ರೋಣ: ಗದಗ ಜಿಲ್ಲೆಯಲ್ಲಿಯೇ ಭೌಗೋಳಿಕ ಹಾಗೂ ಜನಸಂಖ್ಯೆಯಲ್ಲಿ ಅತಿ ದೊಡ್ಡ ತಾಲೂಕಾಗಿರುವ ರೋಣಕ್ಕೆ ಈಗ ನೀರಿನದ್ದೆ ಚಿಂತೆಯಾಗಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ತಲೆದೋರಿದೆ. ಆದರೆ ಇದನ್ನು ನಿವಾರಿಸುವಲ್ಲಿ ತಾಲೂಕು ಆಡಳಿತ ತುಸು ಮೀನಾಮೇಷ ಎಣಿಸುತ್ತಿದೆ.
500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಪೈಪ್‌ಲೈನ್ ದುರಸ್ತಿ ನೆಪಪಿಟ್ಟುಕೊಂಡು ಕಳೆದ ಮೂರು ದಿನಗಳಿಂದ ಕೋತಬಾಳ, ಮಾಡಲಗೇರಿ, ಹಿರೇಹಾಳ, ನೈನಾಪುರ, ಮುಗಳಿ, ತಳ್ಳಿಹಾಳ, ಬಳಗೋಡ, ಸರ್ಜಾಪುರ, ಶಾಂತಗೇರಿ, ಬಮ್ಮಸಾಗರ ಮುಶಿಗೇರಿ, ನೆಲ್ಲೂರ, ಪ್ಯಾಟಿ, ಲಕ್ಕಲಕಟ್ಟಿ, ಗುಳಗುಳಿ, ಚಿಕ್ಕಳಗುಂಡಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ಪೂರೈಸದೆ ಸಮಸ್ಯೆ ಉಲ್ಬಣವಾಗುವಂತೆ ಮಾಡಿದೆ.
ತಾಲೂಕಿನ 35 ಪಂಚಾಯತಿ ವ್ಯಾಪ್ತಿಯಲ್ಲಿ 98 ಹಳ್ಳಿಗಳಿವೆ. ಅದರಲ್ಲಿ ಸ್ವಲ್ಪ ಗ್ರಾಮಗಳು ಜನರು ಕೆರೆ ನೀರು ಕುಡಿಯುತ್ತಿದ್ದಾರೆ. ಇನ್ನೂ ಕೆಲವು ಗ್ರಾಮಗಳು ಕೊಳವೆ ಬಾವಿಗಳ ನೀರು ಅವಲಂಬಿಸಿವೆ. ತಾಲೂಕಿನ 64 ಕೆರೆಗಳ ಪೈಕಿ 16 ಕುಡಿಯುವ ನೀರಿಮ ಕೆರೆಗಳಾಗಿವೆ. ಉಳಿದ ಕೆರೆಗಳನ್ನು ದನ ಕರುಗಳಿಗೆ ಬಳಸಲಾಗುತ್ತಿದೆ. ಇದರಲ್ಲಿ ಅರ್ಧ ಕೆರೆಗಳಲ್ಲಿ ಮಾತ್ರ ನೀರು ಇದೆ. ಉಳಿದ ಕೆರೆಗಳಿಗೆ ತಾಲೂಕು ಹಾಗೂ ಜಿಲ್ಲಾಡಳಿತ ಸರ್ಕಾರಕ್ಕೆ ಒತ್ತಡ ತಂದು ಮಲಪ್ರಭಾ ನದಿ ನೀರನ್ನು ಕಾಲುವೆ ಮೂಲಕ ತಂದು ನೀರಿನ ಸಮಸ್ಯೆಗೆ ಬರದಂತೆ ಮುಜಾಗೃತ ಕ್ರಮ ವಹಿಸಬೇಕಿದೆ.
