Advertisement

ದುಃಸ್ಥಿತಿಯಲ್ಲಿ ತಾ|ಆಸ್ಪತ್ರೆಯ ಶೀತಲೀಕರಣ ಕೊಠಡಿ

12:28 PM Nov 04, 2020 | Suhan S |

ಕಾರ್ಕಳ, ನ. 3: ಕಾರ್ಕಳ ತಾಲೂಕು ಆಸ್ಪತ್ರೆಗೆ ಸೇರಿದ ಆಸ್ಪತ್ರೆ ಪಕ್ಕದಲ್ಲೇ ಇರುವ ಮೃತದೇಹ  ಶೀತಲೀಕರಣ  ಕೊಠಡಿ ಸೂಕ್ತ ನಿರ್ವಹಣೆಯಿಲ್ಲದೆ ಸೊರಗಿದೆ.

Advertisement

ಶೀತಲೀಕರಣ ಕೇಂದ್ರದ ಬಳಿ ಸುಳಿ ದಾಡಿದರೆ ಒಂದು ಕಾಡಿನೊಳಗೆ ತೆರಳಿದಂತೆ ಭಾಸವಾಗುತ್ತಿದೆ. ನಿರ್ವಹಣೆ ಕೊರತೆಯಿಂದ ಗಿಡಗಂಟಿಗಳು   ಕೋಣೆಯ  ಕಟ್ಟಡ ಕ್ಕಿಂತಲೂ ಹೆಚ್ಚು ಎತ್ತರಕ್ಕೆ ಬೆಳೆದು ನಿಂತಿದ್ದು,  ಹಾವು- ಚೇಳು  ಸೇರಿದಂತೆ ಕೆಲವು ವಿಷ  ಜಂತುಗಳು ಅದರೊಳಗೆ ಸೇರಿಕೊಳ್ಳುತ್ತಿವೆ.  ಆಸ್ಪತ್ರೆ ಸಿಬಂದಿ, ಮೃತರ ಸಂಬಂಧಿಕರು ಕಟ್ಟಡದ ಬಳಿ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಕಟ್ಟಡದ ಸುತ್ತಲೂ ಬೃಹತ್‌ ಪ್ರಮಾಣ ದಲ್ಲಿ  ಗಿಡಗಂಟಿಗಳು ಬೆಳೆದು ನಿಂತಿದ್ದು ಇದರಿಂದ ಶೀತಲೀಕರಣ ಕೊಠಡಿ ಮುಚ್ಚಿ ಹೋಗುವ ಭೀತಿಯಲ್ಲಿದೆ. ಘಟಕದ  ಕಿಟಿಕಿ-ಬಾಗಿಲುಗಳು  ಶಿಥಿಲಗೊಂಡಿದ್ದು, ಗಿಡಗಂಟಿಗಳ ಕೊಂಬೆಗಳು, ಬಳ್ಳಿಗಳು  ಕೊಠಡಿಯ ಸಂಧಿಗಳ  ಮೂಲಕ ಕಟ್ಟಡದ ಒಳಗೆ  ತೂರಿಕೊಂಡಿವೆ. ಪಕ್ಕದಲ್ಲೇ  ಬೃಹತ್‌ ಗಾತ್ರದ  ಮರವೂ ಅಪಾಯಕಾರಿ ಸ್ಥಿತಿಯಲ್ಲಿದೆ.

ರಸ್ತೆ ಅಪಘಾತ, ಬೆಂಕಿ ಅವಘಡ, ವಿಷಪ್ರಾಶನ, ಅಸಹಜ ಸಾವು    ಮತ್ತಿತರ   ಕಾರಣಗಳಿಂದ  ಮೃತಪಟ್ಟಂತಹ  ಸಂದರ್ಭ ಮೃತದೇಹಗಳನ್ನು  ಶೀತಲೀಕರಣ ಕೇಂದ್ರದಲ್ಲಿ ಇರಿಸಲಾಗುತ್ತಿದೆ. ಇದೇ ವೇಳೆ  ಅದಕ್ಕೆ ಸಂಬಂಧಿಸಿದ ಸಿಬಂದಿ ಹಾಗೂ ಶವದ ಸಂಬಂಧಿಕರು ಮೃತದೇಹ ಇರಿಸಲಾದ ಶೀತಲೀಕರಣ ಕೇಂದ್ರದೊಳಗೆ ಪ್ರವೇಶಿಸಿದ ವೇಳೆ ಅದರೊಳಗಿನ ಅವ್ಯವಸ್ಥೆಗಳು ಕಣ್ಣಿಗೆ ಗೋಚರಿಸುತ್ತವೆ. ಇದರಿಂದ ಸಿಬಂದಿ ಮತ್ತು ಸಾರ್ವಜನಿಕರು ಕೇಂದ್ರದ ಒಳಗೆ ಹೆಜ್ಜೆ ಇರಿಸಲು ಭಯ ಪಡುತ್ತಿದ್ದಾರೆ.

