Advertisement

ವಿಶ್ವದ ಅತಿ ಎತ್ತರದ ಪೊಲೀಸಪ್ಪನ ಜೋಶ್‌

09:21 AM Apr 10, 2019 | Team Udayavani |

ಜಗದೀಪ್‌ ಸಿಂಗ್‌… 7.6 ಅಡಿ ಎತ್ತರ ಇರುವ ಈ ಪೊಲೀಸಪ್ಪ, ಚಂಡೀಗಢದ ಎಷ್ಟೇ ಕ್ಲಿಷ್ಟ ಟ್ರಾಫಿಕ್‌ ತಲೆಬಿಸಿಯನ್ನೂ ಕೆಲವೇ ನಿಮಿಷಗಳಲ್ಲಿ ತಗ್ಗಿಸಬಲ್ಲ ಚಾಣಾಕ್ಷ. ಇತ್ತೀಚೆಗೆ ಈತನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಪೊಲೀಸಪ್ಪ ತನ್ನ “ಎತ್ತರ’ದ ಬದುಕನ್ನು ಸ್ವಾರಸ್ಯಮಯ ಸ್ವಗತದಲ್ಲಿ ಹೇಳಿಕೊಂಡಿದ್ದಾರೆ…

Advertisement

ಒಮ್ಮೆ ನನ್ನ ಮುಖವನ್ನು ನೋಡಿ… ಹಾಂ, ರಿಲ್ಯಾಕ್ಸ್‌… ಜಾಸ್ತಿ ಕತ್ತೆತ್ತಿ ನೋಡ್ಬಿಟ್ರೆ, ಕತ್ತು ಉಳುಕೀತು. ಕೊನೆಗೆ, “ಇವ್ನೊಬ್ಬ ಝಂಡುಬಾಮ್‌ ಪಾರ್ಟಿ’ ಅಂತ ನೀವು ನನ್ನನ್ನೇ ಜರಿದರೂ ಅಚ್ಚರಿಯಿಲ್ಲ. ಹಾಗಂದರೂ ನಾನು ಬೇಜಾರು ಪಟ್ಟುಕೊಳ್ಳೋದಿಲ್ಲ. ದಿನಕ್ಕೆ ಏನಿಲ್ಲವೆಂದರೂ, ನೂರಾರು ಸ್ಮಾರ್ಟ್‌ಫೋನ್‌ಗಳೆದುರು ಸೆಲ್ಫಿಗೆ ನಿಲ್ಲುತ್ತೇನೆ. ಅವರು ಹೇಗೋ ಕಷ್ಟಪಟ್ಟು ಸೆಲ್ಫಿ ಕ್ಲಿಕ್ಕಿಸಿದ ಬಳಿಕ ನಾನು ಒಂದು ಮಾತನ್ನು ಹೇಳ್ತೀನಿ, “ಮುಂದಿನ ಸಲ ಬರೋವಾಗ ಸೆಲ್ಫಿ ಸ್ಟಿಕ್‌ ಬೇಡ… ಒಂದು ಏಣಿ ತಗೊಂಡ್‌ ಬನ್ನಿ… ಚಂದ್ರನನ್ನು ಪಕ್ಕದಲ್ಲಿ ನಿಲ್ಲಿಸ್ಕೊಂಡು, ಒಂದೊಳ್ಳೆ ಸೆಲ್ಫಿಯನ್ನೇ ತೆಗೆದುಕೊಡ್ತೀನಿ’ ಅಂತ. ಅವರೆಲ್ಲರೂ ನಕ್ಕು ಸುಮ್ಮನಾಗುತ್ತಾರಷ್ಟೇ.

ಬಹುಶಃ ನಿಮಗೆ ನನ್ನ ಪರಿಚಯ ಇದ್ದಂತಿಲ್ಲ. ಒಮ್ಮೆ ನೀವೇನಾದರೂ, ಚಂಡೀಗಢದ ಬೀದಿಗಳಿಗೆ ಬಂದರೆ, ಅಲ್ಲಿ ನನ್ನನ್ನು ಖಂಡಿತಾ ನೋಡುತ್ತೀರಿ. ನನ್ನ ಹೆಸರು ಜಗದೀಪ್‌ ಸಿಂಗ್‌. 7.6 ಅಡಿ ಎತ್ತರದ ಜೀವಂತ ಕಟೌಟು. ದೇಶದ ಅತಿ ಎತ್ತರದ ಪೊಲೀಸ್‌ ಎನ್ನುವ ಹೆಗ್ಗಳಿಕೆ ನನ್ನದು. ಹುಟ್ಟಿದಾಗ ಯಾರೋ ಹಿರಿಯರು ಹರಿಸಿಬಿಟ್ಟಿದ್ದಾರೆ, “ಬಾನೆತ್ತರ ಬೆಳೆಯಪ್ಪಾ…’ ಎಂದು. ಆ ಆಶೀರ್ವಾದದ ಫ‌ಲವೋ, ಅಡ್ಡಪರಿಣಾಮವೋ- ಹೀಗೆ ರೂಪುಗೊಂಡು ನಿಮ್ಮೆದುರಿದ್ದೇನೆ. “ವ್ಹಾ ಗ್ರೇಟು, ಎಷ್ಟೊಂದ್‌ ಹೈಟ್‌ ಇದ್ದೀರಿ… ಕಂಗ್ರಾಟ್ಸ್‌’ ಅಂತ ನೀವೇನೋ, ಚಪ್ಪಾಳೆ ಹೊಡೆದು, ಫೋಟೋ ಕ್ಲಿಕ್ಕಿಸಿಕೊಂಡು ಹೋಗ­ಬಹುದು. ಆದರೆ, ನನ್ನ ಗೋಳು ನನಗೆ.


