Advertisement

ಬೆಳ್ಳಿತೆರೆಯ ಮೇಲೆ ಮಾತನಾಡಿದಳು ಕನಸುಗಳ ಮೂಕಜ್ಜಿ

12:30 AM Mar 17, 2019 | Team Udayavani |

11ನೆಯ ಅಂತಾರಾಷ್ಟ್ರೀಯ ಸಿನಿಮೋತ್ಸವ ಬೆಂಗಳೂರಿನ ಪಿವಿಆರ್‌ ಚಿತ್ರಮಂದಿರದಲ್ಲಿ ಇತ್ತೀಚೆಗೆ ನಡೆಯಿತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಪ್ರದರ್ಶನ ಕಂಡ ಮೂಕಜ್ಜಿಯ ಕನಸುಗಳು ಚಲನಚಿತ್ರ ಹಾಗೂ  ಮೂಲ ಕಾದಂಬರಿ ಕುರಿತ ಅವಲೋಕನವಿದು…

Advertisement

ಸಾಹಿತ್ಯದ ಗಂಧವಿರುವ ಯಾರನ್ನೇ ಕೇಳಿ, ಸುಮಾರು 50 ವರ್ಷಗಳ ಹಿಂದೆ ಡಾ. ಶಿವರಾಮ ಕಾರಂತರು ರಚಿಸಿದ ಮೂಕಜ್ಜಿಯ ಕನಸುಗಳು ಕಾದಂಬರಿಯ ಕಲಾತ್ಮಕತೆಯನ್ನು ಮೆಚ್ಚಿಕೊಳ್ಳದಿರುವುದಿಲ್ಲ. ದೈತ್ಯ ಪ್ರತಿಭೆಯೊಂದು ಸೃಜಿಸಿದ ಅಪೂರ್ವ ಸಾಹಿತ್ಯ ಕೃತಿ ಅದು. ವಿಮರ್ಶಕ ಪಂಡಿತರಿಂದ ಹಿಡಿದು ಸಾಮಾನ್ಯ ಓದುಗರ ಮನದಲ್ಲೂ ಅಚ್ಚೊತ್ತುವ ಈ ಕಾದಂಬರಿಯ ಪ್ರಮುಖ ಪಾತ್ರ ಮೂಕಜ್ಜಿಯ ವಿಶಿಷ್ಟ ವ್ಯಕ್ತಿತ್ವವೇ ಇದಕ್ಕೆ ಕಾರಣ.

ಇಂತಹ ಅದ್ಭುತ, ಅಪೂರ್ವ ಸಾಹಿತ್ಯ ಕೃತಿಯೊಂದು ದೃಶ್ಯಕ್ಕೆ ಬಂದಿರುವುದು ಸದಭಿರುಚಿಯ ಸಿನಿಪ್ರಿಯರಿಗೆ ಹಬ್ಬವೇ ಸರಿ. ಇಂತಹ ಚಿತ್ರವನ್ನು ವೀಕ್ಷಿಸುವ ಹಬ್ಬ ಇತ್ತೀಚೆಗಷ್ಟೇ ನಡೆದ 11ನೆಯ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸಾಕಾರಗೊಂಡಿದೆ. ಸಿನಿಮೋತ್ಸವದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಪ್ರದರ್ಶನ ಕಂಡ ಮೂಕಜ್ಜಿಯ ಕನಸುಗಳು ಚಿತ್ರ ಕಲಾತ್ಮಕ ಚಿತ್ರಗಳನ್ನು ಗಂಭೀರವಾಗಿ ಗ್ರಹಿಸುವ ಚಿತ್ರಪ್ರೇಮಿಗಳ ಚಿತ್ತ ಕೆಣಕಿದೆ. ಚಿತ್ರಮಂದಿರದಿಂದ ಹೊರಗೆ ಬಂದ ಮೇಲೆ ಕಣ್ಣು ಮುಚ್ಚಿದರೆ ಸಾಕು ನಮ್ಮೊಳಗೂ ಒಬ್ಬಳು ಮೂಕಜ್ಜಿ ಇದ್ದಾಳೆ ಅನಿಸಿಬಿಡುತ್ತದೆ. 

