Advertisement

ತಾಳಿಕೋಟೆ ಬಂದ್‌ ಸಂಪೂರ್ಣ ಯಶಸ್ವಿ

12:05 PM Mar 04, 2020 | Naveen |

ತಾಳಿಕೋಟೆ: ಲವ್‌ ಯು ಪಾಕ್‌ ಆರ್ಮಿ ಎಂದು ಫೇಸ್‌ಬುಕ್‌ ಸಾಮಾಜಿಕ ಜಾಲತಾಣದಲ್ಲಿ ಪಾಕ್‌ ಆರ್ಮಿ ಪರ ಪ್ರೇಮ ವ್ಯಕ್ತಪಡಿಸಿದ್ದ ತಾಳಿಕೋಟೆಯ ಮೇರು ಬ್ಯಾಗವಾಟ್‌ ಎಂಬ ವ್ಯಕ್ತಿಯನ್ನು ಕೂಡಲೇ ಗಡಿಪಾರು ಮಾಡಬೇಕು ಹಾಗೂ ಸರ್ಕಾರದಿಂದ ಒದಗಿಸಿರುವ ಎಲ್ಲ ಸೌಲತ್ತು ಹಿಂಪಡೆಯಲು ಒತ್ತಾಯಿಸಿ ತಾಳಿಕೋಟೆ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಮಂಗಳವಾರ ಸ್ವಯಂ ಪ್ರೇರಿತ ಬಂದ್‌ ಕರೆ ಸಂಪೂರ್ಣ ಯಶಸ್ವಿಯಾಗಿದೆ.

Advertisement

ಬಂದ್‌ ಕರೆ ಹಿನ್ನೆಲೆ ಮಂಗಳವಾರ ಪಟ್ಟಣದಲ್ಲಿ ಬಹುತೇಕ ಎಲ್ಲ ಅಂಗಡಿ ಮುಂಗಟ್ಟು ಮುಚ್ಚಿದ್ದವು. ರೋಗಿಗಳಿಗೆ ತೊಂದರೆಯಾಗಬಾರದೆಂಬ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಹಾಗೂ ಔಷಧ ಅಂಗಡಿಗಳು ಮಾತ್ರ ತೆರೆದಿದ್ದವು. ಬಸ್‌ ಸಂಚಾರ ಎಂದಿನಂತೆ ಇದ್ದರೂ ಕೂಡಾ ಬಂದ್‌ ಕರೆ ನೀಡಿರುವ ವಿಷಯ ಅರಿತ ಗ್ರಾಮೀಣ ಭಾಗದ ಜನರು ಪಟ್ಟಣಕ್ಕೆ ಆಗಮಿಸಲಾರದ್ದರಿಂದ ಪಟ್ಟಣದ ಬಹುತೇಕ ಎಲ್ಲ ರಸ್ತೆಗಳು ಬೀಕೋ ಎನ್ನುತ್ತಿದ್ದವು.

ಪಟ್ಟಣದ ವಿಜಯಪುರ ಸರ್ಕಲ್‌ನಲ್ಲಿ ಬೆಳಗ್ಗೆ 10 ಗಂಟೆಗೆ ಜಮಾವಣೆಗೊಂಡ ಪಟ್ಟಣದ ನಾಗರಿಕರು ಪಾಕಿಸ್ತಾನ ವಿರುದ್ಧ ಹಾಗೂ ಪಾಕ್‌ ಆರ್ಮಿ ಪರ ಪ್ರೇಮ ತೋರಿದ ಮೇರು ಬ್ಯಾಗವಾಟ್‌ ವಿರುದ್ಧ ಘೋಷಣೆ ಕೂಗುತ್ತ ಅಂಬೇಡ್ಕರ್‌ ಸರ್ಕಲ್‌, ಕತ್ರಿ ಬಜಾರ್‌, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಸರ್ಕಲ್‌, ಮೂಲಕ ತಹಶೀಲ್ದಾರ್‌ ಕಚೇರಿ ಆವರಣಕ್ಕೆ ಆಗಮಿಸಿ ಸಭೆಯಾಗಿ ಮಾರ್ಪಟ್ಟಿತು.

