Advertisement

ತಲ್ಲೂರು: ಮೀನು ಮಾರುಕಟ್ಟೆ ಅಭಿವೃದ್ಧಿಗೆ ಬೇಡಿಕೆ

10:51 AM Apr 28, 2022 | Team Udayavani |

ತಲ್ಲೂರು: ಹೆದ್ದಾರಿಗೆ ಹೊಂದಿ ಕೊಂಡಂತೆ ಇರುವ ತಲ್ಲೂರು ಪೇಟೆ ವೇಗವಾಗಿ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ವ್ಯಾಪಾರ- ವಹಿವಾಟುಗಳು ಸಹ ಹೆಚ್ಚುತ್ತಿವೆ. ಆದರೆ ನಿತ್ಯ ನೂರಾರು ಮಂದಿ ವ್ಯಾಪಾರಕ್ಕಾಗಿ ಬರುವ ಮೀನು ಮಾರುಕಟ್ಟೆ ಮಾತ್ರ ದುಃಸ್ಥಿತಿಯಲ್ಲಿದೆ. ಇದರಿಂದ ಇಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರು ಆತಂಕದಲ್ಲಿಯೇ ವ್ಯಾಪಾರ ನಡೆಸುವಂತಾಗಿದೆ.

Advertisement

ಕುಂದಾಪುರದಿಂದ 5 ಕಿ.ಮೀ. ದೂರ ದಲ್ಲಿರುವ ತಲ್ಲೂರಲ್ಲಿ ಕಳೆದ ಹಲವು ವರ್ಷಗಳಿಂದ ಮೀನು ಮಾರುಕಟ್ಟೆ ಕಾರ್ಯಾಚರಿಸುತ್ತಿದೆ. ಇಲ್ಲಿ ಸುಮಾರು 10 – 15 ಮಂದಿ ಮೀನು ಮಾರಾಟ ಮಹಿಳೆಯರಿದ್ದಾರೆ.

ತಲ್ಲೂರು, ಉಪ್ಪಿನಕುದ್ರು, ಸಬ್ಲಾಡಿ, ರಾಜಾಡಿ, ಪಾರ್ಥಿಕಟ್ಟೆ ಮತ್ತಿತರ ಸುತ್ತಮುತ್ತಲಿನ ಊರಿನ ಜನರು ಇಲ್ಲಿಗೆ ಮೀನು ಖರೀದಿಗಾಗಿ ಬರುತ್ತಾರೆ.

ಬೀಳುವ ಆತಂಕ

ತಲ್ಲೂರಿನಲ್ಲಿ ಈಗ ತಗಡು ಶೀಟ್‌ನ ಮಾಡಿನಲ್ಲಿ ನಿರ್ಮಿಸಲಾದ ತಾತ್ಕಾಲಿಕ ಶೆಡ್‌ ರೀತಿಯ ಮೀನು ಮಾರುಕಟ್ಟೆಯಿದೆ. ಕಳೆದ ಹಲವು ವರ್ಷಗಳಿಂದ ದುರಸ್ತಿಯಾಗದೇ ಇದ್ದು, 5-6 ವರ್ಷಗಳ ಹಿಂದೊಮ್ಮೆ ತಲ್ಲೂರು ಗ್ರಾ.ಪಂ.ನಿಂದ ಮಾರುಕಟ್ಟೆಯ ಮಾಡನ್ನು ದುರಸ್ತಿ ಮಾಡಲಾಗಿತ್ತು. ಈಗ ಮಾಡು, ಕಟ್ಟಡ ಭಾರೀ ಗಾಳಿ, ಮಳೆ ಬಂದರೆ ಬೀಳುವ ಸ್ಥಿತಿಯಲ್ಲಿದೆ. ಸುತ್ತಮುತ್ತ ಸ್ವಚ್ಛತೆಯಿಲ್ಲದೆ ಕಸದ ರಾಶಿಯಿದೆ. ನೀರಿನ ವ್ಯವಸ್ಥೆಯೂ ಸರಿಯಿಲ್ಲ.

Advertisement

ಅಭಿವೃದ್ಧಿಗೆ ಬೇಡಿಕೆ

ಈಗಿರುವ ಸ್ಥಳದಲ್ಲಿಯೇ ಪಂಚಾಯತ್‌ ಅಥವಾ ಇನ್ನು ಯಾವುದಾದರೂ ಅನುದಾನದಲ್ಲಿ ಉತ್ತಮವಾದ, ಸುಸಜ್ಜಿತ ವಾದ ಮೀನು ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಿ ಎನ್ನುವುದು ಇಲ್ಲಿರುವ ಮೀನು ಮಾರಾಟ ಮಹಿಳೆಯರು ಹಾಗೂ ನಾಗರಿಕರ ಬೇಡಿಕೆಯಾಗಿದೆ.

ಈ ಸಾಲಿನಲ್ಲಿ ಅನುದಾನ

ತಲ್ಲೂರು ಮೀನು ಮಾರುಕಟ್ಟೆ ಅಭಿವೃದ್ಧಿ ಬಗ್ಗೆ ಗ್ರಾ.ಪಂ. ಗಮನದಲ್ಲಿದೆ. ಕಳೆದ ಸಾಲಿನಲ್ಲಿ ಅನುದಾನ ಕೊರತೆಯಿಂದ ಸಾಧ್ಯವಾಗಿಲ್ಲ. ಆದರೆ ಈ 2021-22ನೇ ಸಾಲಿನಲ್ಲಿ ಅನುದಾನ ಮೀಸಲಿಡಲಾಗುವುದು. -ನಾಗರತ್ನಾ, ತಲ್ಲೂರು ಗ್ರಾ.ಪಂ. ಪಿಡಿಒ

ಗ್ರಾಮಸಭೆಯಲ್ಲೂ ಪ್ರಸ್ತಾವ

ನಮ್ಮ ತಲ್ಲೂರಿನಲ್ಲಿರುವ ಪೇಟೆಯಲ್ಲಿರುವ ಮೀನು ಮಾರುಕಟ್ಟೆ ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗಬೇಕಾಗಿದೆ. ಈ ಬಗ್ಗೆ ನಾನು ಅನೇಕ ಸಲ ಗ್ರಾಮಸಭೆ ಯಲ್ಲಿಯೂ ಪ್ರಸ್ತಾವ ಮಾಡಿದ್ದೇನೆ. ಆದರೆ ಅನುದಾನದ ಕೊರತೆಯಿಂದ ಈವರೆಗೆ ಅಭಿವೃದ್ಧಿ ಕಾರ್ಯ ಆಗಿಲ್ಲ. ಈ ವರ್ಷವಾದರೂ ಹೊಸ ಮೀನು ಮಾರುಕಟ್ಟೆ ಆಗಲಿ.  -ಜುಡಿತ್‌ ಮೆಂಡೊನ್ಸಾ, ತಲ್ಲೂರು ಗ್ರಾ.ಪಂ. ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next