Advertisement

ಪಾಕ್‌ ಕಿತಾಪತಿಗೆ ಕಿಡಿ

06:00 AM Sep 30, 2018 | Team Udayavani |

ನ್ಯೂಯಾರ್ಕ್‌: ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಪಾಕ್‌ ಬಣ್ಣವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಎಳೆ ಎಳೆಯಾಗಿ ಬಯಲು ಮಾಡಿದ್ದಾರೆ. ಉಗ್ರರನ್ನು ವೈಭವೀಕರಿಸುವ ಪಾಕಿಸ್ಥಾನ ಹರಿಸಿದ ರಕ್ತದ ಓಕುಳಿಯ ಮಧ್ಯೆ ಮಾತುಕತೆ ಹೇಗೆ ಸಾಧ್ಯ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. 

Advertisement

ಪ್ರತಿ ಬಾರಿ ಮಾತುಕತೆಗೆ ಭಾರತ ಒಪ್ಪಿದಾಗಲೂ ಅಂಥ ಪ್ರಯತ್ನಗಳನ್ನು ಉಗ್ರ ಕೃತ್ಯಗಳ ಮೂಲಕ ತಡೆಯಲಾಗುತ್ತದೆ. ಬಳಿಕ ನಮ್ಮ ಮೇಲೆ ಆರೋಪ ಮಾಡ ಲಾಗುತ್ತದೆ. ಆದರೆ ಇದು ಸುಳ್ಳು. ಎಷ್ಟೇ ಸಂಕೀರ್ಣ ಸಮಸ್ಯೆಯಾದರೂ ಮಾತುಕತೆ ಮಾತ್ರದಿಂದಲೇ ಪರಿಹರಿಸ ಬಹುದು ಎಂದು ನಾವು ನಂಬಿದ್ದೇವೆ. ಪಾಕಿಸ್ಥಾನದೊಂದಿಗೆ ಹಲವು ಬಾರಿ ಮಾತುಕತೆ ನಡೆಸಿದ್ದೇವೆ. ಆದರೆ ಪ್ರತಿ ಬಾರಿಯ ಸ್ಥಾಗಿತ್ಯಕ್ಕೂ ಪಾಕ್‌ ಕಾರಣ ಎಂದು ಸುಷ್ಮಾ ಹೇಳಿದ್ದಾರೆ.

ಅಧಿಕಾರಕ್ಕೆ ಏರುತ್ತಿದ್ದಂತೆಯೇ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, ಮೋದಿಗೆ ಪತ್ರ ಬರೆದು ವಿಶ್ವಸಂಸ್ಥೆ ಮಹಾಧಿವೇಶನದ ವೇಳೆ ಉಭಯ ದೇಶಗಳ ಸಚಿವರು ಮಾತುಕತೆ ನಡೆಸುವಂತೆ ಕೋರಿದ್ದರು. ಭಾರತ ಒಪ್ಪಿತ್ತು. ಆದರೆ ಕೆಲವೇ ತಾಸುಗಳಲ್ಲಿ ಭಾರತದ ಮೂವರು ಯೋಧರನ್ನು ಅಪಹರಿಸಿ ಹತ್ಯೆಗೈದ ಸುದ್ದಿ ಬಂತು. ಇದು ಮಾತು ಕತೆಯ ನಿರೀಕ್ಷೆಯನ್ನು ವ್ಯಕ್ತಪಡಿಸು ತ್ತದೆಯೇ ಎಂದು ಸುಷ್ಮಾ ಪ್ರಶ್ನಿಸಿದ್ದಾರೆ. ಈ ಮೂಲಕ ಮಾತುಕತೆ ರದ್ದತಿ ಹಿಂದಿನ ಸತ್ಯ ಬಯಲು ಮಾಡಿದ್ದಾರೆ. 