ಪ್ರತಿಭಟನಾ ನೇತೃತ್ವ ವಹಿಸಿದ್ದ ವೇದಿಕೆಯ ಹಿರಿಯ ಸದಸ್ಯ ದೀನಕರ ಜೋಶಿ ಮಾತನಾಡಿ, ನಮ್ಮ ವೈರಿ ರಾಷ್ಟ್ರವಾಗಿರುವ ಪಾಕಿಸ್ತಾನದ ಪರ ಪ್ರೇಮ ತೋರುವ ಪ್ರಕರಣಗಳು ರಾಜ್ಯದಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವುದು ಕೆಟ್ಟ ಸಂಪ್ರದಾಯ. ನಮ್ಮ ಪುಣ್ಯ ಭರತಭೂಮಿ ಭಾರತದಲ್ಲಿ ಹುಟ್ಟಿ ಬೆಳೆದು ಇಲ್ಲಿಯ ಅನ್ನ, ನೀರು, ಗಾಳಿ ಸೇವಿಸಿರುವ ಕೆಲವು ಕುಚೇಷ್ಠಿಗಳು ಪಾಪಿ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಲಾರಂಬಿಸಿದ್ದಾರೆ. ಅಂತಹದ್ದೇ ಪ್ರಕರಣ ತಾಳಿಕೋಟೆ ಪಟ್ಟಣದಲ್ಲಿ ಕಾಲಿಟ್ಟಿರುವದು ಖೇದಕರ ಸಂಗತಿಯಾಗಿದೆ ಎಂದರು.

ನಮ್ಮ ಜೊತೆಯಲ್ಲಿಯೇ ಇದ್ದುಕೊಂಡು ಸಾದಾ ಮನುಷ್ಯನಂತೆ ವರ್ತಿಸುತ್ತಿದ್ದ ಮೇರು ಬ್ಯಾಗವಾಟ್‌ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಪಾಕ್‌ ಪರ ಪ್ರೇಮ ತೋರಿದ್ದಾನೆ. ಈ ವಿಷಯ ಹೊರಬೀಳುವ ಮುಂಚೆಯೇ ಪೊಲೀಸ್‌ ಇಲಾಖೆ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದ ಶ್ಲಾಘನೀಯ. ಇಂತಹ ಘಟನೆ ಪಟ್ಟಣದಲ್ಲಿ ಮರುಕಳಿಸಬಾರದೆಂಬ ಉದ್ದೇಶದೊಂದಿಗೆ ತಾಳಿಕೋಟೆ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಪಟ್ಟಣದಲ್ಲಿ ಬಂದ್‌ ಕರೆ ಜೊತೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.

Advertisement

ಈ ಪ್ರತಿಭಟನೆ ಯಾವುದೇ ಕೋಮಿನ ವಿರುದ್ಧ ಪ್ರತಿಭಟನೆಯಲ್ಲ, ಸೌಹಾರ್ದತೆಯಿಂದ ಕೂಡಿರುವ ತಾಳಿಕೋಟೆ ಪಟ್ಟಣದಲ್ಲಿ ಅಶಾಂತಿಗೆ ಕಾರಣನಾಗುತ್ತಿದ್ದ ಮೇರು ಬ್ಯಾಗವಾಟ್‌ ವಿರುದ್ಧವಾಗಿದೆ. ಈ ಬಂದ್‌ ಕರೆಗೆ ಎಲ್ಲ ಕೋಮಿನ ಜನರು ಸಹಕರಿಸಿ ಅಂಗಡಿ ಮುಂಗಟ್ಟು ಮುಚ್ಚಿ ಭಾಗವಹಿಸಿರುವುದು ಸೌಹಾರ್ದತೆ ಸಂಕೇತವಾಗಿದೆ. ದೇಶ ವಿರೋಧಿ ಚಟುವಟಿಕೆಯಲ್ಲಿ ಯಾರೇ ಭಾಗಿಯಾದರೂ ಅಂತವರಿಗೆ ನಮ್ಮ ನೆಲದಲ್ಲಿ ಒಂದೂ ಕ್ಷಣವೂ ಇರಲು ಅವಕಾಶ ನೀಡಬಾರದೆಂಬುದು ನಮ್ಮೆಲ್ಲರ ಹಕ್ಕೋತ್ತಾಯವಾಗಿದೆ ಎಂದರು.