ಈಗಾಗಲೇ ರಾಷ್ಟ್ರಮಟ್ಟದ ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅನುಭವಿ ನಿರ್ದೇಶಕ ಪಿ. ಶೇಷಾದ್ರಿ ಅವರ ಮಹತ್ವಾಕಾಂಕ್ಷೆಯ ಮೂಕಜ್ಜಿಯ ಕನಸುಗಳು ಚಿತ್ರದ ಕುರಿತು ಅಭಿಮಾನದಿಂದ ಮಾತನಾಡಲು ಹಲವು ಕಾರಣಗಳಿವೆ. ಅಭಿಜಾತ ಸಾಹಿತ್ಯ ಕೃತಿಯನ್ನು ದೃಶ್ಯದಲ್ಲಿ ಕಟ್ಟಿರುವುದರ ಯಶಸ್ಸನ್ನು ಶ್ರದ್ಧೆ, ತಾತ್ವಿಕ ದರ್ಶನ, ಮೌಲ್ಯ ಶೋಧನೆ ಹಾಗೂ ಜೀವನದ ಬಗೆಗಿನ ವಿಭಿನ್ನ ಆಯಾಮಗಳ ನೆಲೆಯಲ್ಲಿ ಗ್ರಹಿಸಿ ವಿಷ‌ದಪಡಿಸಬಹುದು.

ಈ ಚಿತ್ರ ಕುರಿತು ಮೊದಲು ಬೆರಗು ಮೂಡಲು ಕಾರಣ- ಚಿತ್ರೋತ್ಸವ ನಡೆದ ಬೆಂಗಳೂರಿನ ಒರಾಯನ್‌ ಮಾಲ್‌ನಲ್ಲಿರುವ ಪಿವಿಆರ್‌ ಬಹುತೆರೆಗಳ ಚಿತ್ರಮಂದಿರದಲ್ಲಿ ಸಾವಿರಾರು ಪ್ರೇಕ್ಷಕರು ಚಿತ್ರ ವೀಕ್ಷಿಸಲು ಕುತೂಹಲದಿಂದ ಸರತಿ ಸಾಲಿನಲ್ಲಿ ನಿಂತದ್ದು! ಅಲ್ಲದೆ, ತಮಗೊಂದು ಬೇರೆಯದೇ ಸಾಲು ಇರಲಿ ಎಂದು ಹಿರಿಯ ನಾಗರಿಕರು ಗುಂಪುಕೂಡಿ ನಿಂತದ್ದು! ಯಾವ ಪ್ರಚಾರವನ್ನೂ ಮಾಡದ ಕನ್ನಡದ ಕಲಾತ್ಮಕ ಚಿತ್ರವೊಂದು ಪ್ರೇಕ್ಷಕರಲ್ಲಿ ಈ ಪರಿಯ ಆಸಕ್ತಿ ಅರಳಿಸಬಹುದೆ ಎಂದು ನಾನೂ ಅದೇ ಸಾಲಿನಲ್ಲಿ ನಿಂತೆ. ಸುಮಾರು ಮೂರು ಚಿತ್ರಮಂದಿರಗಳು ತುಂಬಬಹುದಾದಷ್ಟು ಜನರು ಅಲ್ಲಿ ಸೇರಿದ್ದರು. ಜನರ ಆತುರ ಕಂಡು ಚಿತ್ರೋತ್ಸವ ಸಂಘಟಕರು ಅಸಹಾಯಕರಾಗತೊಡಗಿದಾಗ ಅಲ್ಲಿಗೆ ಪೊಲೀಸರು ಹಾಜರಾಗಬೇಕಾಯಿತು!

Advertisement

ಚಿತ್ರ ಪ್ರದರ್ಶನ ಆರಂಭಕ್ಕೂ ಮುನ್ನ ಚಿತ್ರದ ಕಲಾವಿದರು, ನಿರ್ದೇಶಕ, ತಂತ್ರಜ್ಞರ ಅಭಿನಂದನಾ ಕಾರ್ಯಕ್ರಮ ನಡೆಯಿತು. ಹೊರಗೆ ಜನರನ್ನು ಕಂಡಿದ್ದ ನಿರ್ದೇಶಕ ಪಿ. ಶೇಷಾದ್ರಿ ಅವರು ಅಭಿನಂದನೆ ಸ್ವೀಕರಿಸಿ, “ಒಂದು ಕನ್ನಡ ಚಿತ್ರ, ಪೊಲೀಸರ ರಕ್ಷಣಾ ವ್ಯವಸ್ಥೆ ಪಡೆದು ಪ್ರದರ್ಶನ ಕಾಣುತ್ತಿದೆ ಎಂಬುದೇ ಹೆಮ್ಮೆ ಪಡುವ ವಿಚಾರ’ ಎಂದರು ಮಾರ್ಮಿಕವಾಗಿ.  ಚಿತ್ರ ವೀಕ್ಷಿಸಿದ ಬಳಿಕ ಅನಿಸಿತು, ಅವರ ಶ್ರಮ ಮತ್ತು ಜನರನ್ನು ಕಂಡು ವ್ಯಕ್ತಪಡಿಸಿದ ಧನ್ಯತೆಗೆ ಅರ್ಥವಿದೆ ಎಂದು.

