ಸವಣೂರು: ಬೇಸಿಗೆ ಆರಂಭದ ನಂತರ ಕುಡಿಯುವ ನೀರಿನ ವ್ಯವಸ್ಥೆಗೆ ಮುಂದಾಗುವ ಬದಲಾಗಿ ಈಗಿನಿಂದಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಕರ್ತವ್ಯವಾಗಿದೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿಭಾಯಿಸಬೇಕು. ನಿರ್ಲಕ್ಷ್ಯ ಅಧಿಕಾರಿಗಳನ್ನು ಅಮಾನತಿಗೆ ಗುರಿ ಪಡಿಸಲಾಗುವುದು ಎಂದು ಶಾಸಕ ಬಸವರಾಜ ಬೊಮ್ಮಾಯಿ ಎಚ್ಚರಿಸಿದರು. ಪಟ್ಟಣದ ಉಪವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ಶನಿವಾರ ಜರುಗಿದ ತಾಲೂಕು ಮಟ್ಟದ ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪಿಡಿಒ ಹಾಗೂ ಸಮಿತಿ ಸದಸ್ಯರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಕುಡಿಯುವ ನೀರಿನ ಯೋಜನೆಯ ಅನುಷ್ಠಾನದಲ್ಲಿ ಅಡ್ಡಿ ಪಡಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆ ಸಂದರ್ಭದಲ್ಲಿ ನೀರಿನ ತೊಂದರೆ ಉಂಟಾಗದಂತೆ ಕಾನೂನು ಚೌಕಟ್ಟಿನಲ್ಲಿ ಮುಂಜಾಗ್ರತೆ ವಹಿಸಿ ಕೆಲಸ ಮಾಡುವುದು ಅಧಿಕಾರಿಗಳ ಹೊಣೆಗಾರಿಕೆಯಾಗಿದೆ ಎಂದರು.
ಮೆಳ್ಳಾಗಟ್ಟಿ ವರದಾ ನದಿಯ ಸಂಪ್‌ನಿಂದ ಪಟ್ಟಣದ ಮೋತಿತಾಲಾಬಿಗೆ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಅಡ್ಡಿಪಡಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪುರಸಭೆ ಮುಖ್ಯಾಧಿಕಾರಿಗೆ ಆದೇಶ ನೀಡಿದರು. ಉಪವಿಭಾಗಾಧಿ ಕಾರಿ ಬೋಯಾರ್ ಹರ್ಷಲ್ ನಾರಾಯಣರಾವ್ ಹಾಗೂ ತಹಶೀಲ್ದಾರ್ ವಿ.ಡಿ. ಸಜ್ಜನ್ ಅವರಿಗೆ ಸಹಕಾರ ನೀಡುವ ಮೂಲಕ ತಾಲೂಕಿನ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ತಾಪಂ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ, ಇಒ ಎಸ್.ಎಂಡಿ. ಇಸ್ಮಾಯಿಲ್, ಎಡಿ ಸದಾನಂದ ಅಮರಾಪುರ, ಹೆಸ್ಕಾಂ, ಸಿಡಿಪಿಒ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕಿನ 21 ಗ್ರಾಪಂ ಪಿಡಿಒ ಹಾಗೂ ಇತರರು ಪಾಲ್ಗೊಂಡಿದ್ದರು.
ಪುರಸಭೆ ಮುಖ್ಯಾಧಿಕಾರಿಗೆ ತರಾಟೆ
ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚೆ ನಡೆಸುವ ವೇಳೆ ಮುಖ್ಯಾ ಧಿಕಾರಿ ಎಚ್.ಎ. ಕುಮಾರ ಸಭೆಯಿಂದ ಹೊರ ಹೋಗುವುದು ಗಮನಿಸಿದರೆ ಪಟ್ಟಣ ಅಭಿವೃದ್ಧಿ ಬಗ್ಗೆ ನಿಮಗೆ ಎಷ್ಟು ಕಾಳಜಿ ಇದೇ ಎಂದು ತಿಳಿಯುತ್ತದೆ. ಈ ರೀತಿ ಕೆಲಸ ಮಾಡಿದರೆ ಪುರಸಭೆ ಸುಧಾರಣೆಯಾಗುವುದು ಯಾವಾಗ ಎಂದು ತರಾಟೆಗೆ ತೆಗೆದುಕೊಂಡರು. ಪಟ್ಟಣಕ್ಕೆ ವರದಾ ನದಿಯಿಂದ ಹರಿಯುವ ನೀರನ್ನು ತಡೆಯಲು ಯಾರೋ ಮೂರ್‍ನಾಲ್ಕು ಜನ ಮುಂದಾಗುತ್ತಿರುವ ಬಗ್ಗೆ ಇದುವರೆಗೂ ಸರ್ಕಾರಕ್ಕಾಗಲಿ ಹಾಗೂ ನನಗಾಗಲಿ ಒಂದೇ ಒಂದು ಪತ್ರವನ್ನು ಸಹ ಬರೆದಿಲ್ಲ. ಬೇಸಿಗೆ ಬರುವ ಮುನ್ನ ವರ್ಗಾವಣೆಗೊಳ್ಳುವ ವಿಚಾರ ಇದ್ದರೆ ತಿಳಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಾಧಿಕಾರಿ ಕುಮಾರ ಮಾತನಾಡಿ, ಬೇಸಿಗೆಯಲ್ಲಿ ಪಟ್ಟಣಕ್ಕೆ ಕುಡಿಯುವ ನೀರಿನ ತೊಂದರೆ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.