Advertisement

ತಲ್ಲೂರು –ಉಪ್ಪಿನಕುದ್ರು ರಸ್ತೆ ವಿಸ್ತರಣೆಗೆ ಆಗ್ರಹ

10:35 PM Mar 15, 2021 | Team Udayavani |

ತಲ್ಲೂರು: ಉಪ್ಪಿನ ಕುದ್ರುವಿನಿಂದ ತಲ್ಲೂರಿಗೆ ಸಂಪರ್ಕ ಕಲ್ಪಿಸುವ ಸುಮಾರು ಮೂರೂವರೆ ಕಿ.ಮೀ. ದೂರದ ಮುಖ್ಯ ರಸ್ತೆ ಕಿರಿದಾಗಿದ್ದು, ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈಗ ಕೆಲವು ಮೀ. ದೂರದವರೆಗೆ ನಿರ್ವಹಣೆ ಮಾಡಲು ಮುಂದಾಗಿದ್ದು, ಇದರೊಂದಿಗೆ ವಿಸ್ತ ರಣೆ ಮಾಡಬೇಕು ಎನ್ನುವ ಬೇಡಿಕೆ ಇಲ್ಲಿನ ಗ್ರಾಮಸ್ಥರಿಂದ ಕೇಳಿ ಬಂದಿದೆ.

Advertisement

ತಲ್ಲೂರಿನಿಂದ ಉಪ್ಪಿನಕುದ್ರು, ಬೇಡರಕೊಟ್ಟಿಗೆ ಮತ್ತಿತರ ಹಲವು ಊರುಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ತಲ್ಲೂರಿನಿಂದ ಆರಂಭಗೊಂಡು, ಉಪ್ಪಿನಕುದ್ರುವಿನ ಕೊನೆಯವರೆಗೆ ಈ ರಸ್ತೆ ಸುಮಾರು ಮೂರೂವರೆ ಕಿ.ಮೀ. ಉದ್ದವಿದೆ. ಆರಂಭದಿಂದ ಕೊನೆಯವರೆಗೂ ಈ ರಸ್ತೆ ಕಿರಿದಾಗಿದೆ. ವಾಹನ ಸವಾರರು ಕಷ್ಟಪಟ್ಟು ಸಂಚರಿಸುವಂತಾಗಿದೆ. ಇನ್ನು ಬಸ್‌ ಬಂದರೆ ಅಂತೂ ಬೈಕ್‌ ಹಾಗೂ ಇತರ ವಾಹನ ಸವಾರರ ಪಾಡು ಹೇಳತೀರದಂತಾಗಿದೆ.

ತಲಾ ಅರ್ಧ ಮೀಟರ್‌
ಈಗ ಈ ತಲ್ಲೂರು – ಉಪ್ಪಿನಕುದ್ರು ರಸ್ತೆ ಕಾಮಗಾರಿ ನಿರ್ವಹಣೆಗೆ ಲೋಕೋಪಯೋಗಿ ಇಲಾಖೆ ಮುಂದಾಗಿದೆ. ತಲ್ಲೂರು ಪೇಟೆಯಿಂದ ಆರಂಭಗೊಂಡು ಸುಮಾರು 600ರಿಂದ 700 ಮೀ. ದೂರದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಅರ್ಧರ್ಧ ಮೀಟರ್‌ ವಿಸ್ತರಣೆ ಮಾಡಲಾಗುತ್ತಿದೆ. ಆದರೆ ಇದು ಅಗಲೀಕರಣ ಕಾಮಗಾರಿಯಲ್ಲ. ನಿರ್ವ ಹಣೆಯಷ್ಟೇ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆಯ ಎರಡೂ ಬದಿಗಳಲ್ಲಿ ಅರ್ಧ ಮೀ. ವರೆಗೆ ಮಣ್ಣು ಅಗೆದು, ವೆಟ್‌ಮಿಕ್ಸ್‌ ಹಾಕಿ, ಡಾಮರು ಹಾಕಲಾಗುತ್ತಿದೆ.

ವಿಸ್ತರಣೆ ಮಾಡಿ
ಈ ಮಾರ್ಗದಲ್ಲಿ ಏಕಕಾಲದಲ್ಲಿ ಎರಡು ವಾಹನಗಳು ಸಂಚರಿಸುವುದು ಕಷ್ಟ. ಎದುರಿನಿಂದ ಯಾವುದಾದರೂ ಒಂದು ವಾಹನ ಬಂದರೆ, ಒಂದೋ ಇವರು ಕೆಳಗಿಯಬೇಕು, ಇಲ್ಲದಿದ್ದರೆ ಎದುರಿನವರು ರಸ್ತೆಯಿಂದ ಕೆಳಗಿಳಿಯಬೇಕು. ಅಲ್ಲಲ್ಲಿ ರಸ್ತೆ ಬದಿಗೆ ಹಾಕಿದ ಮಣ್ಣು ಮಳೆಗಾಲದಲ್ಲಿ ಕೊಚ್ಚಿಕೊಂಡು ಹೋಗಿ ಡಾಮರು ರಸ್ತೆ ಎತ್ತರದಲ್ಲಿದ್ದು, ವಾಹನ ಇಳಿಸುವುದು ಕೂಡ ಅಪಾಯಕಾರಿಯಗಿದೆ. ವಿಸ್ತ ರ ಣೆಯೊಂದಿಗೆ ಇಕ್ಕೆಲಗಳಲ್ಲಿ ಚರಂಡಿ ಮಾಡಿದರೆ ಅನುಕೂಲವಾಗಲಿದೆ ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

ನಿರ್ವಹಣೆ ಮಾತ್ರ
ತಲ್ಲೂರು – ಉಪ್ಪಿನಕುದ್ರು ರಸ್ತೆ ವಿಸ್ತರಣೆ ಗೆ ಬೇಡಿಕೆಯಿದ್ದು, ಆದರೆ ಈಗ ಅದರ ನಿರ್ವಹಣೆ ಮಾತ್ರ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅನುದಾನ ಬಂದಲ್ಲಿ ವಿಸ್ತರಣೆ ಮಾಡಲಾಗುವುದು. ಕಳೆದ ಮಳೆಗಾಲದಲ್ಲಿ ಕಿರಿದಾದ ರಸ್ತೆಯಿಂದಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಹಾಗಾಗಿ ಎರಡೂ ಕಡೆ 600 -700 ಮೀ.ವರೆಗೆ ಸ್ವಲ್ಪ ಸ್ವಲ್ಪ ವಿಸ್ತ ರಣೆ ಆಗಲಿದ್ದು, ಇದರಿಂದ ಸ್ವಲ್ಪ ಮಟ್ಟಿಗೆ ಪ್ರಯೋಜನವಾಗಲಿದೆ.
-ರಾಘವೇಂದ್ರ ನಾಯಕ್‌, ಸಹಾಯಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next