ವಾರಕ್ಕೊಮ್ಮೆ ನೀರು: ರೋಣ ಪಟ್ಟಣಕ್ಕೆ ಸದ್ಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಬಳಿ ಹಾದು ಹೋಗುವ ಮಲಪ್ರಭಾ ನದಿಗೆ ಅಡ್ಡವಾಗಿ ಕಟ್ಟಿರುವ ಬ್ಯಾರೇಜ್‌ನಿಂದ ನೀರು ಸರಬರಾಜು ಮಾಡಲಾಗುತ್ತದೆ. ಇದರಿಂದ ಸದ್ಯ ಪಟ್ಟಣಕ್ಕೆ ವಾರಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಒದೊಮ್ಮೆ ನದಿಗೆ ಬರುತ್ತಿರುವ ನೀರನ್ನು ಡ್ಯಾಂನಿಂದ ಬಂದ್ ಮಾಡಿದಲ್ಲಿ ಬ್ಯಾರೇಜ್‌ನಲ್ಲಿ ರುವ ನೀರು ಕೇವಲ 60 ದಿನಗಳಿಗಾಗುಷ್ಟು ಇದೆ. ನಂತರ ದಿನಗಳಲ್ಲಿ ನೀರಿನ ಸಮಸ್ಯೆ ತೀವ್ರತೆ ಹೆಚ್ಚಾಗುತ್ತದೆ. ಇದಕ್ಕೂ ಮೊದಲೇ ಪುರಸಭೆ ನೀರಿನ ಸಂಗ್ರಹಕ್ಕೆ ಯಾವ ಪರಿಹಾರ ಕಂಡುಕೊಳ್ಳುತ್ತದೆ ಕಾದ ನೋಡಬೇಕಿದೆ. ತಾಲೂಕಿನಲ್ಲಿಯೆ 8 ಸಾವಿರಕ್ಕೂ ಹೆಚ್ಚು ಜನರನ್ನು ಹೊಂದಿರುವ ಗ್ರಾಮ ಹೊಳೆಆಲೂರು. ಇಲ್ಲಿ ಎಂಟು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ನೀರಿನ ಸಮಸ್ಯೆ ನೀಗಿಸಲು ತಾಲೂಕು ಆಡಳಿತ ಎಲ್ಲ ರೀತಿಯಾದ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರೂ ಹೊಳೆಆಲೂರಿನಲ್ಲಿ ಮಾತ್ರ ನೀರಿನ ಸಮಸ್ಯೆಗೆ ಪರಿಹಾರ ದೊರೆತಿಲ್ಲ.
ಸದ್ಯ ಮೇವಿನ ಕೊರತೆ ಇಲ್ಲ: ತಾಲೂಕಿನಾದ್ಯಂತ ಬಹುತೇಕ ಗ್ರಾಮದಲ್ಲಿನ ರೈತರಲ್ಲಿ ಮೇವು ಸಂಗ್ರಹವಿದ್ದು, ಸದ್ಯ ಜಾನುವಾರಗಳಿಗೆ ಮೇವಿನ ಕೊರತೆ ಕಂಡು ಬಂದಿಲ್ಲ. ಮುಂದಿನ ದಿನಮಾನಗಳಲ್ಲಿ ಮೇವಿನ ಕೊರತೆ ಕಂಡು ಬಂದಲ್ಲಿ ಸಮರ್ಪಕ ಕ್ರಮ ಕೈಗೊಳ್ಳಲು ತಾಲೂಕು ಆಡಳಿತ ಸಜ್ಜಾಗಿದೆ. ಈಗಾಗಲೇ ಕೃಷಿ ಇಲಾಖೆ ಹಾಗೂ ಪಶುಸಂಗೋಪಣೆ ಇಲಾಖೆ ಮೂಲಕ ರೈತರಿಗೆ ಮೇವಿನ ಕಿಟ್ ಒದಗಿಸುವ ಎಲ್ಲ ರೀತಿಯಾದ ತಯಾರಿ ನಡೆಸಲಾಗಿದ್ದು, ಮೇವಿನ ಸಮಸ್ಯೆ ಬಾರದಂತೆ ಎಲ್ಲ ರೀತಿಯಾದ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲೂಕು ಆಡಳಿತ ತಿಳಿಸಿದೆ.
ಬೇಸಿಗೆ ಮುನ್ನವೇ ಬಿಸಿಲಿನ ಪ್ರಕರತೆ ಹೆಚ್ಚಾಗಿದೆ. ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಈಗಾಗಲೇ ನೋಡಲ್ ಅಧಿಕಾರಿಗಳ ಮೂಲಕ ತಾಲೂಕಿನ ಎಲ್ಲ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಪರಿಹಾರಕ್ಕೆ ಮುಂದಾಗುತ್ತವೆ ಎಂದು ರೋಣ ತಹಶೀಲ್ದಾರ ಶರಣಮ್ಮ ಕಾರಿ ತಿಳಿಸಿದರು.
20 ಹಳ್ಳಿಗಳಿಗೆ ನೀರು ಪೂರೈಸುವ ಪೈಪ್ ಲೈನ್ ರೋಣ ಪಟ್ಟಣದ ಬಲಿ ಡ್ಯಾಮೇಜ್ ಆಗಿದೆ. ಸದ್ಯ ಮೂರು ದಿನಗಳಿಂದ ನೀರು ಸರಬರಾಜು ಸ್ಥಗಿತವಾಗಿದೆ. ನೀರು ಮತ್ತೆ ಪ್ರಾರಂಭವಾಗಲಿದೆ ಎಂದು ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರ ಎಸ್. ಮಹದೇವಪ್ಪ ತಿಳಿಸಿದರು.
ಯಚ್ಚರಗೌಡ ಗೋವಿಂದಗೌಡ್ರ