ಮೈಸೂರು: ಪ್ರಸಕ್ತ ಸಾಲಿನ ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಪಂದ್ಯಾವಳಿಗೆ ಎನ್.ಆರ್. ಸಮೂಹ ಮಾಲೀಕತ್ವದ ಮೈಸೂರು ವಾರಿಯರ್ ಪೂರ್ವ ಸಿದ್ಧತೆ ಆರಂಭಿಸಿದ್ದು, ಶನಿವಾರ ಹೊಸ ಆಟಗಾರರ ಕ್ರಿಕೆಟ್ ಟ್ಯಾಲೆಂಟ್ ಹಂಟ್ ಪ್ರತಿಭಾನ್ವೇಷಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಪ್ರತಿ ಬಾರಿಯಂತೆ ಈ ವರ್ಷವೂ ಸಹ ಹೊಸ ಪ್ರತಿಭೆಗಳನ್ನು ಗುರುತಿಸಿ, ಕೆಪಿಎಲ್ ಪಂದ್ಯಾವಳಿಯಲ್ಲಿ ಆಡಲು ಅವಕಾಶ ನೀಡುವ ಉದ್ದೇಶದಿಂದ ನಗರದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಸಲಾದ ಪ್ರತಿಭಾನ್ವೇಷಣೆ ಆಯ್ಕೆ ಶಿಬಿರದಲ್ಲಿ ಮೈಸೂರು ಸೇರಿದಂತೆ ಇನ್ನಿತರ ಕಡೆಗಳಿಂದ ಆಗಮಿಸಿದ್ದ 205 ಯುವ ಕ್ರಿಕೆಟಿಗರು ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಆಯ್ಕೆ ಶಿಬಿರದ ಮೊದಲ ಹೆಜ್ಜೆಯಾಗಿ ನಡೆದ ಟ್ಯಾಲೆಂಟ್ ಹಂಟ್‌ನಲ್ಲಿ ಮೈಸೂರು ಮೂಲದ 105 ಯುವ ಪ್ರತಿಭೆಗಳು ಪಾಲ್ಗೊಂಡಿದ್ದು, ಇವರಲ್ಲಿ 50 ಬೌಲರ್, 10 ಬ್ಯಾಟ್ಸ್‌ಮನ್ಸ್, 40 ಆಲ್‌ರೌಂಡರ್ ಹಾಗೂ 5 ವಿಕೆಟ್ ಕೀಪರ್/ಬ್ಯಾಟ್ಸ್‌ಮನ್‌ಗಳು ತಮ್ಮ ಪ್ರತಿಭೆೆ ತೋರುವ ಮೂಲಕ ಮುಂಬರುವ ಕೆಪಿಎಲ್ ಟೂರ್ನಿಗೆ ಮೈಸೂರು ವಾರಿಯರ್ ತಂಡವನ್ನು ಪ್ರತಿನಿಧಿಸುವ ಉತ್ಸಾಹ ತೋರಿದರು.
ಅಂತೆಯೇ ಬೆಂಗಳೂರಿನಲ್ಲಿ ನಡೆದ ಟ್ಯಾಲೆಂಟ್ ಹಂಟ್‌ನಲ್ಲಿ 100 ಮಂದಿ ಪ್ರತಿಭೆೆಗಳು ಪಾಲ್ಗೊಂಡಿದ್ದರು. ಸದ್ಯ ಪ್ರತಿಭಾನ್ವೇಷಣೆಯಲ್ಲಿ ಪಾಲ್ಗೊಂಡಿದ್ದ 205 ಮಂದಿಯಲ್ಲಿ 43 ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಇವರು ಶನಿವಾರ ಮಂಡ್ಯದ ಪಿಇಟಿ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಅಂತಿಮ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದರಲ್ಲಿ ಆಯ್ಕೆಯಾಗುವ ಹೊಸ ಆಟಗಾರರು ಪ್ರಸಕ್ತ ಸಾಲಿನ ಕೆಪಿಎಲ್ ತಂಡಗಳ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದು, ಇದರಲ್ಲಿ ಆಯ್ಕೆಯಾಗುವ ಆಟಗಾರರು ಪ್ರಸಕ್ತ ಋತುವಿನ ಕೆಪಿಎಲ್‌ನಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ.