Advertisement

ತಾಲೂಕು ಪಂಚಾಯತ್‌ ರದ್ದತಿ: ಅಭಿವೃದ್ದಿಗೆ ಮಾರಕ

03:13 AM Feb 12, 2021 | Team Udayavani |

ರಾಜ್ಯದಲ್ಲಿ ತಾಲೂಕು ಪಂಚಾಯತ್‌ ರದ್ದತಿ ಬಗ್ಗೆ ಚರ್ಚೆಗಳಾಗುತ್ತಿವೆ. ರಾಜ್ಯ ಸರಕಾರವೇ ಮೂರು ಹಂತದ ಪಂಚಾಯತ್‌ ವ್ಯವಸ್ಥೆಗಿಂತ ಎರಡು ಹಂತದ ವ್ಯವಸ್ಥೆ ಸೂಕ್ತ ಎನ್ನುತ್ತಿದೆ. ಆದರೆ ಇನ್ನೇನು ಕೆಲವೇ ತಿಂಗಳುಗಳಲ್ಲಿ ತಾ.ಪಂ.ಗೆ ಚುನಾವಣೆ ಎದುರಾಗುವ ಸಾಧ್ಯತೆ ಇದೆ. ಇಂಥ ಸಂದರ್ಭದಲ್ಲಿ ತಾ.ಪಂ. ಅನ್ನು ರದ್ದತಿ ಮಾಡುವ ಮಾತುಗಳು ಸೂಕ್ತವೇ? ಈ ಬಗ್ಗೆ ಮೊದಲೇ ಏಕೆ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂಬಿತ್ಯಾದಿಗಳ ಬಗ್ಗೆ ಕರ್ನಾಟಕ ರಾಜ್ಯ ಪಂಚಾಯತ್‌ ಪರಿಷತ್‌ ಕಾರ್ಯಾಧ್ಯಕ್ಷ ಸಿ.ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.

Advertisement

ಮಹಾತ್ಮಾ ಗಾಂಧೀಜಿಯವರು ಬ್ರಿಟಿಷರಿಂದ ಭಾರತ ಕೇವಲ ಸ್ವತಂತ್ರ ಬರುವುದರಿಂದ ಏನೂ ಪ್ರಯೋಜನ ಇಲ್ಲ. ಹಳ್ಳಿಗಳ ಗಣರಾಜ್ಯವಾಗಬೇಕು. ಅದಕ್ಕಾಗಿ ಹಳ್ಳಿಗಳಿಗೆ ಸ್ವರಾಜ್‌ ಬರಬೇಕು ಎಂದು ಹೇಳಿದ್ದರು. ಅದಕ್ಕಾಗಿ ಗಾಂಧೀಜಿ ಪಂಚಾಯತ್‌ ರಾಜ್‌ ವ್ಯವಸ್ಥೆ ಇರಬೇಕೆಂದು ಬಯಸಿದ್ದರು.

ಪಂಚಾಯತ್‌ ರಾಜ್‌ ವ್ಯವಸ್ಥೆ ಕುರಿತಂತೆ ರಾಷ್ಟ್ರ ಮಟ್ಟದಲ್ಲಿ ಬಲವಂತರಾಯ್‌ ಮೆಹ್ತಾ ವರದಿ ಶಿಫಾರಸು ಮಾಡಿತ್ತು. ಈ ಸಮಿತಿ ರಾಷ್ಟ್ರದ ಎಲ್ಲ ರಾಜ್ಯಗಳಲ್ಲಿ ಮೂರು ಹಂತದ ಪಂಚಾಯತ್‌ ವ್ಯವಸ್ಥೆ ಇರಬೇಕೆಂದು ಶಿಫಾರಸು ಮಾಡಿತ್ತು. ಕರ್ನಾಟಕದಲ್ಲಿ ಪಂಚಾಯತ್‌ ರಾಜ್‌ ವ್ಯವಸ್ಥೆ ಬಲವಂತ ರಾಯ್‌ ಮೆಹ್ತಾ ಸಮಿತಿ ಶಿಫಾರಸಿನ ಬಹುತೇಕ ಅಂಶಗಳನ್ನು ಒಳಗೊಂಡಿತ್ತು.
ಅಶೋಕ್‌ ಮೆಹ್ತಾ ಸಮಿತಿ ವರದಿ ಅನ್ವಯ 1983ರಲ್ಲಿ ಹೆಗಡೆ ಅವರ ಸರಕಾರ ಮಂಡಲ ಪಂಚಾಯತ್‌ ಮತ್ತು ಜಿಲ್ಲಾ ಪರಿಷತ್‌ ರಚನೆಗೆ ಮಾತ್ರ ಅವಕಾಶ ನೀಡಿತ್ತು. ಈ ಬಗ್ಗೆ ಸದನದ ಜಂಟಿ ಸದನ ಸಮಿತಿಗೆ ಒಪ್ಪಿಸಲಾಯಿತು. ಈ ಸಮಿತಿಯಲ್ಲಿ ಶಾಸಕರು ಈ ಸಮಿತಿಗಳಲ್ಲಿ ತಾಲೂಕು ಮಟ್ಟದಲ್ಲಿ ಶಾಸಕರಿಗೆ ಯಾವುದೇ ಅಧಿಕಾರ ಇಲ್ಲ ಎಂದು ವಾದ ಮಾಡಿದರು. ಆ ಸಂದರ್ಭದಲ್ಲಿ ತಾಲೂಕು ಸಮಿತಿ ರಚಿಸಲಾಯಿತು.

