ಕಾಪು: ಭಾರತ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಮಂದಿ ದೇಶ ಭಕ್ತರು, ಹೋರಾಟಗಾರರು, ನಾಗರಿಕರು ತಮ್ಮ ಪ್ರಾಣ ತ್ಯಾಗ, ಬಲಿದಾನಗೈದಿದ್ದಾರೆ. ಪೂರ್ವಜರಲ್ಲಿದ್ದ ಸ್ವದೇಶಾಭಿಮಾನದ ಕಿಚ್ಚು ಹಾಗೂ ಶ್ರದ್ಧೆಯ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರಕಿದ್ದು ಅದನ್ನು ಮುಂದಿನ ಪೀಳಿಗೆಗೂ ತಿಳಿಸಿ ಕೊಡುವ ಪ್ರಯತ್ನ ನಮ್ಮಿಂದ ನಡೆಯಬೇಕಿದೆ ಎಂದು ಕಾಪು ತಹಸೀಲ್ದಾರ್ ನಾಗರಾಜ್ ವಿ. ನಾಯ್ಕಡ ಹೇಳಿದರು.
ಕಾಪು ತಾಲೂಕು ಮಟ್ಟದ ರಾಷ್ಟ್ರೀಯ ಮತ್ತು ನಾಡ ಹಬ್ಬಗಳ ಆಚರಣಾ ಸಮಿತಿ ಹಾಗೂ ಹಾಗೂ ತಾಲೂಕು ಆಡಳಿತದ ವತಿಯಿಂದ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಹೋರಾಡಿದ ಮಹನೀಯರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಜಗತ್ತಿನಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದ್ದು, ವಿಶ್ವಗುರು ಆಗಿ ಬೆಳೆಯುತ್ತಿದೆ. ದೇಶದ ಪ್ರಗತಿ ಮತ್ತು ಉನ್ನತಿಗೆ ನಾವೆಲ್ಲರೂ ನಮ್ಮಿಂದ ಸಾಧ್ಯವಾಗುವಷ್ಟು ರೀತಿಯಲ್ಲಿ ಸಹಕರಿಸುವಂತಾಗಬೇಕು. ಇದು ಸ್ವಾತಂತ್ರೋತ್ಸವಕ್ಕೆ ನೀಡುವ ಕೊಡುಗೆಯಾಗಲಿದೆ ಎಂದರು.
ಸಮ್ಮಾನ, ಗೌರವಾರ್ಪಣೆ : ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಮ್ಮಾನಿಸಿ, ಗೌರವಿಸಲಾಯಿತು. ಪೊಲೀಸ್, ಗೃಹರಕ್ಷಕದಳ, ಸೇವಾದಳ, ಎಸ್‌ಸಿಸಿ ವಿದ್ಯಾರ್ಥಿಗಳಿಂದ ಧ್ವಜ ವಂದನೆ ನಡೆಯಿತು.
ಕಾಪು ಪುರಸಭೆ ಮುಖ್ಯಾಧಿಕಾರಿ ಸಂತೋಷ್ ಎಸ್.ಡಿ., ಕಾಪು ಪೊಲೀಸ್ ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ, ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಎಂ. ಗಾಂವ್ಕರ್, ಕಾಪು ಎಸ್ಸೈ ಶ್ರೀಶೈಲ ಮುರಗೋಡ, ಕ್ರೈಂ ಎಸ್ಸೈ ಪುರುಷೋತ್ತಮ್, ಕಾಪು ಪುರಸಭೆ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್, ನಾಗೇಶ್, ಶೈಲೇಶ್ ಅಮೀನ್, ಸತೀಶ್ ಚಂದ್ರ ಮೂಳೂರು, ಉಮೇಶ್ ಕರ್ಕೇರ, ಶೋಭಾ ಬಂಗೇರ, ಸರಿತಾ ಪೂಜಾರಿ, ಹರಿಣಾಕ್ಷಿ ದೇವಾಡಿಗ, ರಾಧಿಕಾ ಸುವರ್ಣ, ಸರಿತಾ ಶಿವಾನಂದ್, ಸುರೇಶ್ ದೇವಾಡಿಗ, ಲತಾ ದೇವಾಡಿಗ ಮೊದಲಾದವರು ಪಾಲ್ಗೊಂಡಿದ್ದರು.
ಕಾಪು ತಾಲೂಕು ಶಿಕ್ಷಣ ಸಂಯೋಜಕ ಶಂಕರ್ ಸುವರ್ಣ ಸ್ವಾಗತಿಸಿದರು. ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್ ಎಚ್.ಡಿ. ವಂದಿಸಿದರು. ಕ್ಲಾರೆನ್ಸ್ ಲೆಸ್ಟರ್ನ್ ಕರ್ನೇಲಿಯೋ ಮತ್ತು ಸುಧಾಕರ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.