Advertisement

ತಾ.ಪಂ., ಜಿ.ಪಂ. ಚುನಾವಣೆ ಹಿನ್ನೆಲೆ: ಮೂರು ಪಕ್ಷಗಳಿಂದ ಸಿದ್ಧತೆ ಜೋರು

07:39 PM Feb 08, 2022 | Team Udayavani |

ಉಡುಪಿ: ಎಪ್ರಿಲ್‌ ಅಥವಾ ಮೇ ತಿಂಗಳಲ್ಲಿ ನಡೆಯಬಹುದಾದ ತಾಲೂಕು ಪಂಚಾಯತ್‌ ಹಾಗೂ ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಗೆಲುವಿಗಾಗಿ ಸಂಘಟನಾತ್ಮಕ ಸಿದ್ಧತೆ ಶುರುಮಾಡಿವೆ.

Advertisement

ತಾ.ಪಂ., ಜಿ.ಪಂ. ಚುನಾವಣೆ ಘೋಷಣೆಗೂ ಮೊದಲು ಕ್ಷೇತ್ರ ಮರು ವಿಂಗಡಣೆ ಯಾಗಲಿದೆ. ಕ್ಷೇತ್ರ ಮರು ವಿಂಗಡಣೆಯಾದಲ್ಲಿ, ಆಕ್ಷೇಪಣೆಗಳನ್ನು ಆಹ್ವಾನಿಸಿ, ಅಂತಿಮ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಅನಂತರ ಕ್ಷೇತ್ರವಾರು ಮೀಸಲು ಘೋಷಿಸಿ, ಆಕ್ಷೇಪಣೆ ಆಹ್ವಾನಿಸಿ, ಅಂತಿಮಗೊಳಿಸಲಾಗುತ್ತದೆ.

ತದನಂತರದಲ್ಲಿ ಚುನಾವಣೆ ದಿನಾಂಕ ನಿಗದಿಯಾಗಲಿದೆ. ಜೂನ್‌ ಅಥವಾ ಜುಲೈ ತಿಂಗಳಲ್ಲಿ ತಾ.ಪಂ., ಜಿ.ಪಂ. ಚುನಾವಣೆ ನಡೆಯಬಹುದು ಎಂದು ಈ ಹಿಂದೆ ಅಂದಾಜಿಸಲಾಗಿತ್ತು. ಆದರೆ, ಇತ್ತೀಚಿನ ಬೆಳವಣಿಗೆ ಪ್ರಕಾರ ಎಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ವಿಸ್ತಾರಕರ ಕಾರ್ಯಾರಂಭ
ಬಿಜೆಪಿ ಕೇವಲ ತಾ.ಪಂ. ಅಥವಾ ಜಿ.ಪಂ. ಚುನಾವಣೆ ಆಧಾರದಲ್ಲಿ ಸಂಘಟನಾತ್ಮಕ ಕಾರ್ಯ ನಡೆಸುತ್ತಿಲ್ಲ. ಮುಂದೆ ಬರಲಿರುವ ವಿಧಾನಸಭೆ ಹಾಗೂ ಲೋಕಸಭೆ ಸಾರ್ವತ್ರಿಕ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಸುಮಾರು 200 ವಿಸ್ತಾರಕರ ನಿಯೋಜನೆ ಮಾಡಲಾಗಿದೆ. ಮುಂದಿನ ವಾರದಿಂದ ಈ ವಿಸ್ತಾರಕರು ಚುನಾವಣೆ ಸಿದ್ಧತೆಗೆ ಸಂಬಂಧಿಸಿದಂತೆ ಕಾರ್ಯಾರಂಭ ಮಾಡಲಿದ್ದಾರೆ. ಇದರ ಜತೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಯ ಮಾಹಿತಿಯನ್ನು ಮನೆ ಮನೆಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಜಿ.ಪಂ.ಗಳಿಗೆ ಉಸ್ತುವಾರಿಗಳ ನೇಮಕವೂ ಮಾಡಿಯಾಗಿದೆ. ಉಸ್ತುವಾರಿಗಳು ಸ್ಥಳೀಯವಾಗಿ ಚುನಾವಣ ನಿಮಿತ್ತ ಆಗಬೇಕಾಗಿರುವ ಕಾರ್ಯದ ಬಗ್ಗೆ ಹೆಚ್ಚು ಗಮನ ಹರಿಸಲಿದ್ದಾರೆ. ಶಕ್ತಿಕೇಂದ್ರ, ಮಹಾಶಕ್ತಿ ಕೇಂದ್ರ, ಮಂಡಲ, ತಾಲೂಕು, ಜಿಲ್ಲಾ ಹಂತದಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

