ಹುಣಸೂರು: ಹುಣಸೂರು ನಗರದ ಜನ ನಿಬಿಡ ಪ್ರದೇಶವಾದ ಬಸ್ ನಿಲ್ದಾಣದ ಬಳಿಯ ಕಿರಿಜಾಜಿ ರಸ್ತೆ ಸರ್ವೆ ನಂ.10 ರಲ್ಲಿ ನಾಲ್ಕು ಗುಂಟೆ ಬಿ ಖರಾಬು ಜಾಗವನ್ನು ಪ್ರಭಾವಿಗಳು ಕಬಳಿಸಲು ಹುನ್ನಾರ ನಡೆಸಿದ್ದು, ಸಂರಕ್ಷಿಸಿ ಬಾಬು ಜಗಜೀವನರಾಂ ಪಾರ್ಕ್ ಎಂದು ಘೋಷಿಸಬೇಕೆಂದು ನಗರಸಭಾ ಸದಸ್ಯ ವಿವೇಕಾನಂದ, ಪ್ರಜಾಕೀಯ ಪಾರ್ಟಿ ತಾಲೂಕು ಅಧ್ಯಕ್ಷ ಚೆಲುವರಾಜು ಒತ್ತಾಯಿಸಿದರು.
ಜಂಟೀ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಗರಸಭೆ ಸದಸ್ಯ ವಿವೇಕಾನಂದ 2012ರ ನಗರ ಯೋಜನಾ ಪ್ರಾಧಿಕಾರದ ನಕ್ಷೆಯಲ್ಲಿ ಸರಕಾರಿ ಜಾಗವೆಂದು ನಮೂದಾಗಿದೆ. ಹಿಂದೆಯೂ ಸಹ ವಕೀಲ ದಿ.ರಮೇಶ್‌ರವರು ನ್ಯಾಯಾಲಯದಲ್ಲಿ ಇದೇ ಖರಾಬು ಜಾಗವನ್ನು ಕಬಳಿಸಲು ಹುನ್ನಾರ ನಡೆಸಿದ್ದಾರೆಂದು ದಾವೆ ಹೂಡಿದ್ದರು. 6 ವರ್ಷಗಳ ಕಾಲ ವಿಚಾರಣೆ ನಡೆದು ನ್ಯಾಯಾಲಯಕ್ಕೆ ಸೂಕ್ತ ದಾಖಲಾತಿ ಸಲ್ಲಿಸದಿದ್ದರಿಂದ ಈ ನಿವೇಶನ ಸರಕಾರಿ ಆಸ್ತಿ ಎಂದು ಘೋಷಿಸಿದ್ದಲ್ಲದೆ ಪರ್ಮನೆಂಟ್ ಇಂಜಕ್ಷನ್ ಆರ್ಡರ್ ಹೊರಡಿಸಿತ್ತು. ಇದಾದ ನಂತರ ಮತ್ತೆ ಪುರಸಭೆಯಲ್ಲಿ ಹಿಂಬರಹ ಪಡೆದ ನಗರದ ನಿವಾಸಿಯೊಬ್ಬರು ಉಚ್ಚನ್ಯಾಯಾಲಯ ಮೆಟ್ಟಿಲೇರಿದ್ದರು. ಅಲ್ಲಿಯೂ ಸಹ ವಿಚಾರಣೆ ನಡೆದು ದೂರುದಾರರ ನಿವೇಶನವನ್ನು ಹುಡುಕಿಕೊಡುವಂತೆ ಆದೇಶಿಸಿದೆ. ಆದರೆ ಅರ್ಜಿದಾರರು ಆಡಳಿತ ಯಂತ್ರವನ್ನೇ ದುರುಪಯೋಗಪಡಿಸಿಕೊಂಡು ನಾಲ್ಕು ಗುಂಟೆ ನಿವೇಶನಕ್ಕೆ ರಾತ್ರೋರಾತ್ರಿ ತಂತಿ ಬೇಲಿ ನಿರ್ಮಿಸಿದ್ದು, ಈ ಜಾಗದಲ್ಲಿ ಆಟೋ ನಿಲ್ದಾಣ, ಪಾನಿಪುರಿ ಮಾರುತ್ತಿದ್ದ ಸುಮಾರು 20 ಕುಟುಂಬಗಳು ಬೀದಿಪಾಲಾಗಿವೆ.
ತಕ್ಷಣವೇ ಹೆದ್ದಾರಿ ಬದಿಯಲ್ಲಿ ತಂತಿಬೇಲಿ ತೆರವುಗೊಳಿಸಿ, ಜಗಜೀವನರಾಂ ಪಾರ್ಕ್ ಎಂದು ನಾಮಕರಣ ಮಾಡಬೇಕೆಂದು ಆಗ್ರಹಿಸಿ, ಇನ್ನೊಂದು ವಾರದಲ್ಲಿ ತಂತಿಬೇಲಿ ತೆರವಾಗದಿದ್ದಲ್ಲಿ ಒಂದೆಡೆ ಕಾನೂನಾತ್ಮಕ ಹೋರಾಟದ ಜೊತೆಗೆ ಸಾರ್ವಜನಿಕರೊಡಗೂಡಿ ತಾವೇ ಮುಂದೆನಿಂತು ತಂತಿಬೇಲಿ ತೆರವುಗೊಳಿಸುವುದಾಗಿ ಎಚ್ಚರಿಸಿದರು.
ಪ್ರಜಾಕೀಯ ಪಾರ್ಟಿ ತಾಲೂಕು ಅಧ್ಯಕ್ಷ ಚೆಲುವರಾಜು ಮಾತನಾಡಿ ನಗರದ ಜನನಿಭಿಡ ರಸ್ತೆಗಳಾದ ಲಕ್ಷ್ಮೀ ವಿಲಾಸ್‌ವೃತ್ತ, ದರ್ಗಾರಸ್ತೆ, ಮಂಜುನಾಥ ಹಾಗೂ ನ್ಯೂಮಾರುತಿ ಬಡಾವಣೆಗಳಲ್ಲಿ ರಸ್ತೆಗಳು, ಸರಕಾರಿ ನಿವೇಶನಗಳನ್ನೇ ಒತ್ತುವರಿ ಮಾಡಿಕೊಂಡು ಕಾಪ್ಲೆಕ್ಸ್ ನಿರ್ಮಿಸಿದ್ದು, ನಗರಸಭೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ತಕ್ಷಣವೇ ಸರ್ವೆ ಕೈಗೊಂಡು ಒತ್ತುವರಿ ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಮುಖಂಡ ಸುನಿಲ್, ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್ ಇದ್ದರು.