Advertisement

ನನ್ನ ತಂದೆ ಬಗ್ಗೆ ಮಾತನಾಡಿ; ಜತೆಗೆ ರಫೇಲ್‌ ಬಗ್ಗೆಯೂ ಹೇಳಿ

12:35 AM May 10, 2019 | Team Udayavani |

“ಪ್ರಧಾನಿ ಮೋದಿಯವರೇ, ನಿಮಗೆ ನನ್ನ ಬಗ್ಗೆ ಅಥವಾ ರಾಜೀವ್‌ ಗಾಂಧಿಯವರ ಬಗ್ಗೆ ಮಾತನಾಡಬೇಕೆಂದು ಅನಿಸಿದರೆ ಖಂಡಿತಾ ಮಾತನಾಡಿ. ಆದರೆ, ಅದರ ಜೊತೆಗೆ ರಫೇಲ್‌ ಬಗ್ಗೆಯೂ ಮಾತನಾಡಿ.’ ಹೀಗೆಂದು ಪ್ರಧಾನಿ ಮೋದಿಗೆ ಸವಾಲು ಹಾಕಿರುವುದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ.

Advertisement

ರಾಜೀವ್‌ಗಾಂಧಿಯವರು ಭ್ರಷ್ಟಾಚಾರಿ ನಂ.1 ಆಗಿಯೇ ಮೃತಪಟ್ಟರು ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಹರ್ಯಾಣ ಹಾಗೂ ಮಧ್ಯಪ್ರದೇಶದಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರ ರ್ಯಾಲಿ ವೇಳೆ ರಾಹುಲ್‌ ಗಾಂಧಿ ಈ ರೀತಿ ಪ್ರತಿಕ್ರಿಯಿಸಿ ದ್ದಾರೆ. “ನನ್ನ ಬಗ್ಗೆ, ರಾಜೀವ್‌ ಗಾಂಧಿ ಬಗ್ಗೆ ಮಾತನಾಡಬೇಕೆಂದರೆ ಮಾತನಾಡಿ. ಆದರೆ, ಅದಕ್ಕೂ ಮೊದಲು ರಫೇಲ್‌ ಡೀಲ್‌ ಬಗ್ಗೆ, 2 ಕೋಟಿ ಉದ್ಯೋಗ ಸೃಷ್ಟಿಯ ಆಶ್ವಾಸನೆ ಬಗ್ಗೆ, ರೈತರ ಬೆಳೆಗೆ ಸೂಕ್ತ ಬೆಲೆ ನೀಡಿದ್ದೀರಾ ಎಂಬ ಬಗ್ಗೆ, ಜನರ ಬ್ಯಾಂಕ್‌ ಖಾತೆಗೆ 15 ಲಕ್ಷ ರೂ. ಹಾಕಿದ್ದೀರಾ ಎಂಬ ಬಗ್ಗೆಯೂ ಮಾತನಾಡಿ’ ಎಂದಿದ್ದಾರೆ ರಾಹುಲ್‌.

ಈ ದೇಶಕ್ಕೆ ಮೋದಿಯವರ ಕೊಡುಗೆ ಯೇನು ಗೊತ್ತೇ? ದಶಕಗಳಲ್ಲೇ ಅತ್ಯಧಿಕ ಮಟ್ಟಕ್ಕೇರಿದ ನಿರುದ್ಯೋಗ. ಆರಂಭದಲ್ಲಿ ಮೋದಿ ಅವರು ಮೇಕ್‌ ಇನ್‌ ಇಂಡಿಯಾ ಬಗ್ಗೆ ಮಾತನಾಡಿದರು. ನಂತರ ಸ್ಟಾರ್ಟ್‌ ಅಪ್‌ ಇಂಡಿಯಾ, ಸ್ಟಾಂಡ್‌ ಅಪ್‌ ಇಂಡಿಯಾ, ಸಿಟ್‌ಡೌನ್‌ ಇಂಡಿಯಾ ಎಂದರು. ಕೊನೆಗೆ ಪಕೋಡಾ ಮಾರಾಟ ಮಾಡಿ ಎನ್ನುವಲ್ಲಿಗೆ ಯೋಜನೆಗಳನ್ನು ಕೊನೆಗೊಳಿಸಿದರು ಎಂದೂ ರಾಹುಲ್‌ ವ್ಯಂಗ್ಯವಾಡಿದ್ದಾರೆ.

ಪೌರತ್ವ ವಿವಾದ: ರಾಹುಲ್‌ ನಿರಾಳ
ಪೌರತ್ವ ವಿವಾದದ ಸುಳಿಗೆ ಸಿಲುಕಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನಿರಾಳರಾಗಿದ್ದಾರೆ. ರಾಹುಲ್‌ ಬ್ರಿಟನ್‌ನ ಪೌರತ್ವ ಹೊಂದಿದ್ದು, ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರುವಂತೆ ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಗುರುವಾರ ಸುಪ್ರೀಂ ಕೋರ್ಟ್‌ ವಜಾ ಮಾಡಿದೆ.