ಭಾರತ ಹಲವು ವರ್ಷಗಳಿಂದಲೂ ಶಾಂತಿ ಮಾತುಕತೆಗೆ ಪ್ರಯತ್ನಿಸಿದೆ. ಮೋದಿ ಅಧಿಕಾರ ಸ್ವೀಕರಿಸುವುದಕ್ಕೂ ಮೊದಲೇ ಎಲ್ಲ ಸಾರ್ಕ್‌ ದೇಶಗಳ ಮುಖ್ಯಸ್ಥರನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಿ, ಮೊದಲ ದಿನದಿಂದಲೇ ಮಾತುಕತೆಗೆ ಬಯಸಿ ದ್ದರು. ಆದರೆ ಕೆಲವೇ ತಿಂಗಳಲ್ಲಿ ಉಗ್ರರು ಪಠಾಣ್‌ಕೋಟ್‌ ಸೇನಾ ನೆಲೆಯ ಮೇಲೆ ದಾಳಿ ನಡೆಸಿದರು. ರಕ್ತಪಾತದ ಮಧ್ಯೆ ಹೇಗೆ ಮಾತುಕತೆ ಸಾಧ್ಯ ಎಂಬುದನ್ನು ದಯವಿಟ್ಟು ನಮಗೆ ವಿವರಿಸಿ ಎಂದು ಸುಷ್ಮಾ ಆಗ್ರಹಿಸಿದ್ದಾರೆ. 

ವಿಶ್ವಸಂಸ್ಥೆಯಲ್ಲೇ ಸುಳ್ಳು
ಪಾಕಿಸ್ಥಾನವು ಭಾರತದ ವಿರುದ್ಧ ಸುಳ್ಳು ಹೇಳುತ್ತಲೇ ಬಂದಿದೆ. ವಿವಿಧ ವೇದಿಕೆಗಳಲ್ಲಿ ಸುಳ್ಳಾಡುವ ಮೂಲಕ ಭಾರತದ ಬಗ್ಗೆ ತಪ್ಪು ಚಿತ್ರಣ ಬಿಂಬಿಸಲು ಪ್ರಯತ್ನಿಸಿದೆ. ಅಲ್ಲದೆ ವಿಶ್ವಸಂಸ್ಥೆಯ ಇದೇ ವೇದಿಕೆಯಲ್ಲಿ ಕಳೆದ ವರ್ಷ ಭಾರತದ ವಿರುದ್ಧ ಸುಳ್ಳು ಹೇಳಿದೆ. ಭಾರತದ ವಿದೇಶ ಸಚಿವರ ಭಾಷಣಕ್ಕೆ ಪ್ರತಿಕ್ರಿಯೆ ನೀಡುವ ಹಕ್ಕನ್ನು ಬಳಸಿಕೊಂಡ ಅದು, ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಸುಳ್ಳು ಚಿತ್ರವನ್ನು ಪ್ರದರ್ಶಿಸಿತ್ತು. ಆದರೆ ಅದು ಬೇರೆ ಯಾವುದೋ ದೇಶದ್ದಾಗಿತ್ತು ಎಂದು ಸುಷ್ಮಾ ಹೇಳಿದ್ದಾರೆ.

Advertisement

ಆರಾಮಾಗಿದ್ದಾನೆ ಹಫೀಜ್‌
9/11 ದಾಳಿ ಸಂಚುಕೋರ ಉಸಾಮಾ ಬಿನ್‌ ಲಾದನ್‌ನನ್ನು ಬಚ್ಚಿಟ್ಟುಕೊಂಡು ಸ್ನೇಹಿ ರಾಷ್ಟ್ರ ಅಮೆರಿಕಕ್ಕೇ ಪಾಕ್‌ ಎಂಥ ಮೋಸ ಮಾಡಿತ್ತು ಎಂಬುದು ಜಗಜ್ಜಾಹೀರಾಗಿದೆ. ಅಮೆರಿಕ ತನ್ನ ಸೇನಾ ಶಕ್ತಿಯಿಂದ ಪಾಕ್‌ ಭೂಭಾಗ ಪ್ರವೇಶಿಸಿ ಲಾದನ್‌ ಹತ್ಯೆಗೈದಿದೆ. ಆದರೆ ಮುಂಬಯಿ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ ಇಂದಿಗೂ ಪಾಕಿಸ್ಥಾನದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾನೆ. ಚುನಾವಣೆಯಲ್ಲೂ ಸ್ಫರ್ಧಿಸಿದ್ದಾನೆ ಎಂದಿದ್ದಾರೆ ಸುಷ್ಮಾ.

