ಸಭೆಯಲ್ಲಿ ಮಾತನಾಡುವ ಮೂಲಕ ಸತ್ಯ ಸಮಾಧಿ ಮಾಡಬೇಡಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದ್ದಾರೆ.
Advertisement
ಸೋಮವಾರ ಯುಜಿ ಕೇಬಲ್ ಕಾಮಗಾರಿ ಚಾಲನೆ ವೇಳೆ ಶಾಸಕ ಶಾಮನೂರು ಶಿವಶಂಕರಪ್ಪನವರು ತಮ್ಮ ಭಾಷಣ ಪ್ರಸ್ತಾಪಿಸಿದ ವಿಷಯಕ್ಕೆ ಸಂಜೆ ಪತ್ರಿಕಾ ಹೇಳಿಕೆ ಮೂಲಕ ಉತ್ತರ ಕೊಟ್ಟಿರುವ ಅವರು, ಜಿಲ್ಲೆಯ ವಿದ್ಯುತ್ಕಾಮಗಾರಿಗಳಿಗೆ ಬಿಡುಗಡೆ ಆಗಿರುವ 120 ಕೋಟಿ ರೂ. ಅನುದಾನದಲ್ಲಿ ಶೇ.60 ರಷ್ಟು ಪಾಲು ಕೇಂದ್ರ ಸರ್ಕಾರದ್ದು. ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯ ಹೊನ್ನಾಳಿ, ಹರಿಹರ, ಚನ್ನಗಿರಿ, ಜಗಳೂರು, ಹರಪನಹಳ್ಳಿ ಪಟ್ಟಣಗಳಿಗೆ 102 ಕೋಟಿ, ಹಾಗೂ ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ನಿರಂತರ ವಿದ್ಯುತ್ ಪೂರೈಕೆ ಕಾಮಗಾರಿಗೆ 20 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಶೇ.60ರಷ್ಟು ಪಾಲು ಕೇಂದ್ರ ಸರ್ಕಾರದ್ದು. ಇದನ್ನು ಸರಿಯಾಗಿ ತಿಳಿದುಕೊಳ್ಳದೇ ದಾವಣಗೆರೆ ದಕ್ಷಿಣ ವಿಧಾನಸಭಾ
ಕ್ಷೇತ್ರದ ಶಾಸಕರು ಇದು ರಾಜ್ಯ ಸರ್ಕಾರದ ಅನುದಾನ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ ಬಿಡುಗಡೆಯಾಗಿರುವ ವಿದ್ಯುತ್ ಕಾಮಗಾರಿಗಳಿಗೆ 120 ಕೋಟಿ ಅನುದಾನದ ಕ್ರಿಯಾ
ಯೋಜನೆಗೆ 2016ರ ಸೆಪ್ಟಂಬರ್ 20ರಂದು ನಡೆದ ಜಿಲ್ಲಾ ವಿದ್ಯುತ್ ಸಮಿತಿ ಸಭೆಯಲ್ಲಿ ಸಮಿತಿ ಚೇರ್
ಮನ್ ಆಗಿ ಅನುಮೋದನೆ ನೀಡಿರುವುದು ನಾನೇ ವಿನಹ, ಶಾಮನೂರು ಶಿವಶಂಕರಪ್ಪನವರೇ ನೀವಲ್ಲ. ನಿಮಗೆ ಮಾಹಿತಿ ಸರಿಯಾಗಿ ಗೊತ್ತಿಲ್ಲದಿದ್ದರೆ ಅಧಿಕಾರಿಗಳನ್ನು ಕೇಳಿ ತಿಳಿದುಕೊಳ್ಳಿ. ಬಾಯಿ ಚಪಲಕ್ಕೆ ಏನೇನೋ ಮಾತನಾಡಬೇಡಿ ಎಂದು ಅವರು ಸಲಹೆ ನೀಡಿದ್ದಾರೆ.
ಸತ್ಯವನ್ನು ಮರೆಮಾಚುವುದು ಎಷ್ಟು ಸರಿ? ಜನರಿಗೆ ಸತ್ಯ ತಿಳಿಸಿ. ಕಳೆದ 30 ವರ್ಷಗಳಿಂದ ದಾವಣಗೆರೆ ಜನ ನೀವು ಹೇಳಿದ್ದನ್ನೇ ನಂಬುತ್ತಾ ಬಂದಿದ್ದಾರೆ ಎಂದು ಸಿದ್ದೇಶ್ವರ್ ಹೇಳಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಎಷ್ಟು ಅನುದಾನ ಕೇಂದ್ರ ಸರ್ಕಾರದ್ದಿದೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಿ. ಪಿ.ಬಿ. ರಸ್ತೆಯ ಅಭಿವೃದ್ದಿ ಕಾಮಗಾರಿಯಲ್ಲಿ ಕೇಂದ್ರ ರಸ್ತೆ ನಿಧಿ ಅನುದಾನ ಎಷ್ಟಿದೆ ಎಂಬುದು ನಿಮಗೆ ಗೊತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.