ಯಲಬುರ್ಗಾ: ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ರೋಗ ನಿಯಂತ್ರಣದಲ್ಲಿ ಸಮುದಾಯದ ಪಾತ್ರ ಬಹು ಮುಖ್ಯವಾಗಿದೆ. ಸ್ವಚ್ಚತೆ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಪಪಂ ಮುಖ್ಯಾಧಿಕಾರಿ ನಾಗೇಶ ಹೇಳಿದರು. ಪಟ್ಟಣದ ಸಿದ್ದರಾಮೇಶ್ವರ ಪ್ರೌಢಶಾಲೆಯಲ್ಲಿ ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಕೆ ಕೊಪ್ಪಳ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಾರ್ಯಾಲಯದ ವತಿಯಿಂದ ಹಮ್ಮಿಕೊಂಡ ತಾಲೂಕು ಮಟ್ಟದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಪಂ ಪೌರಕಾರ್ಮಿಕರು ಪಟ್ಟಣವನ್ನು ಸ್ವಚ್ಛತೆಯಿಂದ ಇಟ್ಟಿದ್ದಾರೆ. ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತಲಿನ ವಾತವರಣ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.
ಹಿರಿಯ ಆರೋಗ್ಯ ಸಹಾಯಕ ಪಿ.ವೈ. ಮ್ಯಾಗೇರಿ ಪ್ರಾಸ್ತಾವಿಕ ಮಾತನಾಡಿ, ಮನುಕುಲದ ಇತಿಹಾಸದಲ್ಲೇ ಮಲೇರಿಯಾ ಒಂದು ಹಳೆಯ ಪಿಡುಗು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲುವಂತೆ ಮಾಡಿ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿ ಪ್ಲಾಸ್ಮೋಡಿಯಂ ರೋಗಾಣುವಿನಿಂದ ಉಂಟಾಗುತ್ತಿರುವ ಮಾನವ ನಿರ್ಮಿತ ಮಾರಕ ರೋಗವಾಗಿದೆ ಎಂದರು.
ವಿ.ಬಿ.ಡಿ ತಾಂತ್ರಿಕ ಮೇಲ್ವಿಚಾರಕ ಇಮ್ತಿಯಾಜ್ ಅಹ್ಮದ್ ನೇವಾರ್ ಮಾತನಾಡಿ, ಮಲೇರಿಯಾ ರೋಗವು ಸೋಂಕಿತ ಅನಾಫಿಲಿಸ್ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ. ಚಳಿಯ ಹಂತ, ಜ್ವರದ ಹಂತ, ಬೇವರಿನ ಹಂತ ಹೀಗೆ ಮೂರು ಹಂತದಲ್ಲಿ ಮಲೇರಿಯಾ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಈ ಲಕ್ಷಣಗಳು ಕಂಡು ಬಂದ ತಕ್ಷಣ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮನೆಯ ಸುತ್ತಮುತ್ತ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ನೀರು ನಿಲ್ಲದಂತೆ ಎಚ್ಚರ ವಹಿಸಿ ತ್ಯಾಜ ವಸ್ತುಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು ಹಾಗೂ ಹಗಲಿನಲ್ಲಿಯೂ ಸಹ ಸೊಳ್ಳೆ ಪರದೆ ಉಪಯೋಗಿಸಬೇಕು ಹಾಗೂ ಸಂಜೆ, ಬೆಳಗ್ಗೆ ಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಸಂಜೆ ಮೈ ತುಂಬಾ ಬಟ್ಟೆ ಧರಿಸಿಕೊಂಡು ಸೊಳ್ಳೆ ಕಡಿಯದಂತೆ ರಕ್ಷಣಾ ವಿಧಾನಗಳನ್ನು ಅನುಸರಿಸಬೇಕೆಂದು ಸಲಹೆ ನೀಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ಸೊಳ್ಳೆ ಕಡಿತದಿಂದ ಬರುವ ರೋಗಗಳ ಕುರಿತು ತಿಳಿಸಿದರು.
ಮುಖ್ಯಶಿಕ್ಷಕ ಎಸ್.ಡಿ. ಅಪ್ಪಾಜಿ ಅಧ್ಯಕ್ಷತೆ ವಹಿಸಿದ್ದರು. ಡಾ| ಶೇಖರ ಭಜಂತ್ರಿ, ಜಿಲ್ಲಾ ಮಲೇರಿಯಾ ಕಾರ್ಯಾಲಯದ ಎಲ್.ವಿ. ಸಜ್ಜನ್ ಮತ್ತು ಆರೋಗ್ಯ ಇಲಾಖೆಯ ಪ್ರಭಾರಿ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಮಂಜುಳಾ ರಾಟಿ, ಕಿರಿಯ ಆರೋಗ್ಯ ಸಹಾಯಕಿಯರಾದ ಎನ್.ಆರ್. ತೋಟದ, ಅಶೋಕ ಆಲೂರು ಹಾಗೂ ಪ್ರೌಢಶಾಲೆಯ ಹಾಗೂ ಕಾಲೇಜಿನ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು. ಕುಮಾರಿ ರೇಣುಕಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಆರೋಗ್ಯ ಮಿತ್ರ ಪ್ರಕಾಶ ಭಿಕ್ಷಾವರ್ತಿಮಠ ಸ್ವಾಗತಿಸಿದರು. ಅರುಣಕುಮಾರ ಹಿರೇಮಠ ನಿರೂಪಿಸಿದರು. ಬೆಳಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ಜರುಗಿತು.