ಕಾಲಿಗೆ ಒಂದೊಳ್ಳೆ ಚಪ್ಪಲಿ ತಗೊಳ್ಬೇಕು ಅಂತ ಫ‌ುಟ್‌ವೇರ್‌ ಶಾಪ್‌ಗೆ ಹೋದರೆ, ಆತ ನಿಮ್ಮೆದುರು ಹತ್ತಾರು ಆಯ್ಕೆ ಇಡ್ತಾನೆ. ನಿಜಕ್ಕೂ ಅಂಥ ಸೌಭಾಗ್ಯ ನನಗಿಲ್ಲ. ನನ್ನ ಪಾದಗಳಿಗೆ ಹೊಂದಿಕೊಳ್ಳುವ ಚಪ್ಪಲಿಗಳು ಭಾರತದಲ್ಲಿ ಎಲ್ಲೂ ಉತ್ಪಾದನೆ ಆಗುವುದಿಲ್ಲ. ಅದಕ್ಕಾಗಿ, ನನಗೆ ಹೊಂದುವಂಥ ಚಪ್ಪಲಿಗಳನ್ನು ಬೇರೊಂದು ದೇಶದಿಂದ ತರಿಸಿಕೊಳ್ಳುತ್ತೇನೆ. ನನ್ನ ಬಟ್ಟೆಗಳದ್ದೂ ಅದೇ ಕತೆಯೇ. ನನ್ನ ಪರ್ಸನಲ್‌ ಟೈಲರ್‌ ಬಿಟ್ಟರೆ, ನನ್ನ ಯೂನಿಫಾರಂ ಹೊಲಿಯಲು ಬೇರಾರೂ ಧೈರ್ಯ ಕೊಡ ಮಾಡೋದಿಲ್ಲ. ಆದರೆ, ಒಂದು ವಿಚಾರ ಗೊತ್ತಾ..? ನಾನು ಏಳು ಮುಕ್ಕಾಲು ಅಡಿ ಉದ್ದ ಇದ್ದರೂ, 190 ಕೆಜಿ ತೂಕ ಇದ್ದರೂ, ಕನ್ನಡಿ ಮುಂದೆ ನಿಂತಾಗ, ನನ್ನ ದೇಹವನ್ನು ಸಮಸ್ಯೆಯ ಪರ್ವತದಂತೆ, ನಾನ್ಯಾವತ್ತೂ ನೋಡಿದವನಲ್ಲ. ನಿಮ್ಮಂತೆ, ರೈಲನ್ನೋ, ಬಸ್ಸನ್ನೋ ಹತ್ತಿ, ಹೊರಡಲು ನನ್ನಿಂದ ಆಗೋದಿಲ್ಲ. ನನ್ನದೇ ಒಂದು ಸ್ವಂತ ಕಾರ್‌ ಇದೆ. ಅದಕ್ಕೆ ಟಾಪ್‌ ಅನ್ನೇ ಇಟ್ಟಿಲ್ಲ. ಈ ಚಂಡೀಗಢದಲ್ಲಿ ಎಂಥದೇ ಟ್ರಾಫಿಕ್‌ ಬಿಕ್ಕಟ್ಟು ಸೃಷ್ಟಿಯಾಗಲಿ, ಅದನ್ನು ನಿವಾರಿಸುವ ಎಲ್ಲ ಸಾಮರ್ಥ್ಯವೂ ನನಗಿದೆ.


