ಹುಣಸೂರು: ಚುನಾವಣಾ ಮೂಡ್‌ನಲ್ಲಿದ್ದ ಅಭ್ಯರ್ಥಿಗಳು ಶನಿವಾರದ ಮತದಾನದ ನಂತರ ಕೆಲವರು ರಿಲ್ಯಾಕ್ಸ್ ಪಡೆದುಕೊಳ್ಳುತ್ತಿದ್ದರೆ, ಇನ್ನು ಕೆಲವರು ಬೀಗರ ಔತಣ, ದೇವಾಲಯಗಳಲ್ಲಿ ಆಯೋಜಿಸಿರುವ ಪೂಜಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಸಮಾಜವಾದಿ ಪಕ್ಷದ ಅಭ್ಯರ್ಥಿ ಮನಶಾಂತಿಗಾಗಿ ಬುದ್ಧ ವಿಹಾರ ಕೇಂದ್ರಕ್ಕೆ ಭೇಟಿ ನೀಡಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಶನಿವಾರ ರಾತ್ರಿ ಮತದಾನದ ಬಗ್ಗೆ ಕಾರ್ಯಕರ್ತರು, ಮುಖಂಡರೊಂದಿಗೆ ಚರ್ಚಿಸಿದರೆ, ಭಾನುವಾರ ಮೈಸೂರಿನ ಮನೆಯಲ್ಲಿ ಮುಂಜಾನೆ ಪತ್ರಿಕೆಗಳನ್ನು ಗಮನಿಸಿ ಕ್ಷೇತ್ರದವರೊಂದಿಗೆ ಚುನಾವಣಾ ಸಂಬಂಧ ಲೋಕಾಬಿರಾಮವಾಗಿ ಚರ್ಚೆ ನಡೆಸಿದರು.
ಬೆಳಗ್ಗೆ ಮಸಾಜ್ ಮಾಡಿಸಿಕೊಂಡ ನಂತರ ಪತ್ನಿ ಸುಪ್ರಿಯಾ, ಪುತ್ರ ಪವನ್ ತಪಸ್ವಿ, ಪುತ್ರಿ ಲಕ್ಷ್ಮೀ ಮಾನಸರೊಂದಿಗೆ ಬೆಂಗಳೂರಿನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸೋಮವಾರ ಕ್ಷೇತ್ರಕ್ಕೆ ಮರಳುವುದಾಗಿ ತಿಳಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಶನಿವಾರ ಮಧ್ಯರಾತ್ರಿವರೆಗೂ ಮತದಾನದ ಸಂಬಂಧ ಮುಖಂಡರೊಂದಿಗೆ ಚರ್ಚಿಸಿ, ಫೋನ್ ಕರೆಗಳನ್ನು ಸ್ವೀಕರಿಸಿದರು. ಭಾನುವಾರ ಬೆಳಗ್ಗೆ ಪತ್ರಿಕೆಗಳ ಮೇಲೆ ಕಣ್ಣಾಡಿಸಿದ ನಂತರ ಪಕ್ಷದ ಮುಖಂಡರೊಂದಿಗೆ ಹಲವಾರು ಬೀಗರ ಔತಣ, ಮದುವೆ ಅಲ್ಲಿಂದ ಗೌರಿಪುರ, ಹಳೇಬೀಡು ಮತ್ತಿತರೆಡೆಗಳಲ್ಲಿ ಗ್ರಾಮದೇವರ ಹಬ್ಬಗಳಲ್ಲಿ ಭಾಗವಹಿಸಿದ್ದರು.
ಬಿಜೆಪಿ ಅಭ್ಯರ್ಥಿ ರಮೇಶ್‌ಕುಮಾರ್ ಭಾನುವಾರ ಕುಟುಂಬದವರ ಜೊತೆಗಿದ್ದು, ಮಧ್ಯಾಹ್ನದ ನಂತರ ನಗರದ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಕೃತಜ್ಞತೆ ಸಲ್ಲಿಸಿದರು. ಇನ್ನು ಸಮಾಜವಾದಿ ಪಕ್ಷದ ಅಭ್ಯರ್ಥಿ ಸತ್ಯನಾರಾಯಣ್ ತಡರಾತ್ರಿವರೆಗೂ ತಮ್ಮ ಅಭಿಮಾನಿಗಳ ಕರೆಸ್ವೀಕರಿಸಿ, ಭಾನುವಾರ ಮುಂಜಾನೆ ಮುಖಂಡರೊಂದಿಗೆ ಬೈಲುಕುಪ್ಪೆಯ ಟಿಬೇಟ್ ಕ್ಯಾಂಪಿನಲ್ಲಿರುವ ಬೌದ್ಧ ದೇವಾಯಲಕ್ಕೆ ತೆರಳಿ ಶಾಂತಿದೂತ ಬುದ್ಧನ ದರ್ಶನ ಮಾಡಿದರು.
ಬೆಟ್ಟಿಂಗ್ ಹವಾ ಶುರುವಾಗಿದೆ: ಮತ ಎಣಿಕೆಗೆ ಇನ್ನು ಒಂದು ದಿನ ಮಾತ್ರ ಬಾಕಿ ಉಳಿದಿದ್ದು, ಇದೀಗ ತಾಲೂಕಿನಾದ್ಯಂತ ಬೆಟ್ಟಿಂಗ್ ಹವಾ ಶುರುವಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಹಣಾಹಣಿಯ ಚುನಾವಣೆ ನಡೆದಿದ್ದು, ಮತದಾನದ ನಂತರ ಎರಡೂ ಪಕ್ಷಗಳವರು ಗೆಲುವು ನಮ್ಮದೇ ಎಂದು ಬೀಗುತ್ತಿದ್ದರೆ ಮತ್ತೂಂದೆಡೆ ಪಕ್ಷಗಳ ಮುಖಂಡರು ಗೆಲುವು ನಮ್ಮದೇ ಎನ್ನುವ ಜೊತೆಗೆ ಬೆಟ್ಟಿಂಗ್ ಸಹ ಜೋರಾಗಿ ನಡೆಯುತ್ತಿದ್ದು,
ನಗರ ಸೇರಿದಂತೆ ತಾಲೂಕಿನ ಹಲವೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿಗರು, ಮುಖಂಡರು ಹಾಗೂ ಸಾರ್ವಜನಿಕರು ಸಹ ತಮ್ಮ-ತಮ್ಮ ಪಕ್ಷಗಳು ಗೆಲ್ಲತ್ತವೆ ಎಂಬ ಹುಮ್ಮಸ್ಸಿನಿಂದ ಹತ್ತು ಸಾವಿರದಿಂದ ಹಿಡಿದು ಲಕ್ಷದವರೆಗೂ ಬೆಟ್ಟಿಂಗ್ ನಡೆಯುತ್ತಿದೆ ಎಂದು ತಿಳಿದು ಬಂದಿದೆ.