ಬೂತ್‌ಮಟ್ಟದಿಂದಲೇ ತಯಾರಿ
ಜಿಲ್ಲೆಯಲ್ಲಿ ಬೂತ್‌ ಮಟ್ಟದಿಂದಲೇ ಕಾಂಗ್ರೆಸ್‌ ಪಕ್ಷ ಮುಂಬರುವ ತಾ.ಪಂ., ಜಿ.ಪಂ. ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಈಗಾಗಲೇ ಸದಸ್ಯತ್ವ ಅಭಿಯಾನ ನಡೆಸುತ್ತಿದ್ದೇವೆ. ಸದಸ್ಯತ್ವ ಅಭಿಯಾನಕ್ಕೆ ಪ್ರತೀ ಬೂತ್‌ಗೂ ಇಬ್ಬರನ್ನು ನಿಯೋಜನೆ ಮಾಡಲಾಗಿದೆ. 2,222 ಕಾರ್ಯಕರ್ತರನ್ನು ನಿಯೋಜನೆ ಮಾಡಿದ್ದು, ಅವರು ಸದಸ್ಯತ್ವ ಅಭಿಯಾನದ ಜತೆಗೆ ಚುನಾವಣ ಕಾರ್ಯಗಳನ್ನು ಮಾಡಲಿದ್ದಾರೆ. ಜತೆಗೆ ಜಿ.ಪಂ.ಗಳಲ್ಲಿ ಸದಸ್ಯತ್ವ ಅಭಿಯಾನಕ್ಕೆ ಜವಾಬ್ದಾರಿಗಳನ್ನು ಘೋಷಣೆ ಮಾಡಲಾಗಿದೆ. ಅವರು ಕೂಡ ಚುನಾವಣ ಸಿದ್ಧತಾ ಕಾರ್ಯ ನಡೆಸಲಿದ್ದಾರೆ. ಪ್ರತೀ ಬೂತ್‌ನಲ್ಲಿ ತಲಾ 100 ಪುರುಷ ಹಾಗೂ ಮಹಿಳೆಯರನ್ನು ಹೊಸದಾಗಿ ಪಕ್ಷಕ್ಕೆ ನೋಂದಾಯಿಸುವ ಕಾರ್ಯ ಆಗುತ್ತಿದೆ. ಇದು ಚುನಾವಣ ಸಿದ್ಧತೆಗೂ ಅನುಕೂಲವಾಗಲಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಮಾಹಿತಿ ನೀಡಿದರು.

Advertisement

ಉಸ್ತುವಾರಿಗಳಿಂದ ಸಭೆ
ಕರಾವಳಿಯಲ್ಲಿ ಜೆಡಿಎಸ್‌ ಪಕ್ಷವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ವರಿಷ್ಠರು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಉಸ್ತುವಾರಿಗಳ ಪ್ರವಾಸ ಆರಂಭವಾಗಿದೆ. ಅವರು ನೀಡುವ ಸಲಹೆ, ಸೂಚನೆಗಳಂತೆ ಮುಂದಿನ ಕಾರ್ಯ ಚಟುವಟಿಕೆ ನಡೆಸಲಿದ್ದೇವೆ. ಮುಖ್ಯವಾಗಿ ಎರಡು ರಾಷ್ಟ್ರೀಯ ಪಕ್ಷಗಳು ಕೋಮು ಭಾವನೆ ಬಿತ್ತುತ್ತಿರುವುದು, ಆಡಳಿತ ಪಕ್ಷದ ನಿರಂತರ ವೈಫ‌‌ಲ್ಯ ಇತ್ಯಾದಿಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಜತೆಗೆ ಪಕ್ಷ ಸಂಘಟನೆ, ಚುನಾವಣೆ ಸಿದ್ಧತೆ ನಡೆಸಲಿದ್ದೇವೆ ಎಂದು ಜಿಡಿಎಸ್‌ ನಾಯಕರೊಬ್ಬರು ತಿಳಿಸಿದ್ದಾರೆ.

