ಬಂಟ್ವಾಳ: ಕುಟುಂಬ ನಿರ್ವಹಣೆಗೆ ಉದ್ಯೋಗ ಬೇಕು. ಮಕ್ಕಳಿಗೆ ನೈತಿಕ ಶಿಕ್ಷಣವನ್ನು ಮಹಿಳೆ ನೀಡಬೇಕು. ಸಂಸ್ಕಾರ ಪ್ರತಿಯೊಬ್ಬರಲ್ಲಿದೆ. ಆದರೆ ಇದು ಬೆಳೆಯಬೇಕಾದರೆ ಗ್ರಾಮಾಭಿವೃದ್ಧಿ ಯೋಜನೆಯಂತಹ ಸಂಘ- ಸಂಸ್ಥೆಗಳಿಂದ ಸಾಧ್ಯ. ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಎಎಸ್‌ಐ ಭಾರತಿ ಹೇಳಿದರು.
ಅವರು ಬಿ.ಸಿ. ರೋಡ್ ಕುಲಾಲ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಆಶ್ರಯದಲ್ಲಿ ಜರಗಿದ ದಂಪತಿ ಸಮಾವೇಶ ಮತ್ತು ಕುಟುಂಬ ನಿರ್ವಹಣೆಗಾಗಿ ಸ್ವ ಉದ್ಯೋಗ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ತಪ್ಪು ಮಾಡಿದರೆ ತಿದ್ದಬೇಕು. ಮಕ್ಕಳೇ ದೇಶದ ಆಸ್ತಿಯಾಗಿರುವುದರಿಂದ ಅವರಿಗೆ ಸರಿಯಾದ ರೂಪ ಕೊಡುವುದು ತಂದೆ-ತಾಯಿಯ ಕರ್ತವ್ಯ ಎಂದು ತಿಳಿಸಿದರು. ಪ್ರಗತಿಬಂಧು ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷ ಸದಾನಂದ ಅಧ್ಯಕ್ಷತೆ ವಹಿಸಿದ್ದರು.
ಪುರಸಭಾ ಅಧಿಕಾರಿ ಮತ್ತಾಡಿ ಮಾತನಾಡಿ, ಕುಟುಂಬದಲ್ಲಿ ಏನೇ ವಿಚಾರ ಇದ್ದರೂ ಎಲ್ಲರೂ ಜತೆಗೂಡಿ ಮಾತಾಡಿ ಒಪ್ಪಂದ ಮಾಡಿಕೊಳ್ಳಬೇಕು. ಇದರಿಂದ ಕುಟುಂಬದಲ್ಲಿ ಒಳ್ಳೆಯ ವಾತಾವರಣ ಸೃಷ್ಟಿ ಮಾಡಲು ಸಾಧ್ಯ ಮಕ್ಕಳಿಗೆ ಬೇರೆ ಬೇರೆ ದುಶ್ಚಟಗಳು ಬೇಗ ಅಂಟಿಕೊಳ್ಳುತ್ತವೆ. ಇದರಿಂದಲೂ ಮಕ್ಕಳನ್ನು ದೂರವಿರಿಸಬೇಕು ಎಂದರು.
ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕಿ ಅನಸೂಯಾ ಮಾತನಾಡಿ, ಕುಟುಂಬ ನಿರ್ವಹಣೆಗೆ ಸ್ವ ಉದ್ಯೋಗದ ಆವಶ್ಯಕತೆ ಬಹಳಷ್ಟಿದೆ. ಗಂಡ-ಹೆಂಡತಿ ಇಬ್ಬರೂ ದುಡಿಯುವ ಸದಸ್ಯರಾಗಿರುವುದರಿಂದ ಮಕ್ಕಳಿಗೆ ತಮ್ಮ ಭಾವನೆಗಳನ್ನು ಹಂಚಲು ಅವಕಾಶ ಇರುವುದಿಲ್ಲ. ಮಕ್ಕಳನ್ನು ಟಿ.ವಿ. ಮೊಬೈಲ್‌ಗಳಿಗೆ ತಮ್ಮ ಗಮನ ಹರಿಸಲು ಬಿಡುವುದರಿಂದ ಅವರಿಗೆ ಮನೆಯವರ ಸಂಪರ್ಕ, ಆತ್ಮೀಯತೆ ಕಡಿಮೆ ಆಗುವುದು ಎಂದು ತಿಳಿಸಿದರು.
ಬಂಟ್ವಾಳ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಸುನೀತಾ ನಾಯಕ್ ಮಾತನಾಡಿದರು. ಬಡೆಕೊಟ್ಟು ಸ.ಹಿ.ಪ್ರಾ. ಶಾಲಾ ಶಿಕ್ಷಕ ರಂಜಿತ್ ಕುಮಾರ್, ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು. ದಂಪತಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಟ್ಲ ಮೇಲ್ವಿಚಾರಕಿ ಪ್ರೇಮಾ ಸ್ವಾಗತಿಸಿ ಮಮತಾ ವಂದಿಸಿದರು. ಜ್ಞಾನವಿಕಾಸ ಸಮನ್ವ ಯಾಧಿಕಾರಿ ಜಯಂತಿ ಕಾರ್ಯಕ್ರಮ ನಿರೂಪಿಸಿದರು.
ನಂಬಿಕೆ-ವಿಶ್ವಾಸ ಅಗತ್ಯ
ದಾಂಪತ್ಯ ಶಾಶ್ವತವಾಗಿ ಉಳಿಯಬೇಕಾದರೆ ನಂಬಿಕೆ- ವಿಶ್ವಾಸ ಅಗತ್ಯ. ಸಂಸಾರದಲ್ಲಿ ಸ್ತ್ರೀ-ಪುರುಷ ಮನೆಯ
ಬಾಗಿಲು – ಹೊಸ್ತಿಲುಗಳಂತೆ ಪೂರಕವಾಗಿರಬೇಕು. ಕುಟುಂಬಗಳ ಸರ್ವಾಂಗೀಣ ಅಭಿವೃದ್ಧಿಗೆ ಒಬ್ಬರನ್ನೊಬ್ಬರು
ಅರ್ಥ ಮಾಡಿಕೊಳ್ಳುವ ರೀತಿಯೂ ಅಷ್ಟೇ ಮುಖ್ಯ.
– ಸದಾನಂದ, ಪ್ರಗತಿಬಂಧು ಸ್ವ ಸ. ಸಂ. ಕೇಂದ್ರ ಒಕ್ಕೂಟದ ಅಧ್ಯಕ್ಷ