ಸಂವಿಧಾನದ 73ನೇ ತಿದ್ದುಪಡಿ ಅನ್ವಯ ರಾಜ್ಯದಲ್ಲಿಯೂ ಮೂರು ಹಂತದ ಚುನಾಯಿತ ಪಂಚಾಯತ್‌ ಇರುವಂತೆ ಮಾಡಲಾಗಿದೆ. ಅದರಂತೆ 1993ರಲ್ಲಿ ಕರ್ನಾಟಕ ಪಂಚಾಯತ್‌ ರಾಜ್‌ ಕಾಯ್ದೆ ಜಾರಿಗೆ ತರಲಾಯಿತು. ಅದು ಈಗ ಕರ್ನಾಟಕ ಗ್ರಾಮ ಸ್ವರಾಜ್‌ ಕಾಯ್ದೆಯಾಗಿ ಬದಲಾಗಿದೆ. ತಾಲೂಕು ಮಟ್ಟದಲ್ಲಿ ಎಲ್ಲ ಹಂತದ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲೂಕು ಮಟ್ಟದಲ್ಲಿ ಪಂಚಾಯತ್‌ ವ್ಯವಸ್ಥೆ ಇರಬೇಕಿರುವುದು ಅತ್ಯಂತ ಅಗತ್ಯವಿದೆ.

ರಾಜ್ಯದಲ್ಲಿ ಕೆಲವು ಸಚಿವರು ತಾಲೂಕು ಪಂಚಾಯತ್‌ಗಳ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ. ತಾಲೂಕು ಪಂಚಾಯತ್‌ ರದ್ದು ಮಾಡಲು ರಾಜ್ಯ ವಿಧಾನ ಮಂಡಲಗಳಿಗೆ ಅಧಿಕಾರ ಇಲ್ಲ. ಅದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಸಂವಿಧಾನಕ್ಕೆ ತಿದ್ದುಪಡಿ ತರದೇ ಯಾವುದೇ ರಾಜ್ಯಕ್ಕೆ ತಾಲೂಕು ಪಂಚಾಯತ್‌ ರದ್ದುಪಡಿ ಸುವ ಅಧಿಕಾರ ಇಲ್ಲ. ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿ ನಮ್ಮ ರಾಜ್ಯಕ್ಕೆ ಎರಡೇ ಪಂಚಾಯತ್‌ ವ್ಯವಸ್ಥೆ ಸಾಕು. ಅದಕ್ಕಾಗಿ ಪಂಚಾಯತ್‌ಗಳನ್ನು ತೆಗೆದುಹಾಕುವ ಹಾಗೂ ಸೇರಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡುವಂತೆ ಮನವಿ ಮಾಡಬಹುದು.

Advertisement

ರಾಜ್ಯ ಸರಕಾರದ ಮನವಿಯನ್ನು ಕೇಂದ್ರ ಸರಕಾರ ಅಧ್ಯಯನ ಮಾಡಿ, ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕರಿಸಬೇಕು. ದೇಶದ ಅರ್ಧದಷ್ಟು ರಾಜ್ಯಗಳು ಅದಕ್ಕೆ ಒಪ್ಪಿಗೆ ನೀಡಬೇಕು. ಅನಂತರ‌ ರಾಷ್ಟ್ರಪತಿ ಅಂಕಿತ ಹಾಕಬೇಕು.

