ಮಂಜೇಶ್ವರ: ತಲಪಾಡಿಯಿಂದ ಮೊಗ್ರಾಲ್ ತನಕ ರಾಷ್ಟ್ರೀಯ ಹೆದ್ದಾರಿಯ ಗುಂಡಿಗಳನ್ನು ಮುಚ್ಚುವ ತಾತ್ಕಾಲಿಕ ಕಾಮಗಾರಿ ಬುಧವಾರ ಆರಂಭಗೊಂಡಿತು.
ಕೇರಳ- ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಿಂದ ಆರಂಭಿಸಿ ಕಾಸರಗೋಡಿನ ತನಕ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಹೊಂಡ ಗುಂಡಿ ನಿರ್ಮಾಣವಾಗಿದ್ದು, ಇನ್ನೂ ಕೆಲವೆಡೆ ಗದ್ದೆಯಂತಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಹಿನ್ನೆಲೆಯಲ್ಲಿ ತುರ್ತು ದುರಸ್ತಿ ಕೈಗೆತ್ತಿಕೊಳ್ಳಲಾಗಿದೆ.
ಹಲವೆಡೆ ರಸ್ತೆ ಪೂರ್ಣ ತೋಡಾಗಿ ಮಾರ್ಪಾಡುಗೊಂಡಿದೆ. ಹೊಂಡಗಳೇ ಇರುವುದರಿಂದ ವಾಹನ ಪ್ರಯಾಣಿಕರಿಗೆ ದೋಣಿಯಲ್ಲಿ ಸಂಚರಿಸುವಾಗ ಉಂಟಾಗುವ ಅನುಭವವಾಗುತ್ತಿದೆಯಲ್ಲದೆ ಅಪಾಯಕ್ಕೂ ಆಹ್ವಾನವಾಗಿತ್ತು. ರಸ್ತೆ ಸರಿಯಿಲ್ಲದಿದ್ದರಿಂದಲೇ ಕಾಸರಗೋಡು -ಮಂಗಳೂರು ಸಂಚರಿಸುವ ಕೇರಳ ಸಾರಿಗೆ ಬಸ್‌ಗಳ ಪೈಕಿ ಹತ್ತು ಬಸ್‌ಗಳ ಸೇವೆಗಳನ್ನು ಮೊಟಕುಗೊಳಿಸಲಾಗಿತ್ತು. ಕೆಲವು ಖಾಸಗಿ ಬಸ್ ಮತ್ತು ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ಅಟೋ ರಿಕ್ಷಾಗಳು ಸೇವೆಯನ್ನು ನಿಲ್ಲಿಸಿದ್ದವು. ಇದರಿಂದ ಜನಸಾಮಾನ್ಯರಿಗೆ ತೀವ್ರ ಸಂಕಷ್ಟ ತಲೆದೋರಿತ್ತು.
ಸ್ಥಳೀಯ ಜನಪ್ರತಿನಿಧಿಗಳು ಆಗಮಿಸಿ ತುರ್ತು ಕಾಮಗಾರಿಗೆ ಅಗತ್ಯ ಸಲಹೆ – ಸೂಚನೆಗಳನ್ನು ನೀಡಿದ್ದಾರೆ.