Advertisement

ತಾಳಿಪಾಡಿಗುತ್ತು ಫ್ಯಾಮಿಲಿ ವೆಲಪೇರರ್‌ ಟ್ರಸ್ಟ್‌ ರಜತ ಮಹೋತ್ಸವ

12:52 PM Feb 21, 2017 | |

ಮುಂಬಯಿ: ತಾಳಿಪ್ಪಾಡಿಗುತ್ತು ಎಂಬುವುದು ಬಂಟ ಸಮುದಾಯದ ಹೆಮ್ಮೆಯ ಗುತ್ತುಮನೆತನವಾಗಿದೆ.  ಇದು ಕೇವಲ ಗುತ್ತುಮನೆತನಕ್ಕೆ ಸೀಮಿತವಾಗಿರದೆ ಎಲ್ಲ ಸಮಾಜ ಬಾಂಧವರಿಗೂ ಸಹಕರಿಸುತ್ತಿರುವುದು ಅಭಿನಂದನೀಯ. ತಾಳಿಪಾಡಿಗುತ್ತಿಗೆ ಸಂಬಂಧಪಟ್ಟವರು ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆ ಮಾಡುತ್ತಿದ್ದು, ಅದರಲ್ಲೂ ಆರೋಗ್ಯ ಕ್ಷೇತ್ರಕ್ಕೆ ಇವರ ಸೇವೆ ಗಮನೀಯವಾಗಿದೆ. ಈ ಮನೆತನದ ಹೆಚ್ಚಿನವರು ಉನ್ನತ ಶಿಕ್ಷಣವನ್ನು ಪಡೆದು ಡಾಕ್ಟರ್‌, ಎಂಜಿನಿಯರಿಂಗ್‌ ಕ್ಷೇತ್ರಗಳಲ್ಲದೆ, ಕ್ರೀಡೆ, ಚಿತ್ರರಂಗದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವುದು ಸಂತೋಷದ ಸಂಗತಿಯಾಗಿದೆ. ವಿವಿಧ ಕ್ಷೇತ್ರಗಳಿಂದ ದೇಶ-ವಿದೇಶಗಳಲ್ಲೂ ಮನೆತನದ ಸದಸ್ಯರು ಸಾಧನೆಯಲ್ಲಿ ತೊಡಗಿಸಿಕೊಂಡು ತಮ್ಮ ಹಿರಿಯರನ್ನು, ಕುಟುಂಬವನ್ನು ನೆನಪಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರು ನುಡಿದರು.

Advertisement

ಫೆ. 19 ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆದ ತಾಳಿಪಾಡಿಗುತ್ತು ಫ್ಯಾಮಿಲಿ ವೆಲ್ಫೆàರ್‌ ಟ್ರಸ್ಟ್‌ ಇದರ ರಜತ ಮಹೋತ್ಸವ ವಾರ್ಷಿಕ ಮಹಾಸಭೆ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, 25 ವರ್ಷಗಳ ಹಿಂದೆ ಹಿರಿಯರು ಇಂತಹ ಒಂದು ಅಮೂಲ್ಯ ಟ್ರಸ್ಟ್‌ನ್ನು ಸ್ಥಾಪಿಸಿ ಅದರ ಮುಖಾಂತರ ಸಮಾಜ ಸೇವೆಯಲ್ಲಿ ತೊಡಗಿರುವುದು ಮಾದರಿಯಾಗಿದೆ. ಭವಿಷ್ಯದಲ್ಲೂ ಟ್ರಸ್ಟ್‌ ಉತ್ತಮೋತ್ತಮ ಕಾರ್ಯಗಳಲ್ಲಿ ತೊಡಗಿಸಿ, ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿ-ಬೆಳೆಸುವಲ್ಲಿ ಮಹತ್ತರವಾದ ಕಾರ್ಯವನ್ನು ಮಾಡಲಿ ಎಂದು ನುಡಿದು ಶುಭಹಾರೈಸಿದರು.