ಇಷ್ಟ್ ಎತ್ತರ ಇದ್ದಾನೆ… ಪಾಪ, ಮದುವೆ ಆಗಿದ್ದಾನೋ ಇಲ್ಲವೋ ಎನ್ನುವ ಡೌಟಾ? ಪ್ರಾಮಿಸ್‌… ನನಗೆ ಮದುವೆ ಆಗಿದೆ. ಗುರ್‌ಶಿಂದರ್‌ ಕೌರ್‌ ಎಂಬ ಐದಡಿ ಎತ್ತರದ ಚೆಲುವೆ ನನ್ನ ಕೈ ಹಿಡಿದವಳು. ಎಷ್ಟೋ ಸಲ, ಅವಳು ನನ್ನ ಕೈಕೈ ಹಿಡಿದು ನಡೆಯುವಾಗ, ಮಕ್ಕಳೆಲ್ಲ ಮುಸಿ ಮುಸಿ ನಗುತ್ತಾರೆ. ಮಕ್ಕಳು ತಮಾಷೆ ಮಾಡೋದನ್ನು ನೋಡಿ, ಆರಂಭದಲ್ಲಿ ಚಿಂತೆಗೆಡುತ್ತಿದ್ದ ಆಕೆ, ನಂತರ ಇದಕ್ಕೆ ಸಂಪೂರ್ಣ ಅಡ್ಜಸ್ಟ್‌ ಆಗಿಬಿಟ್ಟಳು. ಈ ಎತ್ತರ ನನಗೆ ದೇವರು ಕೊಟ್ಟ ಗಿಫ‌ುr ಅಂತ ಎಷ್ಟೋ ಸಲ ಆಕೆಗೆ ಹೇಳಿದ್ದೇನೆ. ಯಾರಾದರೂ ಮಕ್ಕಳು, “ಅಂಕಲ್‌… ಒಂದು ಸೆಲ್ಫಿ ತಗೊಳ್ಲ’ ಅಂತ ಕೇಳಿದಾಗ, ಹ್ಞುಂ ಅಂತೀನಿ. ನನ್ನನ್ನು ನೋಡಿ, ಇನ್ನೊಬ್ಬರ ಮುಖ ಅರಳುತ್ತದಲ್ಲಾ, ಅದೇ ನನಗೆ ಜೀವನಶಕ್ತಿ.

Advertisement

ಸಾವನ್ನು ಗೆದ್ದ ಸರದಾರ…
ನಿಮಗೆ ಗೊತ್ತಾ? ನಾನು ತೆಂಗಿನಮರದಂತೆ ಓಡಾಡ್ತಾ, ನಿಮ್ಮ ಮೊಗದಲ್ಲಿ ನಗು ಮೂಡಿಸಬಹುದು. ಆದರೆ, ನಾನು ಹೀಗೆ ಜೀವಂತವಾಗಿ ಓಡಾಡ್ತೀನೋ ಇಲ್ಲವೋ ಎಂಬುದೇ ಒಂದು ಕಾಲದಲ್ಲಿ ಡೌಟ್‌ ಆಗಿತ್ತು. 2004ರಲ್ಲಿ ಗಾಲ್ಫ್ ಚೆಂಡಿನ ಗಾತ್ರದ ಗೆಡ್ಡೆಯೊಂದು ನನ್ನ ಮೆದುಳಿನಲ್ಲಿ ಬೆಳೆದಿತ್ತು. 13 ಲಕ್ಷ ರೂಪಾಯಿ ವೆಚ್ಚದ ಒಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು, ಕೊನೆಗೂ ಪ್ರಾಣಾಪಾಯದಿಂದ ಪಾರಾಗಿಬಿಟ್ಟೆ. ಕೊನೆಗೆ ನಾನು ಮೊದಲಿನಂತಾಗಲು ನೆರವಾಗಿದ್ದೇ ಯೋಗಾಸನ. ಈಗ ನಿತ್ಯವೂ 45 ನಿಮಿಷ ಯೋಗಾಸನ ಮಾಡುತ್ತೇನೆ.

ನಿಮ್ಮಂತೆ, ರೈಲನ್ನೋ, ಬಸ್ಸನ್ನೋ ಹತ್ತಿ, ಹೊರಡಲು ನನ್ನಿಂದ ಆಗೋದಿಲ್ಲ. ನನ್ನದೇ ಒಂದು ಸ್ವಂತ ಕಾರ್‌ ಇದೆ. ಅದಕ್ಕೆ ಟಾಪ್‌ ಅನ್ನೇ ಇಟ್ಟಿಲ್ಲ. ಒಂದು ವಿಚಾರ ಗೊತ್ತಾ..? ನಾನು ಏಳು ಮುಕ್ಕಾಲು ಅಡಿ ಉದ್ದ ಇದ್ದರೂ, 190 ಕೆಜಿ ತೂಕ ಇದ್ದರೂ, ಕನ್ನಡಿ ಮುಂದೆ ನಿಂತಾಗ, ನನ್ನ ದೇಹವನ್ನು ಸಮಸ್ಯೆಯ ಪರ್ವತದಂತೆ, ನಾನ್ಯಾವತ್ತೂ ನೋಡಿದವನಲ್ಲ…

Advertisement

Udayavani is now on Telegram. Click here to join our channel and stay updated with the latest news.

Next