ಶಿವಮೊಗ್ಗ: ಮಂಡ್ಯದಲ್ಲಿ ಅಭಿಷೇಕ್ ಅಂಬರೀಶ್ ರಾಜಕಾರಣಕ್ಕೆ ಬರುತ್ತಾರೆಂಬ ಮಾತು ಕೇಳಿ ಬರುತ್ತಿದ್ದು, ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಅವರು ಬರಲಿ, ಬಂದರೆ ಒಳ್ಳೆಯದು.ಅವರ ತಂದೆ ಮಂಡ್ಯದವರಾಗಿದ್ದರು, ಬಿಜೆಪಿಗೆ ಬಂದರೆ ನಾವು ವೆಲ್ ಕಮ್ ಮಾಡುತ್ತೆವೆ ಎಂದು ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಬುಧವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸುಮಲತಾ ಅಂಬರೀಶ್ ಅವರೊಂದಿಗೂ ಮಾತುಕತೆ ನಡೆದಿದೆ. ಒಂದೆರೆಡು ದಿನಗಳಲ್ಲಿ ಈ ಬಗ್ಗೆ ತಿಳಿಸುತ್ತೆನೆ ಎಂದು ಕುತೂಹಲ ಮೂಡಿಸಿದ್ದಾರೆ.
ಕೋಲಾರ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ಪರ್ಧೆ ಮಾಡಿಕೊಳ್ಳಲಿ ಬಿಡಿ, ಇದರಿಂದ ನಮಗೇನು ಅಡಚಣೆ ಇಲ್ಲ ಎಂದರು.
ಬಿಜೆಪಿಯಿಂದ ಕೆಲವು ಶಾಸಕರು ಕಾಂಗ್ರೆಸ್ ಗೆ ವಲಸೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಸತ್ಯಕ್ಕೆ ದೂರವಾದ ವಿಚಾರ. ಬಿಜೆಪಿಯಿಂದ ಯಾವ ಶಾಸಕರು ಕಾಂಗ್ರೆಸ್ ಗೆ ಹೋಗಲ್ಲ.ನಾನು ಜೆಡಿಎಸ್ ನಿಂದ ಬಂದವನು ಬಿಜೆಪಿಯಲ್ಲೇ ಇದ್ದೇನಲ್ಲ. ವಿಶ್ವನಾಥ್ ಮಂತ್ರಿಯಾದವರಲ್ಲ. ಅವರೊಬ್ಬರು ಬಿಜೆಪಿ ತೊರೆದು ಹೋಗಿದ್ದಾರೆ ಅಷ್ಟೇ. ಈ ಬಗ್ಗೆ ಪಕ್ಷದ ವರಿಷ್ಠರು ಮಾತನಾಡುತ್ತಾರೆ. ಡಿ.ಕೆ.ಶಿವಕುಮಾರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಬರುತ್ತಾರೆ ಎಂದಿದ್ದಾರೆ. ಅವರು ಹೇಳಲೇಬೇಕು, ಹೇಳುತ್ತಾರೆ. ಆ ರೀತಿ ಹೇಳದೇ ಇದ್ದರೆ, ರಾಜಕಾರಣ ಮಾಡಲು ಎಲ್ಲಿ ಆಗುತ್ತೆ ಎಂದು ಪ್ರಶ್ನಿಸಿದರು.
ಸೊರಬ ಶಾಸಕ ಕುಮಾರ್ ಬಂಗಾರಪ್ಪ ಅವಧಿಯಲ್ಲಿ ತಹಶೀಲ್ದಾರ್ ಗಳ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ , ಈ ವಿಚಾರ ಇಂದು ಕೆಡಿಪಿ ಸಭೆಯಲ್ಲಿ ಚರ್ಚೆಯಾಗಿದೆ. ಆದರೆ, ಇವರ ಅವಧಿಯಲ್ಲಿ 14 ಜನ ತಹಶೀಲ್ದಾರ್ ಗಳ ಬದಲಾವಣೆಯಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಪಟ್ಟಿ ಕೇಳಿದ್ದೆನೆ. ಪಟ್ಟಿ ಬಂದ ಬಳಿಕ ಈ ಬಗ್ಗೆ ವಿವರ ನೀಡುತ್ತೆನೆ ಎಂದರು.