ಅತಿಥಿಯಾಗಿ ಪಾಲ್ಗೊಂಡು ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ನ್ಯಾಯವಾದಿ ಉಪ್ಪೂರು ಶೇಖರ್‌ ಶೆಟ್ಟಿ ಅವರು ಮಾತನಾಡಿ, ತಾಳಿಪಾಡಿಗುತ್ತಿನ ಹಿರಿಯರು ಕಂಡ ಕನಸು ನಿಜವಾಗಿಯೂ ಅಭಿನಂದನೀಯವಾಗಿದೆ. ಸಮಾಜದ ಮೇಲಿನ ಕಾಳಜಿಯೇ ಅವರಿಗೆ ಇಂತಹ ಕಾರ್ಯಕ್ರಮಗಳನ್ನು ಮಾಡಲು ಪ್ರೇರಣೆಯಾಗಿರಬಹುದು. ನಾವು ಕೇವಲ ದೈವ-ದೇವರುಗಳಿಗೆ ಮಾತ್ರ ಸೀಮಿತವಾಗಿರದೆ ಸ್ವಲ್ಪ ಭಾಗವನ್ನು ಸಮಾಜಕ್ಕಾಗಿಯೂ ವಿನಿಯೋಗಿಸಬೇಕು. ಈ ತಾಳಿಪಾಡಿಗುತ್ತು ಫ್ಯಾಮಿಲಿ ಟ್ರಸ್ಟ್‌ ನವರು ಆರೋಗ್ಯ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆ ಅನುಕರಣೀಯವಾಗಿದೆ ಎಂದು ಹೇಳಿದರು.

ಇನ್ನೋರ್ವ ಅತಿಥಿ ಡಾ| ಸದಾನಂದ ವಿ. ಶೆಟ್ಟಿ ಅವರು ಮಾತನಾಡಿ, ತಾಳಿಪಾಡಿ ಗುತ್ತಿನವರು ಕಠಿಣ ಪರಿಶ್ರಮಿಗಳು. ಅದುವೇ ಅವರ ಅಭಿವೃದ್ಧಿಗೆ ಕಾರಣವಾಗಿದೆ. ಅವರು ಕೇವಲ ಅವರ ಕುಟುಂಬಕ್ಕೆ ಸೀಮಿತವಾಗಿರದೆ ಇತರ ಸಮಾಜದ ಆಶೋತ್ತರಗಳಿಗೆ ಸ್ಪಂದಿಸುವ ಗುಣವನ್ನು ಹೊಂದಿದ್ದಾರೆ. ಅದಕ್ಕಾಗಿ ಇಂತಹ ಟ್ರಸ್ಟ್‌ನ್ನು ನಿರ್ಮಿಸಿ ಸಮಾಜ ಸೇವೆಯನ್ನು ಮಾಡುತ್ತಿರುವುದು ವಿಶೇಷತೆಯಾಗಿದೆ. ಇಂದಿನ ಕಾರ್ಯಕ್ರಮವು ನಿಜವಾಗಿಯೂ ಅರ್ಥಪೂರ್ಣವಾಗಿದೆ  ಎಂದು ನುಡಿದರು.

ಟ್ರಸ್ಟ್‌ನ ಅಧ್ಯಕ್ಷೆ ಶೋಭಾ ಎಸ್‌. ಶೆಟ್ಟಿ ಅವರು ಸ್ವಾಗತಿಸಿ, ಸಂಸ್ಥೆಯ ಕಾರ್ಯವೈಖರಿಯನ್ನು ತಿಳಿಸಿ ಭವಿಷ್ಯದಲ್ಲಿ ಸಂಸ್ಥೆಯು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಸಲ್ಲಿಸಿ ಸುವರ್ಣ ಮಹೋತ್ಸವವನ್ನು ಆಚರಿಸುವಂತಾಗಲಿ ಎಂದು ಆಶಿಸಿದರು. ಟ್ರಸ್ಟ್‌ನ ಕಾರ್ಯದರ್ಶಿ ಪಿ. ವಿಶ್ವನಾಥ ಶೆಟ್ಟಿ ಅವರು ಟ್ರಸ್ಟ್‌ನ ಸಿದ್ಧಿ-ಸಾಧನೆಗಳನ್ನು ವಿವರಿಸಿದರು.

