Advertisement

ಝಾಕಿರ್‌ ಗಡಿಪಾರು ವಿಚಾರ ಕುರಿತು ಚರ್ಚೆ

11:30 AM Sep 07, 2019 | mahesh |

ಮಾಸ್ಕೋ: ವಿವಾದಿತ ಧರ್ಮ ಪ್ರಚಾರಕ ಝಾಕಿರ್‌ ನಾಯ್ಕ ಗಡಿಪಾರು ವಿಚಾರ ಕುರಿತಂತೆ ಮಲೇಷ್ಯಾ ಪ್ರಧಾನಿ ಮಹತಿರ್‌ ಮೊಹಮ್ಮದ್‌ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದು, ನಾಯ್ಕ ಗಡಿಪಾರು ಮಾಡಲು ಆದೇಶಿಸುವಂತೆ ಮನವಿ ಮಾಡಿದ್ದಾರೆ.

Advertisement

ರಷ್ಯಾದ ವ್ಲಾಡಿವೊಸ್ಟೋಕ್‌ನಲ್ಲಿ ನಡೆದ ಈಸ್ಟರ್ನ್ ಎಕನಾಮಿಕ್‌ ಫೋರಂ ವೇಳೆ ಎರಡೂ ದೇಶದ ನಾಯಕರು ಮಾತುಕತೆ ನಡೆಸಿದ್ದು, ಈ ವೇಳೆ ನಾಯ್ಕ ವಿಚಾರ ಚರ್ಚೆಗೆ ಬಂದಿದೆ. ಇದೇ ವೇಳೆ ಜಮ್ಮು ಕಾಶ್ಮೀರದಲ್ಲಿ ಭಾರತದ ಕ್ರಮದ ಬಗ್ಗೆಯೂ ಮಹತಿರ್‌ಗೆ ಮೋದಿ ವಿವರಿಸಿದ್ದು, ಪರಿಣಾಮಕಾರಿ ಆಡಳಿತ ಮತ್ತು ಸಾಮಾಜಿಕ ನ್ಯಾಯ ಒದಗಿಸಲು ಇದು ಅತ್ಯಂತ ಅಗತ್ಯದ ನಿರ್ಧಾರವಾಗಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಜಪಾನ್‌ ಪ್ರಧಾನಿ ಶಿನ್ಜೋ ಅಬೆ ಅವರೊಂದಿಗೂ ಮೋದಿ ಮಾತುಕತೆ ನಡೆಸಿದ್ದಾರೆ.

ಭಾರತ-ರಷ್ಯಾದ ಸಂಬಂಧದಲ್ಲಿ ಹೊಸ ಶಕೆ: ಭಾರತ ಮತ್ತು ರಷ್ಯಾ ಸಂಬಂಧದಲ್ಲಿ ಹೊಸ ಶಕೆಯನ್ನು ನಾವು ಆರಂಭಿಸುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 5ನೇ ಈಸ್ಟರ್ನ್ ಎಕನಾಮಿಕ್‌ ಫೋರಂನಲ್ಲಿ ಮಾತನಾಡಿದ ಅವರು ಚೆನ್ನೈ ಮತ್ತು ವ್ಲಾಡಿವೋಸ್ಕೋಕ್‌ಗೆ ಸರಕು ಸಾಗಣೆ ಹಡಗುಗಳ ಸಂಚಾರ ಕುರಿತು ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿದ್ದು, ಈ ಹಡಗುಗಳು ಸಂಚಾರ ಆರಂಭಿಸುತ್ತಿದ್ದಂತೆಯೇ ಹೊಸ ಶಕೆಯೊಂದು ಆರಂಭವಾಗಲಿದೆ ಎಂದರು.