ಮೂಕಜ್ಜಿಯ ಕನಸುಗಳು ಸಾಹಿತ್ಯ ಕೃತಿಯಾಗಿಯೇ ಒಂದು ಅಭಿಜಾತ ಕಾದಂಬರಿ. ಅದೇ ಕಾರಣಕ್ಕೆ ಸಾಹಿತ್ಯದ ಅತ್ಯುನ್ನತ ಪ್ರಶಸ್ತಿ ಜ್ಞಾನಪೀಠ ಅದಕ್ಕೆ ಸಂದಿದೆ. ಈ ಕೃತಿಯ ಆಳ-ವಿಸ್ತಾರ ಕುರಿತು ಮಾತನಾಡುವುದಾದರೆ, ಸ್ವತಃ ಅದನ್ನು ರಚಿಸಿದ ಶಿವರಾಮ ಕಾರಂತರಿಗೇ ಅದರ ಬಗ್ಗೆ ನಿರ್ದಿಷ್ಟವಾದ ವಾಖ್ಯಾನ ಮಾಡುವುದು ಕಷ್ಟಸಾಧ್ಯವಾಗಿತ್ತಂತೆ. ಹಾಗಾಗಿ ಇದು ಲೇಖಕರನ್ನೂ ಮೀರಿ ಬೆಳೆದ ಕೃತಿಯಾಗಿದೆ. ಈ ಕೃತಿಯನ್ನು ನಾಟಕ ಸ್ವರೂಪದಲ್ಲಿ ರಂಗಕ್ಕೆ ತರಬೇಕೆಂಬುದು ಈ ಹಿಂದೆಯೇ ಕೆಲವರ ತುಡಿತವಾಗಿತ್ತು. ಆದರೆ ಈ ಬಗ್ಗೆ ಶಿವರಾಮ ಕಾರಂತರಿಗೆ ಸಹಮತವಿರಲಿಲ್ಲ. ಯಾಕೆಂದರೆ, ಈ ವಸ್ತುವನ್ನು ಮೂರ್ತಗೊಳಿಸಿ ಅಥವಾ ಪ್ರತಿಮಾತ್ಮಕವಾಗಿ ದೃಶ್ಯ ರೂಪಕ್ಕೆ ತರುವುದು ಅಷ್ಟು ಸುಲಭವಲ್ಲ ಎಂಬುದನ್ನು ಅವರು ಅರಿತಿದ್ದರು. ಹೀಗೆ ಕೇಳಿದಾಗಲೆಲ್ಲ ಕಾರಂತರು, ಚೋಮನ ದುಡಿ ಕಾದಂಬರಿ ಇದೆಯಲ್ಲ, ಅದನ್ನ ಬೇಕಾದರೆ ನಾಟಕ ಮಾಡಿ ಎನ್ನುತ್ತಿದ್ದರು ಎಂದು ಕೆಲವರು ಹೇಳುತ್ತಾರೆ. ಆದರೆ, ಅದಾಗಲೇ ಚಲನಚಿತ್ರವಾಗಿ ತೆರೆಗೆ ಬಂದಿತ್ತು. ಕಾರಂತರ ಮನದ ಇಂಗಿತ ಸರಿಯಾದದ್ದೇ. ಯಾಕೆಂದರೆ, ಮೂಕಜ್ಜಿಯ ಕನಸುಗಳು ಕಾದಂಬರಿಯ ವಸ್ತುವನ್ನು ದೃಶ್ಯಗಳಲ್ಲಿ ಮರುಸೃಜಿಸುವಾಗ ಲೇಖಕನ ಆಶಯಗಳಿಗೆ ಭಂಗವಾಗಿ, ವಸ್ತು ವಿರೂಪವಾಗುವ ಅಪಾಯವಿದ್ದೇ ಇರುತ್ತದೆ. ಇದನ್ನು ಅತ್ಯಂತ ಸೂಕ್ಷ್ಮ ಲೇಖಕ ಮಾತ್ರ ಅರಿಯಬಲ್ಲ. ಇದು ಕೂಡ ಕಾರಂತರ ಅದಮ್ಯ ವಿಚಾರ ಶಕ್ತಿಯೇ. ಆದರೆ, ಕಾದಂಬರಿಯ ವಸ್ತುವಿರೂಪವಾಗದ ಹಾಗೆ, ಹಾದಿ ತಪ್ಪದ ಹಾಗೆ ದೃಶ್ಯ ಕಟ್ಟುವ ಶಕ್ತಿಯೂ ಒಬ್ಬ ಸಮರ್ಥ ನಿರ್ದೇಶಕನಲ್ಲಿ ಇರುತ್ತದೆ ಎನ್ನುವುದನ್ನು, ಕಾರಂತರು ಭೌತಿಕವಾಗಿ ಇಲ್ಲದ ಈ ಸಂದರ್ಭದಲ್ಲಿ ಪಿ. ಶೇಷಾದ್ರಿ ಈ ಚಿತ್ರದಲ್ಲಿ ಸಾಧಿಸಿ ತೋರಿಸಿದ್ದಾರೆ. ಎರಡೂವರೆ ಗಂಟೆ ಕಾಲ ಚಿತ್ರವನ್ನು ಗಂಭೀರವಾಗಿ ಆಸ್ವಾದಿಸಿದ ಪ್ರೇಕ್ಷಕರು, ಚಿತ್ರ ಮುಗಿಯುವ ಸಂದರ್ಭದಲ್ಲಿ ಎದ್ದು ನಿಂತು ಚಪ್ಪಾಳೆ ಸುರಿಮಳೆ ಗೈದರು! ಇದೇ ಪ್ರದರ್ಶನದಲ್ಲಿ ಪ್ರೇಕ್ಷರೊಂದಿಗೆ ಕುಳಿತು ಚಿತ್ರ ವೀಕ್ಷಿಸಿದ ನಿರ್ದೇಶಕ ಪಿ. ಶೇಷಾದ್ರಿ ಅವರು ಈ ಸಂದರ್ಭದಲ್ಲಿ ಮುಗುಳ್ನಕ್ಕು ವಿನೀತರಾಗಿ ಪ್ರೇಕ್ಷಕರ ಎದುರು ಕೈ ಜೋಡಿಸಿದರು. 

