Advertisement
ಡಾ| ರಾಬರ್ಟ್ ರೆಬೆಲ್ಲೋ ಅವರ ವಿರುದ್ಧ ಜನಪ್ರತಿನಿಧಿಗಳು, ಸಾರ್ವಜನಿಕ ರಿಂದ ಹಲವಾರು ದೂರುಗಳು ಬಂದಿವೆ. ಅವರು ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದ್ದು, ತತ್‌ಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿದ್ದು, ಮುಂದಿನ ದಿನಗಳಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಆದೇಶ ತಿಳಿಸಿದೆ. ಡಾ| ರೆಬೆಲ್ಲೊ ಅವರು 10ಕ್ಕೂ ಅಧಿಕ ವರ್ಷಗಳಿಂದ ಇದೇ ಆಸ್ಪತ್ರೆಯಲ್ಲಿದ್ದರು.
ಡಾ| ರಾಬರ್ಟ್ ರೆಬೆಲ್ಲೋ ಅವರನ್ನು ಅಮಾನುತುಗೊಳಿಸಿ, ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ವೇತನ ಲೀನ್(ಹುದ್ದೆಯ ಹಕ್ಕು) ಪಡೆಯುವಂತೆ ಬದಲಾವಣೆ ಮಾಡಲಾಗಿದೆ. ಈ ಅವಧಿಯಲ್ಲಿ ಜೀವನಾಂಶ ಭತ್ತೆ ಪಡೆಯಬಹುದು. ತನಿಖೆ ನಡೆದು, ಮುಂದಿನ ಆದೇಶ ಬರುವವರೆಗೆ ಈಗ ಪಡೆಯುತ್ತಿದ್ದ ವೇತನದ ಅರ್ಧ ಭಾಗ ಸಿಗಲಿದೆ. ಆದರೆ ಮೇಲಧಿಕಾರಿಗಳ ಅನುಮತಿಯಿಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎನ್ನುವುದಾಗಿ ಆರೋಗ್ಯ ಇಲಾಖೆಯು ಆದೇಶ ದಲ್ಲಿ ತಿಳಿಸಿದೆ. ಅಮಾನತಿಗೆ ಕಾರಣವೇನು?
ಆಸ್ಪತ್ರೆಯ ಆವರಣದಲ್ಲಿರುವ ದೇವಸ್ಥಾನದ ಲೆಕ್ಕಪತ್ರಗಳಲ್ಲಿನ ಲೋಪದೋಷ ಕುರಿತಂತೆ ತಾ.ಪಂ. ಸದಸ್ಯರು ಆ. 28ರಂದು ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಪ್ರಸ್ತಾವಿಸಿದ್ದು, ಲೆಕ್ಕಪತ್ರದ ದಾಖಲೆ ನೀಡುವಂತೆ ವೈದ್ಯಾಧಿಕಾರಿಗೆ ಸೂಚಿಸಿದರೂ ನೀಡಿರಲಿಲ್ಲ. ಆ ಬಳಿಕ ದೇಗುಲದ ಹಳೆ ಸಮಿತಿಯನ್ನು ಆಗಿನ ಎಸಿ ಡಾ| ಮಧುಕೇಶ್ವರ್ ರದ್ದುಗೊಳಿಸಿ, ವೈದ್ಯ ಡಾ| ವಿಜಯಶಂಕರ್ ಅವರನ್ನು ಅಧ್ಯಕ್ಷರನ್ನಾಗಿ ಸೆ. 6ರಂದು ನೇಮಿಸಿದ್ದರು. ಇದಲ್ಲದೆ ಸರಕಾರಿ ಆಸ್ಪತ್ರೆಗೆ ಡಾ| ಜಿ. ಶಂಕರ್ ಅವರು 6 ಕೋ.ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಿಕೊಟ್ಟಿದ್ದು, ಅವರು ಕೂಡ ವೈದ್ಯಾಧಿಕಾರಿ ವಿರುದ್ಧ ಮೌಖೀಕ ದೂರು ನೀಡಿದ್ದಾರೆ. ತಾ.ಪಂ. ಸಭೆ, ಜಿ.ಪಂ. ಸಭೆಗಳಲ್ಲಿಯೂ ಹಲವು ಬಾರಿ ವೈದ್ಯಾಧಿಕಾರಿ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಆಯುಕ್ತರು ತಿಳಿಸಿದ್ದಾರೆ.