ಗಾಂಧಿ-ಟಾಲ್ಸ್ಟಾಯ್‌ ಸ್ನೇಹ: ರಷ್ಯಾದ ಲೇಖಕ ಲಿಯೋ ಟಾಲ್ಸ್ಟಾಯ್‌ ಹಾಗೂ ಮಹಾತ್ಮ ಗಾಂಧಿ ಪರಸ್ಪರ ಪ್ರಭಾವ ಹೊಂದಿದ್ದರು. ಇವರ ಸ್ನೇಹದ ಸ್ಫೂರ್ತಿಯನ್ನು ಎರಡೂ ದೇಶಗಳು ಪಡೆದು ದ್ವಿಪಕ್ಷೀಯ ಸಂಬಂಧವನ್ನು ಸುಧಾರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಾಂಧಿ 150ನೇ ಜಯಂತಿಯನ್ನು ಇಡೀ ವಿಶ್ವವು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪರಸ್ಪರ ದೇಶಗಳ ಅಭಿವೃದ್ಧಿಯಲ್ಲಿ ಭಾರತ ಮತ್ತು ರಷ್ಯಾ ಹೆಚ್ಚಿನ ಪಾಲುದಾರಿಕೆ ಹೊಂದಿರಬೇಕು ಎಂದು ಅವರು ಹೇಳಿದ್ದಾರೆ.

ಹಡಗು ನಿರ್ಮಾಣದಲ್ಲಿ ಜಂಟಿ ಸಂಸ್ಥೆ?

ಭಾರತ ಮತ್ತು ರಷ್ಯಾ ಹಡಗು ನಿರ್ಮಾಣ ಕ್ಷೇತ್ರದಲ್ಲಿ ಜಂಟಿ ಸಹಭಾಗಿತ್ವದ ಸಂಸ್ಥೆ ಸ್ಥಾಪಿಸುವ ಕುರಿತು ಚಿಂತನೆ ನಡೆಸಿದ್ದೇವೆ. ಎರಡೂ ದೇಶಗಳು ಸೇರಿ ಹಡಗುಗಳನ್ನು ನಿರ್ಮಾಣ ಮಾಡಬಹುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ. ಮೋದಿ ಜೊತೆಗೆ ಮಾತುಕತೆ ನಡೆಸಿದ ಅನಂತರದಲ್ಲಿ ಪುಟಿನ್‌ ಈ ಬಗ್ಗೆ ಮಾತನಾಡಿದ್ದು, ಭಾಗಶಃ ರಷ್ಯನ್ನರು ಈ ಹಡಗುಗಳನ್ನು ನಿರ್ಮಾಣ ಮಾಡುತ್ತಾರೆ, ಅದಕ್ಕೆ ಅಂತಿಮ ಸ್ಪರ್ಶವನ್ನು ಭಾರತೀಯರು ನೀಡುತ್ತಾರೆ ಎಂದು ಪುಟಿನ್‌ ಹೇಳಿದ್ದಾರೆ.

ರಷ್ಯಾಗೆ ಆವ್ಜೋ ದೋ ಸ್ವಿದಾನಿಯಾ ಎಂದ ಮೋದಿ

ಭಾರತ ಮತ್ತು ರಷ್ಯಾ ಮಧ್ಯೆ ಭಾಷಾ ಸಂಬಂಧವೂ ಇದೆ. ಎರಡೂ ದೇಶಗಳಲ್ಲಿ ಪರಸ್ಪರರನ್ನು ಬೀಳ್ಕೊಡುವಾಗ ಒಂದೇ ಭಾವದ ಶುಭಾಶಯಗಳನ್ನು ಹೇಳುತ್ತೇವೆ. ಗುಜರಾತಿ ಭಾಷೆಯಲ್ಲಿ ಆವ್ಜೋ ಎಂದರೆ ಅಂದರೆ ‘ಮತ್ತೆ ಸಿಗೋಣ’ ಎಂದರ್ಥ. ಅದೇ ರೀತಿ ರಷ್ಯಾದಲ್ಲಿ ದೋ ಸ್ವಿದಾನಿಯಾ ಎಂದರೆ ‘ಮುಂದಿನ ಭೇಟಿಯ ತನಕ’ ಎಂದು. ಹೀಗೆ ಹೇಳುತ್ತಲೇ ನಾನು ರಷ್ಯಾಗೆ ಆವ್ಜೋ ದೊ ಸ್ವಿದಾನಿಯಾ ಹೇಳುತ್ತಿದ್ದೇನೆ ಎಂದರು. ಈ ಮಾತಿಗೆ ಸಭೆಯಲ್ಲಿ ಸೇರಿದ್ದ ಜನರು ಭಾರೀ ಕರತಾಡನಗೈದರು. ಎರಡು ದಿನಗಳ ರಷ್ಯಾ ಭೇಟಿಯನ್ನು ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಗುರುವಾರ ಭಾರತಕ್ಕೆ ಮರಳಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next