ನಿರ್ದೇಶಕನಿಗೆ ಸವಾಲೊಡ್ಡಿದ ಕೃತಿ 
ಒಂದು ಸಾಹಿತ್ಯ ಕೃತಿ ಚಲನಚಿತ್ರವಾಗುವ ಸಂದರ್ಭದಲ್ಲಿ ಹಲವು ತಾಂತ್ರಿಕ ತೊಡಕುಗಳು ಎದುರಾಗುತ್ತವೆ ಎಂಬುದನ್ನು ಎಲ್ಲ ನಿರ್ದೇಶಕರೂ ಬಲ್ಲರು. ಹಾಗಾಗಿ ಕೃತಿಯಲ್ಲಿನ ಅನೇಕ ಅಂಶಗಳನ್ನು ಕೈ ಬಿಡಬೇಕಾಗುತ್ತದೆ ಅಥವಾ ಹೇಗಾದರೂ ಸರಿ ಚಿತ್ರ ಮಾಡಿಯೇ ತೀರುವುದು ಎಂದುಕೊಂಡಾಗ ಕೆಲವು ಅಂಶಗಳೊಂದಿಗೆ ರಾಜಿ ಮಾಡಿಕೊಳ್ಳುವ ಅನಿವಾರ್ಯತೆಯೂ ಬರಬಹುದು. ಮೂಕಜ್ಜಿಯ ಕನಸುಗಳು ಕಾದಂಬರಿಯ ವಸ್ತು ಹೆಜ್ಜೆ ಹೆಜ್ಜೆಗೂ ನಿರ್ದೇಶಕರಿಗೆ ಇಂತಹ ಸವಾಲುಗಳನ್ನು ಸೃಷ್ಟಿಸುವಂತಹದು. ಈ ಕೃತಿ ಓದಿದವರಿಗೆ ಇದು ಖಂಡಿತ ಅರ್ಥವಾಗುತ್ತದೆ.