ಸಿಸಿಐಟಿ ಜಾರಿಯಾಗಲಿ
1996ರಲ್ಲೇ ಭಾರತವು ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಸಂಬಂಧಿಸಿದ ಸಮಾವೇಶ (ಸಿಸಿಐಟಿ) ಪ್ರಸ್ತಾಪ ಮಾಡಿತ್ತು. ಇಂದಿಗೂ ಅಭಿಪ್ರಾಯ ಭೇದಗಳಿಂದಾಗಿ ಇದು ಕಾರ್ಯರೂಪಕ್ಕೆ ಬಂದಿಲ್ಲ. ಒಂದೆಡೆ ನಾವು ಉಗ್ರರ ವಿರುದ್ಧ ಹೋರಾಡಲು ಬಯಸುತ್ತೇವೆ. ಆದರೆ ಒಮ್ಮತಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಉಗ್ರವಾದವನ್ನು ಹತ್ತಿಕ್ಕಲು ವಿಶ್ವಸಂಸ್ಥೆಯು ಉಗ್ರವಾದಕ್ಕೆ ಸಾಮಾನ್ಯ ವ್ಯಾಖ್ಯಾನವನ್ನು ನಿಗದಿಪಡಿಸಬೇಕಿದೆ ಎಂದವರು ಹೇಳಿದ್ದಾರೆ.

ಚುನಾವಣೆಗೆ ಹೆದರಿದ ಸರಕಾರ: ಪಾಕ್‌
ಭಾರತದಲ್ಲಿ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಹೆದರಿ ಪಾಕ್‌ ಜತೆಗೆ ಮಾತುಕತೆಯನ್ನು ನಿರಾಕರಿಸ ಲಾಯಿತು ಎಂದು ಪಾಕ್‌ ವಿದೇಶ ಸಚಿವ ಶಾ ಮೆಹಮೂದ್‌ ಖುರೇಶಿ ಹೇಳಿದ್ದಾರೆ. ಈ ಮೂಲಕ ಭಾರತದ ಆಂತರಿಕ ವಿಚಾರದಲ್ಲಿ ಮೂಗುತೂರಿಸುವುದನ್ನು ಮುಂದುವರಿಸಿದ್ದಾರೆ. ಸುಷ್ಮಾ ವಿರುದ್ಧ ವೈಯಕ್ತಿಕ ಮಟ್ಟದಲ್ಲೂ ವಾಗ್ಧಾಳಿ ನಡೆಸಿದ ಖುರೇಶಿ, ಸುಷ್ಮಾ ಭೇಟಿಯಾದಾಗ ಅವರ ಮುಖ ಪೇಲವವಾಗಿತ್ತು. ಅವರ ಮುಖದಲ್ಲಿ ರಾಜಕೀಯದ ಒತ್ತಡ ಇರುವುದು ಕಂಡಿತು ಎನ್ನುವ ಮೂಲಕ ಉದ್ಧಟತನ ಮೆರೆದಿದ್ದಾರೆ.

“ನಾನು’ ಎಂದಲ್ಲ “ನಾವು’ ಎಂದು ಕೆಲಸ ಮಾಡಿ
ಭದ್ರತಾ ಮಂಡಳಿಯಲ್ಲಿ ಇನ್ನೂ ಸುಧಾರಣೆಯಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸುಷ್ಮಾ,”ನಾಳೆ ಎಂಬುದು ತೀರಾ ತಡ, ಹೀಗಾಗಿ ಇಂದೇ ಸುಧಾರಣೆ ಯಾಗಲಿ’ ಎಂದಿದ್ದಾರೆ. ವಿಶ್ವಸಂಸ್ಥೆ ಎಂದಿಗೂ “ನಾನು’ ಎಂದು ಕೆಲಸ ಮಾಡಬಾರದು, ಇಲ್ಲಿ “ನಾವು’ ಎಂಬ ಪದ ಬಳಕೆಯಾಗಬೇಕು ಎಂದೂ ಅಭಿಪ್ರಾಯಪಟ್ಟಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next