ಈಗ ಎಪ್ರಿಲ್‌, ಮೇ ತಿಂಗಳಲ್ಲಿ ತಾಲೂಕು ಜಿಲ್ಲಾ ಪಂಚಾಯತ್‌ಗಳ ಚುನಾವಣೆ ನಡೆಸಬೇಕಿದೆ. ಸಂವಿಧಾನ ತಿದ್ದುಪಡಿಗೆ ಅಧ್ಯಾದೇಶ ಹೊರಡಿಸಲು ಅವಕಾಶ ಇಲ್ಲ. ಸಂಸತ್ತಿನಲ್ಲಿಯೇ ಅಂಗೀಕಾರ ಆಗಬೇಕು. ಈಗಿನ ಬೆಳವಣಿಗೆಯನ್ನು ಗಮನಿಸಿ ದರೆ, ತಾಲೂಕು, ಜಿಲ್ಲಾ ಪಂಚಾಯತ್‌ಗಳ ಚುನಾವಣೆ ಮುಂದೂಡುವ ಪ್ರಯತ್ನ ನಡೆಸಲಾಗುತ್ತಿದೆ.

ಈಗ ರಾಜ್ಯದಲ್ಲಿ 226 ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆಯಬೇಕಿದೆ. 31 ಜಿಲ್ಲಾ ಪಂಚಾಯತ್‌ಗಳ ಕ್ಷೇತ್ರ ಪುನರ್‌ ವಿಂಗಡಣೆ ಮಾಡಲಾಗುತ್ತಿದೆ. ಆಯೋಗ ನಿಗದಿತ ಅವಧಿಯಲ್ಲಿಯೇ ಚುನಾವಣೆ ನಡೆಸುವ ಭರವಸೆ ಇದೆ. ಯಾವುದೇ ಸರಕಾರ ಅಧಿಕಾರದಲ್ಲಿದ್ದಾಗ ಯಾವುದೇ ಬದಲಾವಣೆ ತರುವುದಿದ್ದರೆ ಅದನ್ನು ಮೊದಲೇ ಮಾಡ ಬಹುದು. ಆದರೆ ಚುನಾವಣೆ ಹತ್ತಿರ ಬಂದಾಗ ಈ ರಿತಿಯ ಚಟುವಟಿಕೆ ನಡೆಸುವುದು ಚುನಾವಣೆ ಮುಂದೂಡುವ ತಂತ್ರ ಎಂದು ಸಾರ್ವಜನಿಕರಿಗೆ ಸಂಶಯ ಮೂಡುತ್ತದೆ.

ಪಂಚಾಯತ್‌ ಗಳ ಕೆಲಸ ಹಂಚಿಕೆ
ಸಂವಿಧಾನದಲ್ಲಿ ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ 29 ಕಾರ್ಯಕ್ರಮಗಳನ್ನು ಮೂರು ವ್ಯವಸ್ಥೆಗಳಿಗೆ ಹಂಚಿಕೆ ಮಾಡುವಂತೆ ಸೂಚಿಸಲಾಗಿದೆ. ಕೆಳ ಮಟ್ಟದಲ್ಲಿ ನಡೆಯುವ ಕಾಮಗಾರಿಗಳನ್ನು ಗ್ರಾಮ ಪಂಚಾಯತ್‌ ಗಳಿಗೆ ನೀಡುವುದು. ಮಧ್ಯಮ ಹಂತದ ಯೋಜನೆಗಳನ್ನು ತಾಲೂಕು ಪಂಚಾ ಯತ್‌ಗಳಿಗೆ ನೀಡುವುದು. ದೊಡ್ಡ ಯೋಜನೆಗಳನ್ನು ಜಿಲ್ಲಾ ಪಂಚಾ ಯತ್‌ಗಳಿಗೆ ನೀಡಲು ಅವಕಾಶವಿದೆ. ಪ್ರಸ್ತುತ ತಾಲೂಕು ಪಂಚಾ ಯತ್‌ ವ್ಯವಸ್ಥೆ ಅಗತ್ಯ ಇದೆ. ಅಲ್ಲಿ ಹೆಚ್ಚಿನ ಅನುದಾನ ನೀಡಿ ಯೋಜನೆಗಳನ್ನು ಕೈಗೊಳ್ಳಬೇಕು. ರಾಜ್ಯ ದಲ್ಲಿ 4ನೇ ಹಣಕಾಸು ಆಯೋಗ ತಾಲೂಕು ಪಂಚಾ ಯತ್‌ಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಶಿಫಾರಸು ಮಾಡಿದೆ. ಅದು ಐದು ವರ್ಷಗಳಿಗೆ ಸೀಮಿತವಾಗಿತ್ತು. ಈಗಿನ ಸರಕಾ ರವೂ ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಅಧಿಕಾರಿಗಳಿಂದ ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ. ತಾಲೂಕು ಪಂಚಾ ಯತ್‌ ರದ್ದು ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗುತ್ತದೆ.

