೆದುಕೊಂಡರು..

ತೋಟಗಾರಿಕೆ ಇಲಾಖೆಯ ಆರ್.ಎಪ್‌.ಓ ಬಬಲಾದಿ ಅವರಿಗೆ ತರಾಟೆಗೆ ತೆಗೆದುಕೊಂಡ ಕೂಲಿ ಕಾರ್ಮಿಕರು ತೋಟಗಾರಿಕೆ ಇಲಾಖೆಯಿಂದ ಯಾವುದೇ ಕಾಮಗಾರಿಗಳನ್ನು ನಿರ್ವಹಿಸಲು ಅವಕಾಶ ನೀಡುತ್ತಿಲ್ಲ ಎಂದರು.

Advertisement

ಇದನ್ನೂ ಓದಿ : ಶಾಸಕರ ಭರವಸೆ : 18 ನೇ ದಿನಕ್ಕೆ ರೈತರ ಧರಣಿ ಅಂತ್ಯ

ಸಭೆಯ ಅಧ್ಯಕ್ಷತೆ ವಹಿಸಿದ್ದ ಎಡಿ ಮಹಾಂತೇಶ ಕೋಟಿ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಭರವಸೆ ನೀಡಿದರು..

ಆದರೆ ಸಭೆಯ ನಂತರ ಹೊರಬಂದು ಮಾತನಾಡಿದ ಕೂಲಿ ಕಾರ್ಮಿಕರ ಸಂಘದ ಮುಖಂಡ ಮಹಾಂತೇಶ, ಹೊಸಮನಿ, ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಎಲ್ಲ ಅಧಿಕಾರಿಗಳು ವಿಫಲರಾಗಿದ್ದಾರೆ ಶೀಘ್ರದಲ್ಲಿ ಹುನಗುಂದ ತಾಲೂಕ ಪಂಚಾಯತ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ..

ಸರೋಜ ಭದ್ರಶೆಟ್ಟಿ, ಶರಣಮ್ಮ ಸೊಬರದ, ನೀಲಮ್ಮ ಕಟ್ಟಿಮನಿ, ವಿಜಯಲಕ್ಷ್ಮಿ ಜಾಲಿಹಾಳ, ಸಾಯಿರಾಬಾನು, ಮಹಾದೇವಿ ಹಡಪದ, ಯಮನೂರ ಮಾದರ, ಶರೀಫ ಚಪ್ಪರಬಂದ, ಪ್ರಭು ಹಳ್ಳೂರ ಸೇರಿದಂತೆ ಕೂಲಿ ಕಾರ್ಮಿಕರಾದ, ಧನ್ನೂರ, ಹಿರೇಮಳಗಾವಿ,ಮೂಗನೂರ,ಹೂವಿನಹಳ್ಳಿ, ಐಹೊಳ್ಳೆ, ರಕ್ಕಸಗಿ, ಹಿರೇಬಾದವಾಡಗಿ,ಬಿಂಜವಾಡಗಿ,ಹಾವರಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೂಲಿ ಕಾರ್ಮಿಕರು ಸಭೆಯಲ್ಲಿ ಹಾಜರಿದ್ದರು..

Advertisement

Udayavani is now on Telegram. Click here to join our channel and stay updated with the latest news.

Next