ಹೆಬ್ಟಾವು, ಕನ್ನಡಿ ಹಾವು ಪ್ರತ್ಯಕ್ಷ! : ಮಳೆಗೆ  ಕಟ್ಟಡದ ಸುತ್ತಲೂ  ಮರಗಿಡ- ಬಳ್ಳಿಗಳು ಹುಲುಸಾಗಿ ಬೆಳೆದುಕೊಂಡಿವೆ. ಕಟ್ಟಡದ ಸುತ್ತಲೂ ಹಾವು-ಚೇಳುಗಳು ಆಗಾಗ್ಗೆ  ಕಾಣಿಸಿಕೊಳ್ಳುತ್ತಿವೆ. ಅವುಗಳು ಶೀತಲೀಕರಣ ಘಟಕದ ಒಳಗೂ ಬಂದು ಆಶ್ರಯ ಪಡೆದುಕೊಳ್ಳುತ್ತವೆ. ಇತ್ತೀಚೆಗೆ  ಕೇಂದ್ರದೊಳಗೆ  ಶವ ವೀಕ್ಷಿಸಲು ತೆರೆಳಿದ್ದ ಸಾರ್ವಜನಿಕರಿಗೆ ಬೃಹತ್‌ ಗಾತ್ರದ ಹೆಬ್ಟಾವು,  ಕನ್ನಡಿ ಹಾವುಗಳು ಕಾಣಿಸಿಕೊಂಡಿದ್ದವು.

Advertisement

ಸ್ವಚ್ಛ ಕಾರ್ಕಳಕ್ಕೆ ಸವಾಲು :  ತಾಲೂಕನ್ನು  ಸ್ವಚ್ಛ ಕಾರ್ಕಳವನ್ನಾಗಿಸಲು ಪಣ ತೊಡಲಾಗಿದೆ.  ಅದಕ್ಕೆಂದೇ ಸ್ವಚ್ಛತ  ಅಭಿಯಾನ  ನಿರಂತರವಾಗಿ ನಡೆಯುತ್ತಿವೆ. ಸರಕಾರಿ ಇಲಾಖೆಗಳು, ವಿವಿಧ   ಸಂಘ-ಸಂಸ್ಥೆಗಳು, ನಾಗರಿಕರು, ಸಾರ್ವಜನಿಕರು  ಸ್ವತ್ಛತೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಸರಣಿ ರೂಪದಲ್ಲಿ ನಡೆಸುತ್ತಿವೆ. ಇದರ ನಡುವೆ   ಆಸ್ಪತ್ರೆಯ ಶವ ಶೀತಲೀಕರಣ ಪರಿಸರವನ್ನು ಸ್ವಚ್ಛಗೊಳಿಸದೆ  ಕಟ್ಟಡ ಪಾಳು ಬೀಳುವಂತೆ  ಬಿಟ್ಟಿರುವುದು  ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ತೆರವಿಗೆ ಕ್ರಮ :  ಮೃತದೇಹ ಶೀತಲೀಕರಣ ಕೊಠಡಿಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವಂತೆ  ಮತ್ತು ಅಲ್ಲಿ ಬೆಳೆದಿರುವ ಗಿಡಗಂಟಿಗಳ ತೆರವಿಗೆ ಅಲ್ಲಿನ ಆಡಳಿತ ವೈದ್ಯಾಧಿಕಾರಿಗಳಿಗೆ ಸೂಚಿಸುವೆ. ಡಾ| ಕೃಷ್ಣಾನಂದ ಶೆಟ್ಟಿ , ತಾಲೂಕು ವೈದ್ಯಾಧಿಕಾರಿ, ಕಾರ್ಕಳ

ಹಾವು ಕಂಡುಬಂದಿತು : ಕೆಲವು ದಿನಗಳ ಹಿಂದೆ ಸಂಬಂಧಿಕರೊಬ್ಬರು ಮೃತಪಟ್ಟಾಗ ಶವವನ್ನು  ಶೀತಲೀಕರಣ ಕೇಂದ್ರದಲ್ಲಿ ಇರಿಸಲಾಗಿತ್ತು. ಇದೇ ವೇಳೆ ನಾನವತ್ತು ಶವ ವೀಕ್ಷಿಸಲು  ಕೇಂದ್ರದ ಒಳಗೆ  ಹೋಗಿದ್ದೆ . ಅದರೊಳಗೆ ಹಾವಿರುವುದು ಗಮನಕ್ಕೆ  ಬಂದಿತ್ತು. ಸದಾನಂದ  ಬಜಗೋಳಿ

 

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next