ಗುಂಡ್ಲುಪೇಟೆ: ಮಳೆ ಬಂದ ಸಂದರ್ಭದಲ್ಲಿ ರಸ್ತೆಯು ಕೆಸರು ಗದ್ದೆಯಂತಾಗುತ್ತಿದ್ದು, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ರಸ್ತೆ ಮೇಲೆ ಹರಿಯುವಂತಾಗಿದೆ ಎಂದು ಹಳೇಹುಂಡಿ ಗ್ರಾಮಸ್ಥರು ದೂರಿದ್ದಾರೆ. ತಾಲೂಕಿನ ಕೆಲಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳ ಪಡುವ ಹಳೇಹುಂಡಿ ಗ್ರಾಮದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಸಹ ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿ ಇತ್ತ ತಿರುಗಿ ನೋಡಿಲ್ಲ.
ಸಮಸ್ಯೆ ಕುರಿತು ಗ್ರಾಮಸ್ಥರು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗೆ ಮಂಗಳವಾರ ದೂರು ಸಲ್ಲಿಸಿದ್ದಾರೆ. ಗ್ರಾಮದ ಸಮಸ್ಯೆಗಳ ಬಗ್ಗೆ ಹಲವು ವರ್ಷಗಳಿಂದ ಕೆಲಸೂರು ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದೇವೆ. ಗ್ರಾಪಂ ಗ್ರಾಮದ ಸಮಸ್ಯೆಗಳ ಬಗ್ಗೆ ಗಮನಹರಿಸಿಲ್ಲ, ಗ್ರಾಮದಲ್ಲಿ ರಸ್ತೆ ಸರಿಯಿಲ್ಲ.
ಇದನ್ನೂ ಓದಿ;- ಜಿಲ್ಲೆಯಲ್ಲಿ ಅತಿವೃಷ್ಟಿಗೆ 1,320 ಹೆಕ್ಟೇರ್ ಬೆಳೆ ಹಾನಿ
ಚರಂಡಿಯಂತೂ ಇಲ್ಲವೇ ಇಲ್ಲ. ಮಳೆಗಾಲದಲ್ಲಿ ರಸ್ತೆಯಲ್ಲಿ ತಿರುಗಾಡುವುದಕ್ಕೆ ಆಗುತ್ತಿಲ್ಲ. ರಸ್ತೆಯ ಬಳಿ ಬೇಲಿ ಬೆಳೆದುಕೊಂಡಿವೆ. ಮಳೆಗಾಲ ಗ್ರಾಮಸ್ಥರಿಗೆ ನರಕವಾಗಿದೆ. ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಪೈಪ್ ಮಾಡಿಲ್ಲ. ನೀರಿನ ಸಮಸ್ಯೆ ಕೂಡ ಇದೆ ಎಂದು ಸಮಸ್ಯೆ ಬಿಚ್ಚಿಟ್ಟರು.
“ಉದ್ಯೋಗ ಖಾತ್ರಿ ಯೋಜನೆಯಲ್ಲಿ ರಸ್ತೆ, ಚರಂಡಿಗೆ ಕ್ರಿಯಾ ಯೋಜನೆ ಮಾಡಲಾಗಿದೆ. ಆದರೆ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನುದಾನ ಬಿಡುಗಡೆ ಮಾಡದ ಕಾರಣ ಕಾಮಗಾರಿ ನಡೆಸಿಲ್ಲ. ಗ್ರಾಮದ ಜನರ ದೂರು ಬಂದಿವೆ. ಅನುದಾನದ ಕೊರತೆಯಿಂದ ಕೆಲಸಗಳು ಆಗುತ್ತಿಲ್ಲ. ರಾಜ್ಯ ಸರ್ಕಾರ ಗ್ರಾಪಂಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.”
– ಕಗ್ಗಳದ ಮಾದಪ್ಪ ಕೆಲಸೂರು ಗ್ರಾಪಂ ಅಧ್ಯಕ್ಷ.