ಸಂವಿಧಾನದಲ್ಲಿರುವ ಅಂಶ
ಸಂವಿಧಾನದ ಆರ್ಟಿಕಲ್‌ 243ಬಿ ಅನ್ವಯ ಗ್ರಾಮ, ಮಧ್ಯಾಂತರ (ತಾಲೂಕು) ಮತ್ತು ಜಿಲ್ಲಾ ಮಟ್ಟದಲ್ಲಿ ಚುನಾ ಯಿತ ಪಂಚಾ ಯತ್‌ಗಳ ರಚನೆ ಮಾಡಲಾಗಿದೆ. ರಾಷ್ಟ್ರದ ಎಲ್ಲ ರಾಜ್ಯಗಳಲ್ಲಿಯೂ ಕೂಡ ಮೂರು ಹಂತದ ಚುನಾಯಿತ ಪಂಚಾ ಯತ್‌ಗಳು ಇರಬೇಕಿರುವುದು ಕಡ್ಡಾಯವಾಗಿದೆ. ಅಂದರೆ, ಗ್ರಾಮ ಪಂಚಾ ಯತ್‌, ಮಧ್ಯಾಂತರ (ತಾಲೂಕು) ಪಂಚಾಯತ್‌ ಮತ್ತು ಜಿಲ್ಲಾ ಪಂಚಾಯತ್‌ ಇರಬೇಕು. ಯಾವ ರಾಜ್ಯದ ಜನಸಂಖ್ಯೆ 20 ಲಕ್ಷಕ್ಕಿಂತ ಕಡಿಮೆ ಇದೆಯೋ. ಅಂತಹ ರಾಜ್ಯದಲ್ಲಿ ಮಧ್ಯಾಂತರ (ತಾಲೂಕು ) ಪಂಚಾ ಯತ್‌ ಕಡ್ಡಾಯ ಇಲ್ಲ. 20 ಲಕ್ಷಕಿಂತ ಹೆಚ್ಚು ಜನ ಸಂಖ್ಯೆ ಇರುವ ಎಲ್ಲ ರಾಜ್ಯಗಳಲ್ಲಿ ಮೂರು ಹಂತದ ಪಂಚಾ ಯತ್‌ ಕಡ್ಡಾಯ.

ರಾಜ್ಯದಲ್ಲಿ ಪಂಚಾಯತ್‌ ವ್ಯವಸ್ಥೆ ಇತಿಹಾಸ
ನಮ್ಮ ರಾಜ್ಯದಲ್ಲಿ ಸ್ವಾತಂತ್ರಾéನಂತರ‌ದಲ್ಲಿ ಪಂಚಾ ಯತ್‌ ರಾಜ್‌ ವ್ಯವಸ್ಥೆ ಜಾರಿಗೆ ಬಂದಿರುವುದು. 1959ರ ಗ್ರಾಮ ಪಂಚಾ ಯತ್‌ಗಳು ಮತ್ತು ಸ್ಥಳೀಯ ಸಂಸ್ಥೆಗಳು ಕಾಯ್ದೆಗಳ ಮೂಲಕ ಜಾರಿಗೆ ತರಲಾಗಿದೆ. ಇದರ ಪ್ರಕಾರ 1960 ರಲ್ಲಿ ನಮ್ಮ ರಾಜ್ಯದಲ್ಲಿ ಮೊದಲ ಚುನಾವಣೆ ನಡೆಸಲಾಯಿತು. ಆಗಿನ ಗ್ರಾಮ ಪಂಚಾ ಯತ್‌ಗಳು ಹಾಗೂ ತಾಲೂಕು ಅಭಿ ವೃದ್ಧಿ ಮಂಡಳಿಗಳು ರಚನೆಯಾಗಿ ಚುನಾವಣೆ ನಡೆಯಿತು. 1983ರ ವರೆಗೆ ಇದೇ ವ್ಯವಸ್ಥೆ ಅಸ್ತಿತ್ವದಲ್ಲಿದ್ದವು. 1983ರಲ್ಲಿ ಜನತಾ ಪಕ್ಷದ ರಾಮಕೃಷ್ಣ ಹೆಗಡೆ ಸರಕಾರ ಅಧಿಕಾರಕ್ಕೆ ಬಂತು. ಆ ಸಂದರ್ಭದಲ್ಲಿ ಅಬ್ದುಲ್‌ ನಜೀರ್‌ ಸಾಬ್‌ ಗ್ರಾಮೀಣಾ ಭಿವೃದ್ದಿ ಸಚಿವರಾಗಿದ್ದರು. ಆಗಿನ ಸರಕಾರ 1983ರಲ್ಲಿ ಕರ್ನಾಟಕ ಜಿಲ್ಲಾ ಪರಿಷತ್ತುಗಳು, ತಾಲೂಕು ಪಂಚಾ ಯತ್‌ ಸಮಿತಿಗಳು, ಮಂಡಲ ಪಂಚಾ ಯತ್‌ಗಳು ಮತ್ತು ನ್ಯಾಯ ಪಂಚಾ ಯತ್‌ಗಳ ಕಾಯ್ದೆ 1983 ಅಂತ ಜಾರಿಗೆ ತಂದಿತು.

