Advertisement

ಮಕ್ಕಳ ಕೈಯ್ಯಲ್ಲಿ ಮಾತನಾಡಿದ ಗೊಂಬೆಗಳು

06:00 AM Aug 03, 2018 | |

ಜಾದೂ ಮಾಡುವವರ ಕೈಯ್ಯಲ್ಲಿ ಮಾತನಾಡುವ ಗೊಂಬೆಯನ್ನು ನಾವು ಕಾಣುತ್ತೇವೆ. ಜಾದೂ ವೀಕ್ಷಿಸಿದವರೆಲ್ಲರನ್ನೂ ಅದು ಮೂಕವಿಸ್ಮಿತರಾನ್ನಾಗಿ ಮಾಡುತ್ತದೆ. ಮಕ್ಕಳಂತೂ ಬಹಳ ಮೋಜು ಪಡೆಯುತ್ತಾರೆ. ಅಂತಹುದೇ ಗೊಂಬೆಯನ್ನು ತಾವೂ ಮಾಡಿ ಮಾತನಾಡಿಸಬೇಕೆಂಬ ಹಂಬಲ ಮಕ್ಕಳಲ್ಲಿ ನಿರಂತರವಾಗಿರುತ್ತದೆ. ಆದರೆ ಇದು ಹೇಗೆ? ಎಂಬ ಪ್ರಶ್ನೆ ಮಕ್ಕಳನ್ನು ಕಾಡುತ್ತಿರುತ್ತದೆ. ಅದಕ್ಕೆ ಉತ್ತರವೆಂಬಂತೆ ಉಡುಪಿ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಮಾತನಾಡುವ ಗೊಂಬೆ ಪ್ರಾತ್ಯಕ್ಷಿಕೆಯನ್ನು ಇತ್ತೀಚೆಗೆ ನಡೆಸಲಾಯಿತು. ಮಕ್ಕಳು ಕುತೂಹಲಭರಿತರಾಗಿ ನೋಡಿ ತಾವೂ ಕಲಿತುಕೊಂಡರು. ಕೈಯ್ಯಲ್ಲಿ ಗೊಂಬೆಗಳನ್ನು ಧರಿಸಿ ಮಾತಿನೊಂದಿಗೆ ಭಾವಭಂಗಿ ಮೂಡಿಸಿ ಪ್ರದರ್ಶಿಸಿ ಖುಷಿಪಟ್ಟರು. 

Advertisement

 ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಚಿತ್ರಕಲಾ ಶಿಕ್ಷಕ ಹಾಗೂ ಕಲಾವಿದ ರಮೇಶ್‌ ಬಂಟಕಲ್‌ ಆಗಮಿಸಿ ಗೊಂಬೆ ತಯಾರಿಯ ವಿಧಾನವನ್ನು ಮಕ್ಕಳಿಗೆ ತಿಳಿಸಿದರು. ಬಣ್ಣದ ಕಾಗದವನ್ನು ಬೇಕಾದಂತೆ ಮಡಚಿ ಕತ್ತರಿಸಿ ಗೊಂಬೆಯ ಮುಖವನ್ನು ಮೊದಲು ತಯಾರಿಸಬೇಕು. ಮುಖವು ಮಾಮೂಲಿಯಾಗಿರದೆ ಸ್ವಲ್ಪ ವಿಕೃತವಾಗಿದ್ದರೆ ನೋಡಲು ಖುಷಿಯಾಗುತ್ತದೆ. ಆನಂತರ ಬಣ್ಣದ ಕಾಗದವನ್ನು ಕೋನಾಕೃತಿಯಲ್ಲಿ ಮಡಚಿ ಕೈಬೆರಳುಗಳಿಗೆ ಸಿಕ್ಕಿಸುವ ಗೊಂಬೆಯ ಕೈಯ್ಯನ್ನು ಬೆರಳುಗಳ ಸಹಿತ ರಚಿಸಬೇಕು. ಬಳಿಕ ಒಂದು ಬಣ್ಣದ ವಸ್ತ್ರವನ್ನು ಕೈಗೆ ಸಿಕ್ಕಿಸಿಕೊಂಡು ಮಧ್ಯದ ಬೆರಳಿಗೆ ಗೊಂಬೆಯ ಮುಖವನ್ನು, ಕಿರುಬೆರಳು ಮತ್ತು ತೋರುಬೆರಳಿಗೆ ಗೊಂಬೆಯ ಕೈಗಳನ್ನು ಸಿಕ್ಕಿಸಿಕೊಂಡು ಮಾತನಾಡುತ್ತಾ ಅದಕ್ಕೆ ಸರಿಯಾಗಿ ಗೊಂಬೆಯ ಹಾವಭಾವವನ್ನು ಪ್ರದರ್ಶಿಸಿದಾಗ ಗೊಂಬೆ ಮಾತನಾಡಿದಂತೆ ಕಾಣುತ್ತದೆ. ವೇಗವಾಗಿ ಮತ್ತು ಹಾಸ್ಯಮಯವಾಗಿ ಬೇರೆ ಬೇರೆ ಸ್ವರಗಳಲ್ಲಿ ಮಾತನಾಡಿ ಇತರರನ್ನು ಸಂತೋಷಗೊಳಿಸಬಹುದು. 

ಅನಂತರ ಬಣ್ಣಕಾಗದದಿಂದ ಆನೆ, ಇಲಿ, ಕುದುರೆ, ಹಕ್ಕಿ ಮುಂತಾದುವುಗಳ ಮುಖವಾಡ ರಚಿಸುವ ವಿಧಾನ ಹಾಗೂ ಅದನ್ನು ಮುಖಕ್ಕೆ ಧರಿಸಿ ಅವುಗಳಂತೆ ವರ್ತಿಸುವ ವಿಧಾನವನ್ನು ಮಾಡಿ ತೋರಿಸಿದರು. ಇನ್ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು. ಖುಷಿಯಿಂದ ಮುಖವಾಡ ರಚಿಸಿ ಮುಖಕ್ಕೆ ಸಿಕ್ಕಿಸಿ ನಲಿದಾಡಿದರು. 

ಉಪಾಧ್ಯಾಯ ಮೂಡುಬೆಳ್ಳೆ 

Advertisement

Udayavani is now on Telegram. Click here to join our channel and stay updated with the latest news.

Next