ಮೂಕಜ್ಜಿಯ ಕನಸುಗಳು ಚಿತ್ರದ ಪ್ರಮುಖ ಪಾತ್ರವಾದ ಮೂಕಜ್ಜಿಗೆ ಅತೀಂದ್ರೀಯ ಶಕ್ತಿ ಇದೆ. ವಾಸ್ತವದಲ್ಲಿ ಮನುಷ್ಯರಿಗೆ ಇಂತಹ ಶಕ್ತಿ ಇರಲು ಸಾಧ್ಯವಿಲ್ಲ. ಇದು ಕೇವಲ ಕಲ್ಪನೆ ಎಂದು ಈ ಕೃತಿಯನ್ನಾಗಲಿ ಸಿನಿಮಾವನ್ನಾಗಲಿ ಭಾವಿಸುವ ಹಾಗಿಲ್ಲ. ಈ ಹಿನ್ನೆಲೆಯಲ್ಲೇ ಸ್ವತಃ ಶಿವರಾಮ ಕಾರಂತರು “ಮೂಕಜ್ಜಿಯ ಅತೀಂದ್ರೀಯ ಶಕ್ತಿಯ ಕುರಿತು ಸ್ಪಷ್ಟೀಕರಣ ಕೊಟ್ಟಿದ್ದಾರೆ.  ಅಷ್ಟಕ್ಕೂ ಮೂಕಜ್ಜಿಯ ಅತೀಂದ್ರೀಯ ಶಕ್ತಿ ಯಾವುದು? ಭೂತ ಹಾಗೂ ಭವಿಷತ್‌ ಕಾಲದ ವಾಸ್ತವ ಸತ್ಯವನ್ನು ವರ್ತಮಾನ ಕಾಲದ ತನ್ನ ಸ್ಮತಿಯಲ್ಲೇ ಅರಿವಿಗೆ ತಂದುಕೊಳ್ಳುವುದು. ಹಾಗಾಗಿ ಯಾವುದೇ ವಸ್ತುವನ್ನು ಮೂಕಜ್ಜಿಯ ಕೈಗೆ ಕೊಟ್ಟರೂ ಮೂಕಜ್ಜಿ ಅದರ ಪೂರ್ವಾಪರ ಅರಿತು ಅದರ ಹಿಂದಿನ ಸತ್ಯಗಳನ್ನು ಬಿಚ್ಚಿಡುತ್ತಾಳೆ. ಈ ನೆಲೆಯಲ್ಲೇ ಇಡೀ ಕಥಾಸುರುಳಿ ಬಿಚ್ಚಿಕೊಳ್ಳುವುದು ಅತ್ಯಂತ ಕುತೂಹಲಕಾರಿ. ಈ ಹಿನ್ನೆಲೆಯಲ್ಲಿ ಮೂಕಜ್ಜಿ ಒಂದು ಆಯಾಮದಲ್ಲಿ ಫ್ಯಾಂಟಸಿ ಸ್ವರೂಪದ ಪಾತ್ರವಾಗಿ ಮತ್ತೂಂದು ಆಯಾಮದಲ್ಲಿ ವಾಸ್ತವ ಕಟುಸತ್ಯಗಳನ್ನು ಮಥಿಸಲು ಲೇಖಕರೇ ಸೃಷ್ಟಿಸಿಕೊಂಡ ಪ್ರಯೋಗಶೀಲ ಚೌಕಟ್ಟಾಗಿ ಗೋಚರಿಸುತ್ತದೆ. ಈ ಪಾತ್ರವನ್ನು ತೆರೆಗೆ ತಂದು ಈ ಕೃತಿಯ ಪ್ರಸ್ತುತತೆಯನ್ನು ಹೆಚ್ಚಿಸಿದ ಪಿ. ಶೇಷಾದ್ರಿ ಅವರ ಪ್ರಯತ್ನ ಸಾರ್ಥಕ. ಹಿರಿಯ ಕಲಾವಿದೆ ಬಿ. ಜಯಶ್ರೀ ಅವರ ಮೂಕಜ್ಜಿಯ ಅದ್ಭುತ ಪಾತ್ರಪ್ರಸ್ತುತಿ ಪ್ರೇಕ್ಷಕರ ಮನದಲ್ಲಿ ಬಹುಕಾಲ ಸ್ಥಿರವಾಗಿ ಉಳಿಯುತ್ತದೆ.

– ಕುಮಾರ ಬೇಂದ್ರೆ

Advertisement

Udayavani is now on Telegram. Click here to join our channel and stay updated with the latest news.

Next