ಕರ್ನಾಟಕ ವಿಧಾನ ಮಂಡಲದಿಂದ ಅಂಗೀಕಾರಗೊಂಡ ಈ ಕಾಯ್ದೆಗೆ ರಾಷ್ಟ್ರಪತಿಗಳ ಅಂಗೀಕಾರ ಸಿಕ್ಕಿರುವುದು 1985ರಲ್ಲಿ. ಆಗಿನ ವ್ಯವಸ್ಥೆಯಲ್ಲಿ 10 ಸಾವಿರ ಜನಸಂಖ್ಯೆಗೆ ಒಂದು ಮಂಡಲ ಪಂಚಾಯತ್‌ ರಚಿಸಲಾಗಿತ್ತು. ಮಂಡಲ ಪಂಚಾಯತ್‌ ಮತ್ತು ಜಿಲ್ಲಾ ಪಂಚಾಯತ್‌ ಜನರಿಂದ ಚುನಾಯಿತ ವ್ಯವಸ್ಥೆಯಾಗಿದ್ದವು. ತಾಲೂಕು ಮಟ್ಟದಲ್ಲಿ ತಾಲೂಕು ಪಂಚಾಯತ್‌ ಸಮಿತಿ ಅಸ್ತಿತ್ವಕ್ಕೆ ಬಂತು. ಸರಕಾರ ಸ್ಥಳೀಯ ವಿಧಾನಸಭೆ ಸದಸ್ಯರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್‌ ಸಮಿತಿಗಳನ್ನು ನಾಮ ನಿರ್ದೇಶನ ಮಾಡುತ್ತಿತ್ತು. ತಾಲೂಕು ಪಂಚಾಯತ್‌ ಸಮಿತಿ ಯಲ್ಲಿ ಮಂಡಲ ಪಂಚಾಯತ್‌ ಪ್ರಧಾನರು ಹಾಗೂ ತಾಲೂಕಿನ ಜಿಲ್ಲಾ ಪರಿಷತ್‌ ಸದಸ್ಯರಾಗಿರುತ್ತಿದ್ದರು.

ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ಮತ್ತು ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕಿನ ಅಧ್ಯಕ್ಷರು ಕೂಡ ತಾಲೂಕು ಸಮಿತಿಯ ಸದ್ಯಸ್ಯರಾಗಿದ್ದರು. ಆ ಸಮಿತಿಯಲ್ಲಿ ಹಿಂದುಳಿ ದವರು ಹಾಗೂ ಮಹಿಳೆಯರಿಗೆ ಸದಸ್ಯತ್ವಕ್ಕೆ ಅವಕಾಶ ಇಲ್ಲದಿರುವುದರಿಂದ ತಾಲೂಕು ಸಮಿತಿಯೇ 5 ಸದಸ್ಯರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಇತ್ತು.

– ಸಿ. ನಾರಾಯಣಸ್ವಾಮಿ, ಕರ್ನಾಟಕ ರಾಜ್ಯ ಪಂಚಾಯತ್‌ ಪರಿಷತ್‌ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next