ಕೊಳ್ಳೇಗಾಲ: ಸಾರ್ವಜನಿಕರ ಆರೋಗ್ಯ ಕಾಪಾಡಲು ವೈದ್ಯರು ಸದಾ ಸಿದ್ಧರಿದ್ದು ಪ್ರತಿಯೊಬ್ಬರು ಸೇವೆ ಪಡೆಯಬೇಕು ಎಂದು ನಗರಸಭೆ ಅಧ್ಯಕ್ಷೆ ಸುಶೀಲಾ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ತಾಲೂಕು ಮಟ್ಟದ ಆರೋಗ್ಯ ಮೇಳ 2022ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯವೇ ಭಾಗ್ಯ, ವೈದ್ಯರು ದೇವರಿಗೆ ಸಮಾನ ಏಕೆಂದರೆ ಕೊರೊನಾ ಸಂದ ರ್ಭದಲ್ಲಿ ಸೋಂಕಿತರನ್ನು ಕಾಪಾಡಲು ತಮ್ಮ ಪ್ರಾಣ ಪಣಕ್ಕಿಟ್ಟು ಸೇವೆ ಸಲ್ಲಿಸಿದ್ದಾರೆ ಎಂದರು.
ಆರೋಗ್ಯ ಶಿಬಿರ ಹೆಚ್ಚು ಹೆಚ್ಚು ಆಯೋಜಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಸಾರ್ವಜನಿಕರು ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸರ್ಕಾರಿ ಯೋಜನೆಯನ್ನು ಯಶಸ್ವಿಗೊಳಿಸಬೇಕು ಮತ್ತು ಸೂಕ್ತ ಚಿಕಿತ್ಸೆ ಪಡೆದುಕೊಂಡು ಆರೋಗ್ಯವಂತರಾಗಬೇಕು ಎಂದರು. ತಾಲೂಕು ವೈದ್ಯಾಧಿಕಾರಿ ಡಾ.ಗೋಪಾಲ್ ಮಾತನಾಡಿ, ಈ ಹಿಂದೆ ಆಯೋಜಿಸಿದ್ದ ಶಿಬಿರಗಳಲ್ಲಿ ಕೇವಲ ತಪಾಸಣೆ ಮಾತ್ರ ಲಭ್ಯತೆವಿತ್ತು. ಆದರೆ ಈ ಬಾರಿಯ ಆರೋಗ್ಯ ಮೇಳದಲ್ಲಿ ಎಲ್ಲಾ ತರಹದ ಕಾಯಿಲೆಗೆ ಚಿಕಿತ್ಸೆ ನೀಡಲಾಗುವುದು ಮತ್ತು 30 ವರ್ಷ ಮೇಲ್ಪ ಟ್ಟವರಿಗೆ ಬಿಪಿ ಮತ್ತು ಸಕ್ಕರೆ ಕಾಯಿಲೆ ಪರೀಕ್ಷೆ ಮಾಡಿ ಆರೋಗ್ಯ ಕಾರ್ಡುಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಸಾರ್ವಜನಿಕರು ಪ್ರತಿಯೊಂದು ಚಿಕಿತ್ಸೆ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದ ವೈದ್ಯಾಧಿಕಾರಿ, ಕಾಯಿಲೆ ಬಂದಾಗ ಅಂಜಬಾರದು. ಧೈರ್ಯದಿಂದ ಹೆದರಿಸುವ ತಾಳ್ಮೆ ಬೆಳೆಸಿಕೊಳ್ಳಬೇಕು ಎಂದರು. ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಾಜಶೇಖರ್, ವೈದ್ಯರಾದ ಡಾ. ರವಿಶಂಕರ್, ಡಾ.ವೇಣುಗೋಪಾಲ್, ಡಾ.ರಾಜು, ಡಾ.ನಾಗೇಂದ್ರ, ಸಿಡಿಪಿಒ ನಾಗೇಶ್ ಇತರರು ಇದ್ದರು.