Advertisement

ಹಿರಿಯರಾದ ಬಿ. ಆರ್‌. ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಹಿರಿಯರು ಸಮಾಜಕ್ಕಾಗಿ ಮಾಡಿದ ಸೇವೆ ಅಪಾರವಾಗಿದೆ. ಅವರನ್ನು ಈ ಸಂದರ್ಭದಲ್ಲಿ ಮನಸಾರೆ ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ತುಳುನಾಡಿನಲ್ಲಿ ತಾಳಿಪಾಡಿಗುತ್ತಿಗೆ ಒಂದು ವಿಶೇಷ ಸ್ಥಾನಮಾನ, ಗೌರವವಿದೆ. ಅದಕ್ಕೆ ಕಾರಣ ನಮ್ಮ ಹಿರಿಯರು. ಒಂದೇ ಕುಟುಂಬ, ಒಂದೇ ಧ್ಯೇಯ ಎಂಬುವುದನ್ನು ಅರಿತು ನಾವೆಲ್ಲರು ಒಂದಾಗಿ, ಒಗ್ಗಟ್ಟಿನಿಂದ ಸಮಾಜ ಸೇವೆಯಲ್ಲಿ ತೊಡಗಿದ್ದೇವೆ. ದೈವ-ದೇವರುಗಳ ಕಾರ್ಯಗಳೊಂದಿಗೆ ಜನಸೇವೆಯನ್ನು ಮಾಡುವ ಮೂಲಕ ಸಂಸ್ಥೆಯ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಭವಿಷ್ಯದಲ್ಲೂ ಇದೇ ಮಾರ್ಗದಲ್ಲಿ ಸಂಸ್ಥೆ ನಡೆಯಲಿದೆ ಎಂದು ಹೇಳಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಾನೀಯರನ್ನು ಗೌರವಿಸಲಾಯಿತು. ಡಾ| ಶೋಭಾ ಶೆಟ್ಟಿ ಮತ್ತು ಇಂದಿರಾ ವೈ. ಶೆಟ್ಟಿ ಅವರು ಪ್ರಾರ್ಥನೆಗೈದರು. ಸಿ. ವಿ. ಶೆಟ್ಟಿ ಮತ್ತು  ತನ್ವಿ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ವಿಜಯ ಕುಮಾರ್‌ ಎಸ್‌. ಶೆಟ್ಟಿ ವಂದಿಸಿದರು. ಗಣ್ಯರು ಸಂಸ್ಥೆಯ ರಜತ ಸಂಭ್ರಮದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಪ್ರಾರಂಭದಲ್ಲಿ ಟ್ರಸ್ಟ್‌ನ ವಾರ್ಷಿಕ ಮಹಾಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಶೋಕ್‌ ಕೊಡ್ಯಡ್ಕ ಅವರ ತಂಡದಿಂದ ತುಳುನಾಡ ವೈಭವ ಪ್ರದರ್ಶನಗೊಂಡಿತು. ವೇದಿಕೆಯಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ ರಘುರಾಮ ಶೆಟ್ಟಿ ಪುಣೆ, ಚಂದ್ರಹಾಸ ಶೆಟ್ಟಿ, ರತ್ನಾಕರ ಎಸ್‌. ಶೆಟ್ಟಿ, ವಾಸು ಕೆ. ಶೆಟ್ಟಿ, ಉಪಾಧ್ಯಕ್ಷರುಗಳಾದ  ಸುಧಾಕರ ಎಸ್‌. ಶೆಟ್ಟಿ,  ಹರೀಶ್‌ ಶೆಟ್ಟಿ, ಭಾಸ್ಕರ ಎಂ. ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ಸುರೇಶ್‌ ಅಜಿಲ, ಧನ್‌ಪಾಲ್‌ ಬಿ. ಶೆಟ್ಟಿ, ಜತೆ ಕೋಶಾಧಿಕಾರಿ ಸುಕುಮಾರ್‌ ನೈಕ್‌, ಎಕ್ಸ್‌ ಅಫೀಶಿಯೋ ವಾಸು ಕೆ. ಶೆಟ್ಟಿ ಉಪಸ್ಥಿತರಿದ್ದರು. ಕುಟುಂಬದ ಸದಸ್ಯ ಬಾಂಧವರ ಉಪಸ್ಥಿತಿಯಲ್ಲಿ ಸಮಾರಂಭವು ಜರಗಿತು. 
ಚಿತ್ರ-ವರದಿ : ಸುಭಾಷ್‌  ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next