ನ್ಯಾಯವಾದಿ ಗಂಗಾಧರ ಕಸ್ತೂರಿ ಮಾತನಾಡಿ, ಸಿಎಎ, ಎನ್‌ಆರ್‌ಸಿ ಜಾರಿಗೆ ಬಂದಾಗಿನಿಂದಲೂ ಇಂತಹ ದೇಶ ವಿರೋಧಿ  ಘೋಷಣೆ ಮತ್ತು ಪಾಕ್‌ ಪರ ಪ್ರೇಮ ತೋರಿಸುವಂತಹ ಪ್ರಕರಣಗಳು ನಡೆಯುತ್ತಿವೆ. ಸಿಎಎ, ಎನ್‌ಆರ್‌ಸಿ ಎಂಬುದು ಮೊತ್ತೂಂದು ದೇಶದಲ್ಲಿ ಹಿಂಸೆಗೆ ಒಳಪಟ್ಟು ನಮ್ಮ ದೇಶಕ್ಕೆ ಬಂದಂತಹ ವ್ಯಕ್ತಿಗಳಿಗೆ ಪೌರತ್ವ ನೀಡುವದ್ದಾಗಿದೆ ಹೊರತು ಇದು ಯಾವ ಮುಸಲ್ಮಾನರಿಗೂ ಧಕ್ಕೆ ತರುವಂತಹದ್ದಲ್ಲ ಎಂದರು.

ಇಂತಹ ಪ್ರತಿಭಟನೆ ಲಾಭ ಪಡೆಯುಲು ಕೆಲವರು ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ದೇಶ ದ್ರೋಹಿ ಮೇರು ಬ್ಯಾಗವಾಟ್‌ನನ್ನು ದೇಶದಿಂದಲೇ ಗಡಿಪಾರು ಮಾಡಬೇಕು. ಇಂತಹ ವ್ಯಕ್ತಿಗಳು ನಮ್ಮ ದೇಶದಲ್ಲಿ ಉಳಿದುಕೊಂಡರೇ ಮತ್ತೇ ಇಂತಹ ಘಟನೆಗಳು ಮರುಕಳಿಸುವುದರಲ್ಲಿ ಸಂದೇಹವಿಲ್ಲ ಎಂದರು. ರಾಘವೇಂದ್ರ ವಿಜಾಪುರ ಮನವಿ ಪತ್ರದ ಸಾರಾಂಶವನ್ನು ಓದಿದರು. ಮನವಿಯನ್ನು ತಹಶೀಲ್ದಾರ್‌ ಅನಿಲಕುಮಾರ ಢವಳಗಿ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.

ವೇದಿಕೆ ಮುಖಂಡರುಗಳಾದ ಕಾಶೀನಾಥ ಮುರಾಳ, ಕಾಶೀನಾಥ ಸಜ್ಜನ, ಪ್ರಕಾಶ ಹಜೇರಿ, ಮಾನಸಿಂಗ್‌ ಕೊಕಟನೂರ, ದ್ಯಾಮನಗೌಡ ಪಾಟೀಲ, ಕಾಶೀನಾಥ ಅರಳಿಚಂಡಿ, ಸಂಗಮೇಶ ಬಬಲೇಶ್ವರ, ಮಂಜು ಶೆಟ್ಟಿ, ಕಾಶೀನಾಥ ಮಂಬ್ರುಮಕರ, ಪ್ರಮೋದ ಅಗರವಾಲ, ವಿಜಯ ಕಲಾಲ್‌, ಪ್ರಭು ಬಿಳೇಭಾವಿ, ರವಿ ಕಟ್ಟಿಮನಿ, ರಾಘವೇಂದ್ರ ಚವ್ಹಾಣ, ಸುರೇಶ ಹಜೇರಿ, ಜಯಸಿಂಗ್‌ ಮೂಲಿಮನಿ, ಕಕ್ಕು ಸಾವಜಿ, ಸತ್ಯನಾರಾಯಣ ತಾಳಪಲ್ಲೆ ನೇತೃತ್ವ ವಹಿಸಿದ್ದರು. ತಾಳಿಕೋಟೆ ಬಂದ್‌ ಕರೆ ಹಿನ್ನೆಲೆ ಸಿಪಿಐ ಆನಂದ ವಾಘ್ಮೋಡೆ, ಪಿಎಸೈ ವಸಂತ ಬಂಡಗಾರ, ಮಡ್ಡಿ ಬಂದೋಬಸ್ತ್  ಕೈಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next