ಅರ್ಜಿದಾರರ ವಾದ ತಿರಸ್ಕರಿಸಿದ ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ಪೀಠ, “ಯಾವುದೋ ಕಂಪನಿ ಯಾವುದೋ ಅರ್ಜಿಯಲ್ಲಿ ರಾಹುಲ್‌ ರಾಷ್ಟ್ರೀಯ ತೆಯನ್ನು ಬ್ರಿಟಿಷ್‌ ಎಂದು ಉಲ್ಲೇಖೀಸಿದಾಕ್ಷಣ, ಅವರು ಬ್ರಿಟನ್‌ ಪ್ರಜೆಯಾಗು ತ್ತಾರಾ’ ಎಂದು ಪ್ರಶ್ನಿಸಿದೆ. 2005-06ರಲ್ಲಿ ಯುಕೆ ಮೂಲದ ಕಂಪನಿಯೊಂದರ ವಾರ್ಷಿಕ ಲೆಕ್ಕಪತ್ರದಲ್ಲಿ ರಾಹುಲ್‌ರನ್ನು ಬ್ರಿಟನ್‌ನ ಪ್ರಜೆ ಎಂದು ನಮೂದಿ ಸಲಾಗಿದೆ. ಹೀಗಾಗಿ, ರಾಹುಲ್‌ ಭಾರತದ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಬೇಕು ಮತ್ತು ಈ ಕುರಿತು ನಿರ್ಧಾರವಾಗುವವರೆಗೂ ರಾಹುಲ್‌ ಹೆಸರನ್ನು ಮತದಾರರ ಪಟ್ಟಿಯಿಂದ ಕಿತ್ತುಹಾಕಬೇಕು ಎಂದು ಅರ್ಜಿದಾರರಾದ ಜೈ ಭಗವಾನ್‌ ಗೋಯಲ್‌ ಮತ್ತು ಸಿ.ಪಿ.ತ್ಯಾಗಿ ಮನವಿ ಮಾಡಿದ್ದರು. ಆದರೆ, ಇವರ ಮನವಿಗೆ ಸ್ಪಂದಿಸದ ನ್ಯಾಯಪೀಠ, ಅರ್ಜಿಯನ್ನೇ ವಜಾ ಮಾಡಿತು. ಇತ್ತೀಚೆಗಷ್ಟೇ, ಕೇಂದ್ರ ಗೃಹ ಸಚಿವಾಲಯವೂ ಪೌರತ್ವ ಕುರಿತು ವಿವರಣೆ ನೀಡುವಂತೆ ಸೂಚಿಸಿ ರಾಹುಲ್‌ಗೆ ನೋಟಿಸ್‌ ಜಾರಿ ಮಾಡಿತ್ತು.

Advertisement

ಇಂದು ಸಂಜೆಯೊಳಗೆ ನೋಟಿಸ್‌ಗೆ ಉತ್ತರ
ವಿವಾದಿತ ಹೇಳಿಕೆಯೊಂದಕ್ಕೆ ಸಂಬಂಧಿಸಿ ಚುನಾವಣಾ ಆಯೋಗದ ಶೋಕಾಸ್‌ ನೋಟಿಸ್‌ ಪಡೆದಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿಯವರಿಗೆ ನೋಟಿಸ್‌ಗೆ ಪ್ರತಿಕ್ರಿಯಿಸಲು ಶುಕ್ರವಾರದವರೆಗೆ ಕಾಲಾವಕಾಶ ಸಿಕ್ಕಿದೆ. ಕಳೆದ ಶುಕ್ರವಾರ ಮಧ್ಯಪ್ರದೇಶದಲ್ಲಿ ಮಾತನಾಡಿದ್ದ ರಾಹುಲ್‌, “ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರವು ಹೊಸ ಕಾನೂನೊಂದನ್ನು ಜಾರಿ ಮಾಡಿದ್ದು, ಬುಡಕಟ್ಟು ಜನರನ್ನು ಗುಂಡಿಕ್ಕುವುದು ಕೂಡ ಆ ಕಾನೂನಲ್ಲಿ ಸೇರಿದೆ’ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಆಯೋಗವು ನೋಟಿಸ್‌ ಜಾರಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಲು ಶುಕ್ರವಾರ ಸಂಜೆಯವರೆಗೆ ಕಾಲಾವಕಾಶ ನೀಡುವಂತೆ ರಾಹುಲ್‌ ಮನವಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next