Advertisement

110 ದೇಶಗಳ ಧ್ವಜ ಗುರುತಿಸುವ ತಾಳಿಕೋಟೆ ಪೋರ ಅಥರ್ವ

11:57 AM Jan 25, 2020 | Naveen |

ತಾಳಿಕೋಟೆ: ಮಕ್ಕಳು ತೊದಲು ನುಡಿ ಕಲಿತು ಸಾಮಾನ್ಯ ಜ್ಞಾನದ ಮೂಲಕ ವಸ್ತುಗಳನ್ನು ಗುರುತಿಸಲು ಕನಿಷ್ಟ 4ರಿಂದ 5 ವರ್ಷ ಬೇಕು. ಆದರೆ ಇಲ್ಲೊಬ್ಬ ಎರಡೂವರೆ ವರ್ಷದ ಅಥರ್ವ ಸಂದೀಪ ಪರುತರಡ್ಡಿ 110 ದೇಶಗಳ ಧ್ವಜ ಗುರುತಿಸುತ್ತಾನೆ. ಅಲ್ಲದೇ ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್ನ ಯಂಗ್‌ ಅಚೀವರ್ಸ್‌ ದಾಖಲೆ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ದೇಶದ ಕೀರ್ತಿ ಹೆಚ್ಚಿಸಿದ್ದಾನೆ!

Advertisement

ತಾಳಿಕೋಟೆ ಪಟ್ಟಣದಲ್ಲಿರುವ ಕೆಪಿಸಿಸಿ ಸದಸ್ಯ ಬಿ.ಎಸ್‌. ಪಾಟೀಲ (ಯಾಳಗಿ)
ಅವರ ಮೊಮ್ಮಗ ಅಥರ್ವನ ಸಾಧನೆಗೆ ಎಂಥವರು ಬೆರಗಾಗುತ್ತಾರೆ. ಇತ್ತೀಚೆಗೆ ಲಂಡನ್‌ ಕಿಡ್ಸ್‌ ಯಂಗ್‌ ಸ್ಟಾರ್‌ನವರು ಚಿಕ್ಕ ವಯಸ್ಸಿನಲ್ಲಿ ಸಾಧನೆಯ ವಿಡಿಯೋ ಪರೀಕ್ಷೆ ಏರ್ಪಡಿಸಿದ್ದ ವೇಳೆ ಅಥರ್ವನ ತಾಯಿ ಅಕ್ಷತಾ ತಮ್ಮ ಮಗನಲ್ಲಿರುವ ಜ್ಞಾಪಕ ಶಕ್ತಿ ವಿಡಿಯೋ ತುಣುಕನ್ನು ಇಂಡಿಯನ್‌ ಬುಕ್‌ ಆಪ್‌ ರೆಕಾರ್ಡ್‌ನ ಯಂಗ್‌ ಅಚೀವರ್ಸ್‌ ವೆಬ್‌ಸೈಟ್‌ಗೆ ಅಪ್ಲೋಡ್‌ ಮಾಡಿದ್ದರು. ಚಿಕ್ಕ ವಯಸ್ಸಿನ ಮಕ್ಕಳಲ್ಲಿರುವ ಪ್ರತಿಭೆಯಲ್ಲಿ ಎರಡುವರೆ ವರ್ಷದ ಪೋರ ಅಥರ್ವನ ಜ್ಞಾಪಕ ಶಕ್ತಿ ಗುರುತಿಸಿ ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌ನ ಯಂಗ್‌ ಅಚೀವರ್ಸ್‌ ಪಟ್ಟಿಯಲ್ಲಿ ದಾಖಲಿಸಿ “ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌’ ಪ್ರಶಸ್ತಿ ಪತ್ರನೀಡಿ
ಗೌರವಿಸಿದೆ.