ಬಿಜೆಪಿಯಿಂದ ಚುನಾವಣೆ ಗೋಸ್ಕರವೇ ತಯಾರಿ ಇರುವುದಿಲ್ಲ. ಪ್ರತಿದಿನವೂ ಸಂಘಟನಾತ್ಮಕ ಕಾರ್ಯಗಳು ನಡೆಯುತ್ತಲೇ ಇರುತ್ತದೆ. ಪಕ್ಷದ ಕೇಂದ್ರ ಕಚೇರಿಯಿಂದ ಬರುವ ಸೂಚನೆಗಳನ್ನು ಅನುಷ್ಠಾನ ಮಾಡುತ್ತೇವೆ. ಬೇರೆ ಬೇರೆ ರೀತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ.
-ಕುಯಿಲಾಡಿ ಸುರೇಶ್‌ ನಾಯಕ್‌,
ಜಿಲ್ಲಾ ಬಿಜೆಪಿ ಅಧ್ಯಕ್ಷ

ತಾ.ಪಂ., ಜಿ.ಪಂ., ಚುನಾವಣೆ ಹಿನ್ನೆಲೆ ಯಲ್ಲಿ ಈಗಾ ಗಲೇ ಬೂತ್‌ಮಟ್ಟದಲ್ಲಿ ಕಾರ್ಯಾ ರಂಭ ಮಾಡಿ ದ್ದೇವೆ. ಸದಸ್ಯತ್ವ ಅಭಿಯಾನದ ಜತೆಗೆ ಜತೆಗೆ ಚುನಾವಣೆ ಸಿದ್ಧತೆ ಯನ್ನು ಮಾಡಿಕೊಳ್ಳುತ್ತಿದ್ದೇವೆ.
-ಅಶೋಕ್‌ ಕುಮಾರ್‌ ಕೊಡವೂರು,
ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

ಆಡಳಿತ ಪಕ್ಷದ ದುರಾ ಡಳಿತ ವನ್ನು ಜನರ ಮುಂದಿಡುವ ಜತೆಗೆ ತಾ.ಪಂ., ಜಿ.ಪಂ. ಚುನಾವಣೆಗೆ ಪಕ್ಷದ ವರಿಷ್ಠರ ಸೂಚನೆ ಯಂತೆ ಕಾರ್ಯಾರಂಭ ಮಾಡಲಿದ್ದೇವೆ.
-ಯೋಗೀಶ್‌ ವಿ.ಶೆಟ್ಟಿ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ

ಅಧಿಸೂಚನೆ ನಿರೀಕ್ಷೆ
ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌ ಚುನಾವಣೆ ಸಂಬಂಧ ಸರಕಾರ ಅಥವಾ ಚುನಾವಣ ಆಯೋಗ ದಿಂದ ಯಾವುದೇ ಅಧಿಸೂಚನೆ ಅಥವಾ ನಿರ್ದೇಶನ ಬಂದಿಲ್ಲ. ಸರಕಾರ ಅಥವಾ ಚುನಾವಣ ಆಯೋಗದಿಂದ ಬರುವ ನಿರ್ದೇಶನದಂತೆ ಮುನ್ನಡೆಯಲಿದ್ದೇವೆ.
-ಕೂರ್ಮಾರಾವ್‌ ಎಂ.,
ಜಿಲ್ಲಾಧಿಕಾರಿ, ಉಡುಪಿ

 

 

Advertisement

Udayavani is now on Telegram. Click here to join our channel and stay updated with the latest news.

Next