ಕಿಲಾಡಿ ಬಾಲಕ!: ಪುಟ್ಟ ಬಾಲಕ ಅಥರ್ವ 110 ದೇಶಗಳ ಬಾವುಟಗಳನ್ನು
ಗುರುತಿಸಬಲ್ಲ. ಅಲ್ಲದೇ ಸೌರಮಂಡಲದ ಗ್ರಹಗಳನ್ನು ಹೆಸರಿಸುತ್ತಾನೆ. ಅವುಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆಲ್ಲ ಥಟ್‌ ಅಂತ ಉತ್ತರಿಸುತ್ತಾನೆ. ಭಾರತ ದೇಶದ 15 ಪ್ರಧಾನ ಮಂತ್ರಿಗಳನ್ನು, 14 ರಾಷ್ಟ್ರಪತಿಗಳನ್ನು ಗುರುತಿಸಿ ಹೆಸರಿಸುತ್ತಾನೆ. ಭೂಪಟದಲ್ಲಿರುವ 7 ಖಂಡಗಳನ್ನು ಗುರುತಿಸುತ್ತಾನೆ. ಅಲ್ಲದೇ ಪ್ರಪಂಚದ 7 ಅದ್ಭುತಗಳನ್ನು ಭಾವಚಿತ್ರಗಳ ಮೂಲಕ ಗುರುತಿಸಿ ಅವು ಯಾವ ದೇಶದಲ್ಲಿವೆ ಎಂಬುದನ್ನು ಹೇಳುತ್ತಾನೆ. ಸದ್ಯ ತಂದೆ ತಾಯಿ ಜೊತೆ ದುಬೈನಲ್ಲಿ
ವಾಸವಾಗಿರುವ ಅಥರ್ವ, 45 ಸಂಗೀತ ವಾದ್ಯ ಗುರತಿಸುತ್ತಾನೆ. 24 ಖ್ಯಾತ ಸಂಶೋಧಕರು ಹಾಗೂ ಅವರ ಸಂಶೋಧನೆ ವಿವರಿಸುವ ರೀತಿ ಅಚ್ಚರಿ ಮೂಡಿಸುತ್ತದೆ.

ಭಾರತ ದೇಶದ ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಥಟ್‌ ಅಂತಾ ಉತ್ತರಿಸುವ ಸಾಮರ್ಥ್ಯ
ಹೊಂದಿರುವ ಅಥರ್ವ, 22 ಆಕಾರಗಳು ಹಾಗೂ 25 ಗಣಿತ ಚಿಹ್ನೆ ಗುರುತಿಸುತ್ತಾನೆ. ದುಬೈ ದೇಶದಲ್ಲಿ ವೃತ್ತಿಯಲ್ಲಿ ವೈದ್ಯರಾಗಿರುವ ಅಥರ್ವನ ತಂದೆ ಸಂದೀಪ ಪರುತರಡ್ಡಿ ಮೂಲತಃ ಬೆಂಗಳೂರಿನವರು. ಪತ್ನಿ ಅಕ್ಷತಾ ತಾಳಿಕೋಟೆ ಪಟ್ಟಣದಲ್ಲಿರುವ ಕೆಪಿಸಿಸಿ ಸದಸ್ಯ ಪಾಟೀಲ (ಯಾಳಗಿ) ಅವರ ಮಗಳು.

ಅಥರ್ವನ ಜ್ಞಾಪಕ ಶಕ್ತಿಗೆ ತಾಯಿ ಪ್ರೇರಣೆ ಕಾರಣ. ಚಿಕ್ಕ ಮಕ್ಕಳು ಹಟ ಮಾಡುವದು
ಸಹಜ. ಆದರೆ ಅವರ ಹಟಕ್ಕೆ ತಕ್ಕಂತೆ ವಿವರಣೆಯೊಂದಿಗೆ ಜ್ಞಾನ ತುಂಬುವದು ತಾಯಿ ಕೈಯಲ್ಲಿರುತ್ತದೆ. ಅಂತಹ ತಾಳ್ಮೆಯೊಂದಿಗೆ ಚಿಕ್ಕ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಿಸುವಂತಹ ಕಾರ್ಯ ಎಲ್ಲ ತಾಯಂದಿರು ಮಾಡಿದರೆ ಮಕ್ಕಳ ಭವಿಷ್ಯ ಉಜ್ವಲಗೊಳ್ಳುತ್ತದೆ.
.ಬಿ.ಎಸ್‌. ಪಾಟೀಲ (ಯಾಳಗಿ),
ಕೆಪಿಸಿಸಿ ಸದಸ್ಯರು, ತಾಳಿಕೋಟೆ

Advertisement

„ಜಿ.ಟಿ. ಘೋರ್ಪಡೆ

Advertisement

Udayavani is now on Telegram. Click here to join our channel and stay updated with the latest news.

Next